ಸೊಳ್ಳೆಗಳ ಕಾಟಕ್ಕೆ ಶೀಘ್ರದಲ್ಲೇ ಸಿಗಲಿದೆ ಬ್ರೇಕ್ : ಮಾಸ್ಕಿಟೋ ಸಂತತಿ ನಾಶಕ್ಕೆ ಅಮೆರಿಕದಲ್ಲಿ ಮಾಸ್ಟರ್ ಪ್ಲಾನ್
ಮನುಷ್ಯರಿಗೆ ಕಚ್ಚುವ ಹೆಣ್ಣು ಸೊಳ್ಳೆಗಳನ್ನೇ ಗುರಿಯಾಗಿಸಿ ಈ ಪ್ರಯೋಗ ನಡೆಸಲಾಗುತ್ತಿದೆ. ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ಕೃತಕ ಗಂಡು ಸೊಳ್ಳೆಗಳನ್ನು ಸೃಷ್ಠಿಸುತ್ತಿದ್ದಾರೆ. ಈ ಸೊಳ್ಳೆಗಳ ದೇಹಕ್ಕೆ ವೋಲ್ಬಾಚಿಯಾ ಎಂಬ ವಿಶೇಷ ಬ್ಯಾಕ್ಟೀರಿಯಾಗಳನ್ನು ಸೇರಿಸಲಾಗುತ್ತದೆ.
ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳೋದು ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ..? ಅದರಲ್ಲೂ ಮಳೆಗಾಲದಲ್ಲಿ ಸೊಳ್ಳೆ ಕಾಟ ತುಸು ಹೆಚ್ಚೇ ಇರುತ್ತದೆ. ಸೊಳ್ಳೆಗಳ ಕಚ್ಚುವಿಕೆಯಿಂದ ಆಗುವ ನೋವು ಒಂದೆಡೆಯಾದರೆ, ಅವುಗಳ ಕಡಿತದಿಂದ ಬರುವ ಕಾಯಿಲೆಗಳ ತಲೆನೋವು ಇನ್ನೊಂದು ಕಡೆ. ಈ ಎಲ್ಲದರ ನಡುವೆ ಜಗತ್ತನ್ನು ಕಾಡುತ್ತಿರುವ ಸೊಳ್ಳೆಗಳ ಕಾಟ ಮತ್ತು ಅವುಗಳಿಂದ ಹರಡುವ ಕಾಯಿಲೆಗಳಿಗೆ ಮುಕ್ತಿ ಹಾಡಲು ಐಟಿ ದೈತ್ಯ ‘ಗೂಗಲ್’ ಸಂಸ್ಥೆ ಈಗ ಜೈವಿಕ ತಂತ್ರಜ್ಞಾನದ ಮೊರೆ ಹೋಗಿದೆ . ಹೆಣ್ಣು ಸೊಳ್ಳೆಗಳ ಸಂತಾನೋತ್ಪತ್ತಿ ಸಾಮರ್ಥ್ಯವನ್ನೇ ಕುಂಠಿತಗೊಳಿಸುವ ವಿಶಿಷ್ಟ ಯೋಜನೆಯೊಂದನ್ನು ರೂಪಿಸಲಾಗಿದ್ದು, ಇದನ್ನು ಅಮೆರಿಕದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲು ಸಕಲ ಸಿದ್ಧತೆಗಳು ನಡೆದಿವೆ .
ಮನುಷ್ಯರಿಗೆ ಕಚ್ಚುವ ಹೆಣ್ಣು ಸೊಳ್ಳೆಗಳನ್ನೇ ಗುರಿಯಾಗಿಸಿ ಈ ಪ್ರಯೋಗ ನಡೆಸಲಾಗುತ್ತಿದೆ. ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ಕೃತಕ ಗಂಡು ಸೊಳ್ಳೆಗಳನ್ನು ಸೃಷ್ಠಿಸುತ್ತಿದ್ದಾರೆ. ಈ ಸೊಳ್ಳೆಗಳ ದೇಹಕ್ಕೆ ವೋಲ್ಬಾಚಿಯಾ ಎಂಬ ವಿಶೇಷ ಬ್ಯಾಕ್ಟೀರಿಯಾಗಳನ್ನು ಸೇರಿಸಲಾಗುತ್ತದೆ. ಮನುಷ್ಯರನ್ನು ಕಚ್ಚಿ ರೋಗ ಹರಡುವುದು ಕೇವಲ ಹೆಣ್ಣು ಸೊಳ್ಳೆಗಳು ಮಾತ್ರ ಆಗಿರುವುದರಿಂದ, ಈ ಕೃತಕ ಗಂಡು ಸೊಳ್ಳೆಗಳಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಇರುವುದಿಲ್ಲ .
ಲ್ಯಾಬ್ನಿಂದ ಬಿಡುಗಡೆಯಾದ ಈ ಗಂಡು ಸೊಳ್ಳೆಗಳು ಹೊರಗಿನ ಹೆಣ್ಣು ಸೊಳ್ಳೆಗಳೊಂದಿಗೆ ದೈಹಿಕ ಸಂಪರ್ಕ ಬೆಳೆಸುತ್ತವೆ . ಇದರ ಪರಿಣಾಮವಾಗಿ ಹೆಣ್ಣು ಸೊಳ್ಳೆಗಳು ಎಂದಿನಂತೆ ಮೊಟ್ಟೆಗಳನ್ನು ಇಡುತ್ತವೆಯಾದರೂ, ಆ ಮೊಟ್ಟೆಗಳು ಒಡೆದು ಮರಿಗಳು ಹೊರಬರುವುದಿಲ್ಲ . ಇದರಿಂದಾಗಿ ಸೊಳ್ಳೆಗಳ ಮುಂದಿನ ಪೀಳಿಗೆಯ ಬೆಳವಣಿಗೆ ಸಂಪೂರ್ಣವಾಗಿ ಸ್ಥಗಿತಗೊಂಡು, ಕೀಟಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತದೆ ಎಂಬುದು ವಿಜ್ಞಾನಿಗಳ ಲೆಕ್ಕಾಚಾರವಾಗಿದೆ.
Also Read: ಮತ್ತೆ ಏರಿದ ಪೆಟ್ರೋಲ್-ಡೀಸೆಲ್ ದರ: 10 ದಿನದಲ್ಲಿ 4ನೇ ಬಾರಿ ಬೆಲೆ ಶಾಕ್
ಇದೇ ರೀತಿಯ ಜೈವಿಕ ಪ್ರಯೋಗವನ್ನು ಈ ಹಿಂದೆ ಸಿಂಗಾಪುರದಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು . ಅಲ್ಲಿನ ಸರ್ಕಾರವು ಬ್ಯಾಕ್ಟೀರಿಯಾ ಯುಕ್ತ ಸೊಳ್ಳೆಗಳನ್ನು ಪರಿಸರಕ್ಕೆ ಬಿಡುವ ಮೂಲಕ ಸೊಳ್ಳೆಗಳ ಸಂತತಿಯನ್ನು ಯಶಸ್ವಿಯಾಗಿ ನಿಯಂತ್ರಿಸಿತ್ತು. ಇದೀಗ ಗೂಗಲ್ ಸಂಸ್ಥೆಯು ‘ಡಿಬಗ್’ ಎಂಬ ಬೃಹತ್ ಯೋಜನೆಯಡಿ ಸುಮಾರು 3.2 ಕೋಟಿ ಸೊಳ್ಳೆಗಳನ್ನು ಕ್ಯಾಲಿಫೋರ್ನಿಯಾದಲ್ಲಿ ಬಿಡುಗಡೆ ಮಾಡಲು ಅಲ್ಲಿನ ಸರ್ಕಾರದ ಅನುಮತಿ ಕೋರಿದೆ . ಮುಂದಿನ ಎರಡು ವರ್ಷಗಳಲ್ಲಿ ರೋಗಕಾರಕ ಕೀಟಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಈ ತಂತ್ರಜ್ಞಾನದ ಪ್ರಮುಖ ಗುರಿಯಾಗಿದೆ .
The mosquito menace will soon get a break Master plan in America to destroy mosquito populations



