59 ವರ್ಷಗಳ ಬಳಿಕ ದ್ರಾವಿಡರ ನಾಡಿನಲ್ಲಿ ಕಾಂಗ್ರೆಸ್ ಇತಿಹಾಸ..!
ವಿಜಯ್ ನೇತೃತ್ವದ ಟಿವಿಕೆ ಸರ್ಕಾರವು ದ್ರಾವಿಡ ನಾಡಿನಲ್ಲಿ ಬೇರೂರಿದ್ದು, ಈ ನಡುವೆ ಕಾಂಗ್ರೆಸ್ ಪಕ್ಷ ಕೂಡ ಹೊಸದೊಂದು ಇತಿಹಾಸ ಬರೆಯಲು ಸಜ್ಜಾಗಿದೆ.
ತಮಿಳುನಾಡು ರಾಜಕಾರಣವು ಈ ಬಾರಿಯ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ದಿನಕ್ಕೊಂದು ಇತಿಹಾಸವನ್ನು ಸೃಷ್ಠಿಸುತ್ತಿದೆ. ವಿಜಯ್ ನೇತೃತ್ವದ ಟಿವಿಕೆ ಸರ್ಕಾರವು ದ್ರಾವಿಡ ನಾಡಿನಲ್ಲಿ ಬೇರೂರಿದ್ದು, ಈ ನಡುವೆ ಕಾಂಗ್ರೆಸ್ ಪಕ್ಷ ಕೂಡ ಹೊಸದೊಂದು ಇತಿಹಾಸ ಬರೆಯಲು ಸಜ್ಜಾಗಿದೆ.
ಒಂದಲ್ಲ , ಎರಡಲ್ಲ, ಬರೋಬ್ಬರಿ 59 ವರ್ಷಗಳ ಬಳಿಕ ಕಾಂಗ್ರೆಸ್ನ ಇಬ್ಬರು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಹೌದು..! ಡಿಎಂಕೆ ಪಕ್ಷದೊಂದಿಗೆ ಸುದೀರ್ಘ ವರ್ಷಗಳ ಮೈತ್ರಿಮಾಡಿಕೊಂಡಿದ್ದ ಕಾಂಗ್ರೆಸ್ , ಸಂಪುಟದಲ್ಲಿ ಸ್ಥಾನ ಪಡೆದಿರಲಿಲ್ಲ. ಕಳೆದ 59 ವರ್ಷಗಳಿಂದ ದ್ರಾವಿಡ ನಾಡಿನಲ್ಲಿ ಯಾವೊಬ್ಬ ಕಾಂಗ್ರೆಸ್ ನಾಯಕರಿಗೂ ಸಚಿವನಾಗುವ ಅವಕಾಶ ಕೂಡಿಬಂದಿರಲಿಲ್ಲ.
ಆದರೆ ಈ ಬಾರಿ ಟಿವಿಕೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್, ತನ್ನ ಇಬ್ಬರು ಶಾಸಕರಿಗೆ ಸಂಪುಟದಲ್ಲಿ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾಗಿದೆ. ಈ ಸಂಬಂಧ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ಶಾಸಕರುಗಳಾದ ರಾಜೇಶ್ ಕುಮಾರ್ ಮತ್ತು ಪಿ. ವಿಶ್ವನಾಥನ್ ಅವರುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ತಮಿಳುನಾಡಿನಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಜಯಭೇರಿ ಬಾರಿಸಿದ್ದ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಸರ್ಕಾರ ರಚನೆಗೆ ಮ್ಯಾಜಿಕ್ ನಂಬರ್ ಕೊರತೆ ಎದುರಿಸುತ್ತಿತ್ತು.
ಈ ಸಂದರ್ಭದಲ್ಲಿ ಡಿಎಂಕೆಯೊಂದಿಗಿನ ಮೈತ್ರಿ ತೊರೆದ ಕಾಂಗ್ರೆಸ್ ಪಕ್ಷವು ತನ್ನ ಐದು ಶಾಸಕರ ಬೆಂಬಲವನ್ನು ವಿಜಯ್ ಪಕ್ಷಕ್ಕೆ ನೀಡಿತ್ತು. ಇದಾದ ಬಳಿಕ ಇತರೆ ಶಾಸಕರ ಬೆಂಬಲದೊಂದಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ವಿಜಯ್,ಇದೀಗ ಕೊಟ್ಟ ಮಾತಿನಂತೆಯೇ ಎರಡು ಸಚಿವ ಸ್ಥಾನಗಳನ್ನು ಕಾಂಗ್ರೆಸ್ ನಾಯಕರಿಗೆ ಬಿಟ್ಟುಕೊಟ್ಟಿದ್ದಾರೆ.



