crop loan waiver : ರೈತರ ಸಾಲ ಮನ್ನಾ ಘೋಷಿಸಿದ ಸಿಎಂ ವಿಜಯ್ : ಯಾರಿಗೆ ಎಷ್ಟು ಲಾಭ, ಕರ್ನಾಟಕದಲ್ಲೂ ಮನ್ನಾ ಆಗುತ್ತಾ ?
ರೈತರು ಸಹಕಾರಿ ಬ್ಯಾಂಕುಗಳಲ್ಲಿ ಮಾಡಿರುವ ಸಾಲದ ಹೊರೆಯನ್ನು ಇಳಿಸುವ ಸಲುವಾಗಿ ತಮಿಳುನಾಡು ಸರಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಸದ್ಯ ತಮಿಳುನಾಡು ಸರಕಾರದ ಕ್ರಮ ದೇಶದಾದ್ಯಂತ ಸುದ್ದಿಯಾಗಿತ್ತು

ಬೆಂಗಳೂರು : ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ (TVK) ಸರಕಾರ ರೈತರ ಸಾಲ ಮನ್ನಾ ಘೋಷಣೆ ಮಾಡಿದೆ. ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅನ್ನದಾತರಿಗೆ ಭರ್ಜರಿ ಸಿಹಿ ಸುದ್ದಿಯನ್ನು ನೀಡಿದ್ದಾರೆ. ತಮಿಳುನಾಡು ರಾಜ್ಯದ ಸಣ್ಣ, ಅತಿ ಸಣ್ಣ ಹಾಗೂ ದೊಡ್ಡ ರೈತರ ಕೃಷಿ ಸಾಲವನ್ನು (crop loan waiver) ಮನ್ನಾ ಮಾಡುವ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಇದರ ಬೆನ್ನಲ್ಲೇ ಕರ್ನಾಟಕದಲ್ಲಿಯೂ ರೈತರ ಸಾಲ ಮನ್ನಾದ ಕುರಿತು ಚರ್ಚೆಗಳು ಶುರುವಾಗಿದೆ.
ರೈತರು ಸಹಕಾರಿ ಬ್ಯಾಂಕುಗಳಲ್ಲಿ ಮಾಡಿರುವ ಸಾಲದ ಹೊರೆಯನ್ನು ಇಳಿಸುವ ಸಲುವಾಗಿ ತಮಿಳುನಾಡು ಸರಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಸದ್ಯ ತಮಿಳುನಾಡು ಸರಕಾರದ ಕ್ರಮ ದೇಶದಾದ್ಯಂತ ಸುದ್ದಿಯಾಗಿತ್ತು. ಈ ಹಿಂದೆ ಕರ್ನಾಟಕದಲ್ಲಿಯೂ ಸರಕಾರ ರೈತರ ಸಾಲ ಹಾಗೂ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಿತ್ತು.
ಯಾವ ರೈತರ ಸಾಲ ಮನ್ನಾ ಆಗಲಿದೆ ?
ಸಿಎಂ ವಿಜಯ್ ಜೋಸೆಫ್ ನೇತೃತ್ವದ ಟಿವಿಕೆ ಸರಕಾರ ನೀಡಿರುವ ಪ್ರಕಟಣೆಯ ಪ್ರಕಾರ, 01 ಮೇ 2025 ರಿಂದ 28 ಫೆಬ್ರವರಿ 2026ರ ಅವಧಿಯಲ್ಲಿ ರೈತರು ಸಹಕಾರಿ ಬ್ಯಾಂಕುಗಳಿಂದ ಪಡೆದುಕೊಂಡಿರುವ ಬೆಳೆ ಸಾಲಗಳಿಗೆ (Cooperative Crop Loans) ಮಾತ್ರ ಈ ಮನ್ನಾ ಯೋಜನೆ ಅನ್ವಯವಾಗುತ್ತದೆ.
- ಅತಿ ಸಣ್ಣ ರೈತರಿಗೆ 100% ಸಾಲ ಮನ್ನಾ ಭಾಗ್ಯ (ಭೂಮಿ: 2.5 ಎಕರೆ ಅಥವಾ ಅದಕ್ಕಿಂತ ಕಡಿಮೆ)
- 2.5 ಎಕರೆ (1 ಹೆಕ್ಟೇರ್) ಅಥವಾ ಅದಕ್ಕಿಂತ ಕಡಿಮೆ ಕೃಷಿ ಭೂಮಿ ಹೊಂದಿದ್ದು, ಸ್ವತಃ ಸಾಗುವಳಿ ಮಾಡುತ್ತಿರುವ ಅತಿ ಸಣ್ಣ ರೈತರಿಗೆ ಸರ್ಕಾರ ಬೃಹತ್ ರಿಯಾಯಿತಿ ನೀಡಿದೆ.
- ₹50,000 ವರೆಗಿನ ಸಾಲ: ಶೇ. 100 ರಷ್ಟು ಸಂಪೂರ್ಣ ಮನ್ನಾ ಮಾಡಲಾಗುತ್ತದೆ. ರೈತರು ಒಂದು ಪೈಸೆಯನ್ನೂ ಕಟ್ಟಬೇಕಾಗಿಲ್ಲ.
- ₹50,001 ರಿಂದ ₹60,000 ವರೆಗಿನ ಸಾಲ: ₹40,000 ವರೆಗೆ ಮನ್ನಾ.
- ₹60,001 ರಿಂದ ₹70,000 ವರೆಗಿನ ಸಾಲ: ₹30,000 ವರೆಗೆ ಮನ್ನಾ.
- ₹70,001 ರಿಂದ ₹80,000 ವರೆಗಿನ ಸಾಲ: ₹20,000 ವರೆಗೆ ಮನ್ನಾ.
- ₹80,001 ರಿಂದ ₹1,00,000 ವರೆಗಿನ ಸಾಲ: ₹10,000 ವರೆಗೆ ಮನ್ನಾ.
- ₹1,00,000 ಕ್ಕಿಂತ ಹೆಚ್ಚಿನ ಸಾಲ: ಕೇವಲ ₹5,000 ಮಾತ್ರ ಮನ್ನಾ ಆಗಲಿದೆ.
ಸಣ್ಣ ರೈತರಿಗೆ ಸಿಗುವ ರಿಯಾಯಿತಿ ಎಷ್ಟು? (ಭೂಮಿ: 2.5 ರಿಂದ 5 ಎಕರೆ)
2.5 ಎಕರೆಯಿಂದ ಹಿಡಿದು 5 ಎಕರೆಯವರೆಗೆ ಭೂಮಿ ಹೊಂದಿರುವ ಸಣ್ಣ ರೈತರ ಸಾಲದ ಮೊತ್ತಕ್ಕೆ ಶೇ. 50 ರಷ್ಟು ರಿಯಾಯಿತಿ ಸೂತ್ರವನ್ನು ಅನ್ವಯಿಸಲಾಗಿದೆ.
- ₹50,000 ವರೆಗೆ ಸಾಲ ಪಡೆದಿದ್ದರೆ ಗರಿಷ್ಠ ಶೇ. 50 ರಷ್ಟು (ಅಂದರೆ ₹25,000) ಮಾತ್ರ ಮನ್ನಾ ಸಿಗಲಿದ್ದು, ಬಾಕಿ ಹಣವನ್ನು ರೈತರೇ ಪಾವತಿಸಬೇಕು.
- ₹50,001 ರಿಂದ ₹60,000 ವರೆಗಿನ ಸಾಲ: ₹20,000 ಮನ್ನಾ.
- ₹60,001 ರಿಂದ ₹70,000 ವರೆಗಿನ ಸಾಲ: ₹15,000 ಮನ್ನಾ.
- ₹70,001 ರಿಂದ ₹80,000 ವರೆಗಿನ ಸಾಲ: ₹10,000 ಮನ್ನಾ.
- ₹80,001 ರಿಂದ ₹1,00,000 ವರೆಗಿನ ಸಾಲ: ₹5,000 ಮನ್ನಾ.
- ₹1,00,000 ಕ್ಕಿಂತ ಹೆಚ್ಚಿನ ಸಾಲ: ಕೇವಲ ₹5,000 ಮಾತ್ರ ವಿನಾಯಿತಿ ಸಿಗಲಿದೆ.
ದೊಡ್ಡ ರೈತರಿಗೆ ಹಾಗೂ ಇತರೆ ಸಾಲಗಳಿಗೆ ಇರುವ ನಿಯಮಗಳೇನು ?
ದೊಡ್ಡ ರೈತರು (5 ಎಕರೆಗಿಂತ ಹೆಚ್ಚು): 5 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವ ದೊಡ್ಡ ರೈತರಿಗೆ ಸಾಲದ ಮೊತ್ತ ಎಷ್ಟೇ ಇದ್ದರೂ ಕೇವಲ ತಲಾ ₹5,000 ಮಾತ್ರ ಹಳೇ ಸಾಲದಿಂದ ಮನ್ನಾ ಮಾಡಲಾಗುತ್ತದೆ.
ವಾಣಿಜ್ಯ ಬ್ಯಾಂಕುಗಳ ಸಾಲ ಮನ್ನಾ ಇಲ್ಲ
ತಮಿಳುನಾಡು ಸರಕಾರ ಜಾರಿಗೆ ತಂದಿರುವ ರೈತರ ಸಾಲ ಮನ್ನಾ ಯೋಜನೆ ಕೇವಲ ರಾಜ್ಯದ ಸಹಕಾರಿ ಬ್ಯಾಂಕುಗಳಿಗೆ (Cooperative Banks) ಮಾತ್ರ ಸೀಮಿತವಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಇಂಡಿಯನ್ ಬ್ಯಾಂಕ್ನಂತಹ ಸಾರ್ವಜನಿಕ ವಲಯದ ಅಥವಾ ಇತರೆ ಖಾಸಗಿ ವಾಣಿಜ್ಯ ಬ್ಯಾಂಕ್ಗಳಿಂದ ಪಡೆದ ಸಾಲಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ.
ಬೆಳೆ ಸಾಲಕ್ಕಷ್ಟೆ ಸಾಲ ಮನ್ನಾ ಯೋಜನೆ :
ಕೃಷಿ ಭೂಮಿಯ ಮೇಲೆ ಟ್ರ್ಯಾಕ್ಟರ್ ಖರೀದಿ, ಬೋರ್ವೆಲ್ ಕೊರೆಯಿಸುವುದು ಅಥವಾ ಕೃಷಿ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಪಡೆದ ಇತರ ಯಾವುದೇ ಸಾಲಗಳಿಗೆ ಈ ಮನ್ನಾ ಅನ್ವಯಿಸುವುದಿಲ್ಲ. ಕೇವಲ ‘ಬೆಳೆ ಸಾಲ’ (Crop Loan) ಪಡೆದವರಿಗೆ ಮಾತ್ರ ಈ ಲಾಭ ಸಿಗಲಿದೆ.
tamilnadu cm Vijay announces crop loan waiver



