ಮಂಡ್ಯ ಕಮಲ ನಾಯಕಿಗೆ ಹೈಕಮಾಂಡ್ ಮಣೆ: ಶೀಘ್ರದಲ್ಲೇ ಮಹತ್ವದ ಜವಾಬ್ದಾರಿ ಸಾಧ್ಯತೆ
ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಂಡ್ಯ ಕ್ಷೇತ್ರವು ಮೈತ್ರಿಕೂಟದ ಸೀಟು ಹಂಚಿಕೆಯಲ್ಲಿ ಜೆಡಿಎಸ್ ಪಾಲಾದಾಗ, ಸುಮಲತಾ ಅವರು ತಮ್ಮ ಪಟ್ಟು ಬಿಟ್ಟು ಬಿಜೆಪಿಯನ್ನು ಬೆಂಬಲಿಸಿದ್ದರು
ಮಾಜಿ ಸಂಸದೆ ಮತ್ತು ನಟಿ ಸುಮಲತಾ ಅಂಬರೀಷ್ ಅವರು ಎನ್‌ಡಿಎ (NDA) ಮೈತ್ರಿಕೂಟದ ಬೆಂಬಲದೊಂದಿಗೆ ರಾಜ್ಯಸಭಾ ಅಭ್ಯರ್ಥಿಯಾಗುವ ಸಾಧ್ಯತೆಗಳ ಕುರಿತು ಇತ್ತೀಚಿನ ದಿನಗಳಲ್ಲಿ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿರುವುದು ನಿಜ.
ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಂಡ್ಯ ಕ್ಷೇತ್ರವು ಮೈತ್ರಿಕೂಟದ ಸೀಟು ಹಂಚಿಕೆಯಲ್ಲಿ ಜೆಡಿಎಸ್ ಪಾಲಾದಾಗ, ಸುಮಲತಾ ಅವರು ತಮ್ಮ ಪಟ್ಟು ಬಿಟ್ಟು ಬಿಜೆಪಿಯನ್ನು ಬೆಂಬಲಿಸಿದ್ದರು. ಆ ವೇಳೆ ಅವರಿಗೆ ಹೈಕಮಾಂಡ್‌ನಿಂದ ಸೂಕ್ತ ಸ್ಥಾನಮಾನ ನೀಡುವ ಭರವಸೆ ಸಿಕ್ಕಿತ್ತು ಎನ್ನಲಾಗಿದೆ.
ಸುಮಲತಾ ಅಂಬರೀಷ್ ಅವರು ಅಧಿಕೃತವಾಗಿ ಬಿಜೆಪಿ ಸೇರಿದಾಗಿನಿಂದಲೂ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ದಕ್ಷಿಣ ಕರ್ನಾಟಕ ಭಾಗದಲ್ಲಿ, ವಿಶೇಷವಾಗಿ ಹಳೇ ಮೈಸೂರು ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಅವರ ವರ್ಚಸ್ಸನ್ನು ಬಳಸಿಕೊಳ್ಳಲು ಹೈಕಮಾಂಡ್ ಚಿಂತಿಸುತ್ತಿದೆ.
ರಾಜ್ಯಸಭೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಬಿಜೆಪಿ ಹೈಕಮಾಂಡ್ ಸದಾ ಅಚ್ಚರಿಯ ಹೆಸರುಗಳನ್ನು ಮುಂಚೂಣಿಗೆ ತರುತ್ತದೆ. ಪ್ರಭಾವಿ ಮಹಿಳಾ ನಾಯಕಿ ಹಾಗೂ ಚಿತ್ರರಂಗದ ಹಿನ್ನೆಲೆಯೂ ಇರುವುದರಿಂದ ಅವರ ಹೆಸರು ಪರಿಗಣನೆಗೆ ಬರುವ ಸಾಧ್ಯತೆ ದಟ್ಟವಾಗಿದೆ.
ಮಾಜಿ ಸಂಸದೆ ಹಾಗೂ ಹಿರಿಯ ನಟಿ ಸುಮಲತಾ ಅಂಬರೀಷ್ ಅವರ ರಾಜಕೀಯ ಜೀವನವು ಅತ್ಯಂತ ರೋಚಕ ಮತ್ತು ಮಹತ್ವದ ತಿರುವುಗಳಿಂದ ಕೂಡಿದೆ. ಕರ್ನಾಟಕ ರಾಜಕೀಯದಲ್ಲಿ, ವಿಶೇಷವಾಗಿ ಹಳೇ ಮೈಸೂರು ಭಾಗದ ಮಂಡ್ಯ ಜಿಲ್ಲೆಯಲ್ಲಿ ಅವರು ಪ್ರಭಾವಿ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.
ಸುಮಲತಾ ಅವರ ಪತಿ, ಸ್ಯಾಂಡಲ್‌ವುಡ್‌ನ ‘ರೆಬೆಲ್ ಸ್ಟಾರ್’ ಹಾಗೂ ಮಾಜಿ ಕೇಂದ್ರ ಸಚಿವ ಅಂಬರೀಷ್ ಅವರ ನಿಧನದ ನಂತರ ಅಭಿಮಾನಿಗಳು ಮತ್ತು ಬೆಂಬಲಿಗರ ಒತ್ತಾಯದ ಮೇರೆಗೆ ಸುಮಲತಾ ಅವರು ರಾಜಕೀಯಕ್ಕೆ ಪ್ರವೇಶಿಸಿದ್ದರು.
2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸುಮಲತಾ ಅವರು ಪಕ್ಷೇತರ (ಸ್ವತಂತ್ರ) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು . ಇಡೀ ದೇಶದ ಗಮನ ಸೆಳೆದಿದ್ದ ಈ ಹೈವೋಲ್ಟೇಜ್ ಕದನದಲ್ಲಿ ಅವರು ಭರ್ಜರಿ ಗೆಲುವು ಸಾಧಿಸಿ, ಮಂಡ್ಯ ಇತಿಹಾಸದಲ್ಲೇ ಮೊದಲ ಬಾರಿಗೆ ಪಕ್ಷೇತರ ಸಂಸದೆಯಾಗಿ ಸಂಸತ್ ಪ್ರವೇಶಿಸಿದರು. ಈ ಚುನಾವಣೆಯಲ್ಲಿ ಸುಮಲತಾ ಅವರಿಗೆ ಬಿಜೆಪಿ ಬಾಹ್ಯ ಬೆಂಬಲ ನೀಡಿತ್ತು ಎನ್ನೋದನ್ನ ಮರೆಯುವಂತಿಲ್ಲ.
ಐದು ವರ್ಷಗಳ ಕಾಲ ಮಂಡ್ಯ ಸಂಸದೆಯಾಗಿ ಜಿಲ್ಲೆಯ ನೀರಾವರಿ ಸಮಸ್ಯೆಗಳು, ಕೆಆರ್‌ಎಸ್ (KRS) ಜಲಾಶಯದ ಸುರಕ್ಷತೆ ಮತ್ತು ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತುವ ಮೂಲಕ ಸಕ್ರಿಯವಾಗಿದ್ದರು. ಲೋಕಸಭೆಯಲ್ಲಿ ಸ್ವತಂತ್ರ ಸದಸ್ಯೆಯಾಗಿದ್ದರೂ, ಕೇಂದ್ರದ ನರೇಂದ್ರ ಮೋದಿ ಸರ್ಕಾರದ ನೀತಿಗಳನ್ನು ಬೆಂಬಲಿಸುತ್ತಾ ಬಂದರು ಮತ್ತು 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕೃತವಾಗಿ ಬೆಂಬಲ ಘೋಷಿಸಿದರು.
2024ರ ಲೋಕಸಭಾ ಚುನಾವಣೆಯ ಹೊತ್ತಿಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡವು. ಸೀಟು ಹಂಚಿಕೆಯಲ್ಲಿ ಮಂಡ್ಯ ಕ್ಷೇತ್ರವು ಜೆಡಿಎಸ್ ಪಾಲಾಯಿತು ಆರಂಭದಲ್ಲಿ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡಲು ಸುಮಲತಾ ಅವರಿಗೆ ಇಷ್ಟವಿರಲಿಲ್ಲ. ಆದರೆ, ದೇಶದ ಹಿತದೃಷ್ಟಿಯಿಂದ ಮತ್ತು ಪ್ರಧಾನಿ ಮೋದಿ ಅವರ ನಾಯಕತ್ವವನ್ನು ಬಲಪಡಿಸಲು ಅವರು ತಮ್ಮ ಪಟ್ಟನ್ನು ಸಡಿಲಿಸಿ, ಸ್ಪರ್ಧೆಯಿಂದ ಹಿಂದೆ ಸರಿದರು. ಏಪ್ರಿಲ್ 2024 ರಲ್ಲಿ ಅವರು ಅಧಿಕೃತವಾಗಿ ಭಾರತೀಯ ಜನತಾ ಪಾರ್ಟಿ (BJP) ಸೇರಿದರು ಮತ್ತು ಮೈತ್ರಿಕೂಟದ ಅಭ್ಯರ್ಥಿಗಳ ಪರವಾಗಿ ರಾಜ್ಯಾದ್ಯಂತ ಪ್ರಚಾರ ಮಾಡಿದರು.
2024ರ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವನ್ನು ತ್ಯಾಗ ಮಾಡಿದಾಗ, ಬಿಜೆಪಿ ರಾಷ್ಟ್ರೀಯ ನಾಯಕರು ಅವರಿಗೆ ಗೌರವಯುತ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕಾಗಿ, ಅವರನ್ನು ಎನ್‌ಡಿಎ (NDA) ಮೈತ್ರಿಕೂಟದ ವತಿಯಿಂದ ರಾಜ್ಯಸಭೆಗೆ ಆಯ್ಕೆ ಮಾಡಬಹುದು ಎಂಬ ರಾಜಕೀಯ ಲೆಕ್ಕಾಚಾರಗಳು ದಟ್ಟವಾಗಿವೆ.



