ಮ್ಯಾಟ್ರಿಮೋನಿ ‘ಡಾಕ್ಟರೇಟ್’ ವಂಚಕ: ಹುಡುಗಿ ನೋಡಲು ಬಂದು ಬ್ಯಾಂಕ್ ಬ್ಯಾಲೆನ್ಸ್ ಖಾಲಿ ಮಾಡಿದ ಚಾಣಾಕ್ಷ!
ಮ್ಯಾಟ್ರಿಮೋನಿ ಆ್ಯಪ್ ಮೂಲಕ ಯುವತಿಯ ಬಾಳಲ್ಲಿ ಪ್ರವೇಶಿಸಿದ ಕಿಡಿಗೇಡಿಯೊಬ್ಬ ಪಂಗನಾಮ ಹಾಕಿ ಎಸ್ಕೇಪ್ ಆಗಿದ್ದಾನೆ.

ಎಲ್ಲವೂ ಡಿಜಿಟಲ್ ಯುಗವೇ ಆಗಿರೋದ್ರಿಂದ ಮದುವೆಯಾಗೋಕೆ ಸಂಬಂಧ ಕೂಡ ಆ್ಯಪ್ಗಳ ಮೂಲಕವೇ ಹುಡುಕುವಂತಹ ಕಾಲವಿದು. ಮ್ಯಾಟ್ರಿಮೋನಿ, ಶಾದಿ. ಕಾಮ್ಗಳಂತಹ ಆ್ಯಪ್ಗಳ ಮೂಲಕ ಮದುವೆಯಾಗಿ ಸುಖೀ ಜೀವನ ನಡೆಸುತ್ತಿರುವ ಅನೇಕರು ನಮ್ಮ ನಡುವೆ ಇದ್ದಾರೆ. ಆದರೆ ರಾಜ್ಯ ರಾಜಧಾನಿ ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮ್ಯಾಟ್ರಿಮೋನಿ ಆ್ಯಪ್ ಮೂಲಕ ಯುವತಿಯ ಬಾಳಲ್ಲಿ ಪ್ರವೇಶಿಸಿದ ಕಿಡಿಗೇಡಿಯೊಬ್ಬ ಪಂಗನಾಮ ಹಾಕಿ ಎಸ್ಕೇಪ್ ಆಗಿದ್ದಾನೆ.
ಶಾದಿ.ಕಾಮ್ ಆ್ಯಪ್ನಲ್ಲಿ ಡಾ. ಪ್ರದೀಪ್ ಸೋಲೆಮನ್ ಎಂಬ ಪ್ರೊಫೈಲ್ ತೆರೆದಿದ್ದ ಈ ಜಗದ್ಕಿಲಾಡಿ, ಮೈಸೂರು ಹಾಗೂ ಬೆಂಗಳೂರು ಭಾಗದ ಯುವತಿಯರನ್ನು ವಂಚಿಸಿದ್ದಾನೆ ಎನ್ನಲಾಗಿದೆ. ಪಿಎಚ್ಡಿ ಪದವಿಧರನೆಂದು ಸುಳ್ಳು ಹೇಳಿ ಯುವತಿಯರನ್ನು ಪರಿಚಯ ಮಾಡಿಕೊಳ್ಳುವ ಈತ, ಬಳಿಕ ಮದುವೆಯಾಗುತ್ತೇನೆಂದು ನಂಬಿಸಿ ಲಕ್ಷಾಂತರ ಹಣ ದೋಚಿ ಎಸ್ಕೇಪ್ ಆಗುತ್ತಿದ್ದ ಎನ್ನಲಾಗಿದೆ. ಈತನ ಈ ಕಳ್ಳಾಟಕ್ಕೆ ತಾಯಿ ಕಲಾವತಿ ಎಂಬವರಸಾಥ್ ಕೂಡ ಇತ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಸಂಕಷ್ಟ! ಗ್ಯಾಸ್ ಸಿಲಿಂಡರ್ ಡೆಲಿವರಿ ವಿಳಂಬ
ಮೈಸೂರಿನಲ್ಲಿರುವ ಕುಟುಂಬವೊಂದು ಈತನ ಪ್ರೊಫೈಲ್ ನೋಡಿ ಮದುವೆ ಮಾಡಲು ನಿರ್ಧರಿಸಿತ್ತು. ಈತ ಕೂಡ ಮೈಸೂರಿನಲ್ಲಿ ಬಂಗಲೆಯೊಂದನ್ನು ಬಾಡಿಗೆಗೆ ಪಡೆದು ತನ್ನದೇ ಮನೆ ಎಂದು ನಂಬಿಸಿದ್ದ ಎನ್ನಲಾಗಿದೆ. ಯುವತಿಯ ಮನೆಯವರನ್ನು ತನ್ನ ವಿಶ್ವಾಸಕ್ಕೆ ತೆಗೆದುಕೊಂಡ ಬಳಿಕ ಒಂದು ದಿನ ತನ್ನ ಖಾತೆಯಲ್ಲಿ ಕೋಟ್ಯಂತರ ಹಣ ಸ್ಟ್ರಕ್ ಆಗಿದೆ. ಹಣ ವರ್ಗಾವಣೆ ಮಾಡಲು ಸಾಧ್ಯವಿಲ್ಲ ಎಂದಿದ್ದಾನೆ .
ತನಗೆ ತುರ್ತು ಹಣ ವರ್ಗಾವಣೆಯ ಅನಿವಾರ್ಯತೆ ಇದ್ದು, ಈಗ ನೀವು ನನ್ನ ಖಾತೆಗೆ ಹಣ ಹಾಕಿ. ಬಳಿಕ ಅದನ್ನು ಹಿಂದಿರಿಗಿಸುತ್ತೇನೆ ಎಂದು ನಂಬಿಸಿದ್ದಾನೆ. ಇದನ್ನೇ ನಂಬಿದ ಯುವತಿ ಕುಟುಂಬ ಲಕ್ಷಾಂತರ ಹಣವನ್ನು ಈತನ ಖಾತೆಗೆ ವರ್ಗಾಯಿಸಿದೆ. ಹಣ ಈತನ ಖಾತೆಗೆ ಬೀಳುತ್ತಿದ್ದಂತೆಯೇ ಪ್ರದೀಪ್, ಸಂಪರ್ಕಕ್ಕೆ ಸಿಗದೇ ತಲೆಮರೆಸಿಕೊಂಡಿದ್ದಾನೆ. ಈತನ ಕಳ್ಳಾಟ ಬೆಳಕಿಗೆ ಬರುತ್ತಿದ್ದಂತೆಯೇ, ಯುವತಿಯ ಪೋಷಕರು ಬೆಂಗಳೂರು ಆಡುಗೋಡಿ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ತನಿಖೆ ಆರಂಭಿಸಿರುವ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.



