ಐಎಎಸ್ ಅಧಿಕಾರಿಗಳ ಮಕ್ಕಳಿಗೆ ʼನೋ’ ಮೀಸಲಾತಿ: ಸುಪ್ರೀಂ ಕೋರ್ಟ್‌ನಿಂದ ಐತಿಹಾಸಿಕ ತೀರ್ಪು!

ಮೀಸಲಾತಿ ಎನ್ನುವುದು ತಲೆಮಾರಿನುದ್ದಕ್ಕೂ ಬರುವ ಆಸ್ತಿಯಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಪ್ರಶ್ನೆ ಎತ್ತಿದೆ.

ಪೋಷಕರು ಐಎಎಸ್​ ಅಧಿಕಾರಿಗಳಾಗಿದ್ದರೆ, ಅಂತವರ ಮಕ್ಕಳು ಮೀಸಲಾತಿ ಸೌಲಭ್ಯ ಬೇಕೆಂದು ಹೋರಾಡುವುದು ಸೂಕ್ತವಲ್ಲ. ಮೀಸಲಾತಿ ಎನ್ನುವುದು ತಲೆಮಾರಿನುದ್ದಕ್ಕೂ ಬರುವ ಆಸ್ತಿಯಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಪ್ರಶ್ನೆ ಎತ್ತಿದೆ. ಹಿಂದುಳಿದ ವರ್ಗದವರೇ ಆಗಿದ್ದರೂ ಅತ್ಯಂತ ಸಬಲ ಕುಟುಂಬಕ್ಕೆ ಸೇರಿದ್ದರೆ ಅಂತವರನ್ನು ಮೀಸಲಾತಿಯಿಂದ ಹೊರಗಿಡಬೇಕು ಎಂಬ ರಾಜ್ಯ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.

ರಾಜ್ಯದ ಕುರುಬ ಸಮುದಾಯಕ್ಕೆ ಸೇರಿದ ರಾಘವೇಂದ್ರ ಫಕೀರಪ್ಪ ಚಂದ್ರನಾವರ್ ಎಂಬವರು ಕೆಪಿಟಿಸಿಎಲ್​ ಅಸಿಸ್ಟಂಟ್​ ಇಂಜಿನಿಯರ್​ ಹುದ್ದೆಗೆ ಮೀಸಲಾತಿ ಅಡಿಯಲ್ಲಿ ನೇಮಕಗೊಂಡಿದ್ದರು. ಆದರೆ ಇವರ ಪೋಷಕರು ಸರ್ಕಾರಿ ನೌಕರರಾಗಿದ್ದು, ಕುಟುಂಬದ ಆದಾಯವೇ 8 ಲಕ್ಷ ಮೀರಿತ್ತು. ಆದಾಯದ ಮಿತಿ ಮೀರಿದ ಕಾರಣ ‘ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿಯು ಇವರು ಕೆನೆಪದರ ವ್ಯಾಪ್ತಿಗೆ ಬರುತ್ತಾರೆ ಎಂದು ಇವರ ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸಿತ್ತು. ಇದನ್ನು ಕರ್ನಾಟಕ ಹೈಕೋರ್ಟ್ ಕೂಡ ಎತ್ತಿಹಿಡಿದಿತ್ತು. ಅಭ್ಯರ್ಥಿಯು ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಶ್ರೀಮಂತರ ಮಕ್ಕಳಿಗೆ ಮೀಸಲಾತಿ ಏಕೆ ಬೇಕು ಎಂದು ಪ್ರಶ್ನಿಸಿದೆ.

ಇದನ್ನೂ ಓದಿ : ಮ್ಯಾಟ್ರಿಮೋನಿ ‘ಡಾಕ್ಟರೇಟ್’ ವಂಚಕ: ಹುಡುಗಿ ನೋಡಲು ಬಂದು ಬ್ಯಾಂಕ್ ಬ್ಯಾಲೆನ್ಸ್ ಖಾಲಿ ಮಾಡಿದ ಚಾಣಾಕ್ಷ!

ಕೆನೆಪದರಕ್ಕೆ ಸೇರಿದ ಕುಟುಂಬಗಳೂ ಮೀಸಲಾತಿಯನ್ನು ಪೀಳಿಗೆಯುದ್ದಕ್ಕೂ ಪಡೆಯುತ್ತಾ ಹೋದರೆ ಮೀಸಲಾತಿ ವ್ಯವಸ್ಥೆಯಿಂದ ನಮ್ಮ ದೇಶ ಹೊರಬರಲು ಸಾಧ್ಯವೇ ಇಲ್ಲ. ಇದರಿಂದ ಬಡವರ್ಗದವರಿಗೆ ಸಿಗಬೇಕಾದ ಅವಕಾಶ ಶ್ರೀಮಂತರಿಗೆ ದೊರಕಿದಂತೆ ಆಗುತ್ತದೆ. ಹೀಗಾಗಿ ಕೆನೆಪದರ ವ್ಯಾಪ್ತಿಗೆ ಬರುವವರ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಬೇಕು. ಅವರಿಗೆ ಸರ್ಕಾರದ ಯಾವುದೇ ಮೀಸಲಾತಿ ದೊರೆಯಬಾರದು ಎಂದು ಸುಪ್ರೀಂ ಕೊರ್ಟ್ ಅಭಿಪ್ರಾಯ ಪಟ್ಟಿದೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories