ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ಅರ್ಜಿ ಸಲ್ಲಿಕೆ ಹೇಗೆ? ಏನೇನು ದಾಖಲೆಗಳು ಬೇಕು?
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಎಲ್ಲಾ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ‘ಸಂಪೂರ್ಣ ಉಚಿತ ಬಸ್ ಪಾಸ್ ನೀಡುವುದಾಗಿ ಮಹತ್ತರ ಘೋಷಣೆ ಮಾಡಿದ್ದಾರೆ.
ಬೆಂಗಳೂರು: ರಾಜ್ಯದ ವಿದ್ಯಾರ್ಥಿ ಸಮೂಹಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭರ್ಜರಿ ಕೊಡುಗೆಯೊಂದನ್ನು ನೀಡಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಎಲ್ಲಾ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ‘ಸಂಪೂರ್ಣ ಉಚಿತ ಬಸ್ ಪಾಸ್ ನೀಡುವುದಾಗಿ ಮಹತ್ತರ ಘೋಷಣೆ ಮಾಡಿದ್ದಾರೆ.
ಈಗಾಗಲೇ ಚಾಲ್ತಿಯಲ್ಲಿರುವ ‘ಶಕ್ತಿ ಯೋಜನೆ’ ಅಡಿಯಲ್ಲಿ ರಾಜ್ಯದ ಎಲ್ಲಾ ಮಹಿಳಾ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಇರುವುದರಿಂದ ಅವರು ಪ್ರತ್ಯೇಕವಾಗಿ ಪಾಸ್ ಪಡೆಯುವ ಅಗತ್ಯವಿಲ್ಲ. ಆದರೆ, ಮುಖ್ಯಮಂತ್ರಿಗಳ ಈ ಹೊಸ ಆದೇಶದಿಂದಾಗಿ ಇನ್ಮುಂದೆ ಶಾಲಾ-ಕಾಲೇಜುಗಳಿಗೆ ಹೋಗುವ ಬಾಲಕರಿಗೂ (ವಿದ್ಯಾರ್ಥಿಗಳಿಗೆ) ಬಸ್ ಪ್ರಯಾಣ ಸಂಪೂರ್ಣ ಉಚಿತವಾಗಲಿದೆ.
ಈ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಉಚಿತ ಪಾಸ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಯಾವೆಲ್ಲಾ ದಾಖಲೆಗಳು ಬೇಕಾಗುತ್ತವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಅರ್ಜಿ ಸಲ್ಲಿಕೆ ಹೇಗೆ?
ಉಚಿತ ಬಸ್ ಪಾಸ್ ಪಡೆಯುವ ಪ್ರಕ್ರಿಯೆಯಲ್ಲಿ ಯಾವುದೇ ದೊಡ್ಡ ಬದಲಾವಣೆ ಇರುವುದಿಲ್ಲ. ವಿದ್ಯಾರ್ಥಿಗಳು ಎಂದಿನಂತೆ ನಿಯಮಾನುಸಾರವೇ ಅರ್ಜಿ ಸಲ್ಲಿಸಬೇಕು. ಆದರೆ, ಪ್ರಮುಖ ಬದಲಾವಣೆ ಎಂದರೆ ಇನ್ಮುಂದೆ ಪಾಸ್ಗಾಗಿ ಯಾವುದೇ ಹಣವನ್ನು ಪಾವತಿಸಬೇಕಾಗಿಲ್ಲ.
ವಿದ್ಯಾರ್ಥಿಗಳು ತಮ್ಮ ಮೊಬೈಲ್ ಮೂಲಕ ಅಥವಾ ಯಾವುದೇ ಸೈಬರ್ ಸೆಂಟರ್, ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ‘ಸೇವಾಸಿಂಧು (Seva Sindhu) ಪೋರ್ಟಲ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಸೈಬರ್ ಸೆಂಟರ್ಗಳಲ್ಲಿ ಅರ್ಜಿ ಸಲ್ಲಿಸಲು 10 ರೂ. ಹಾಗೂ ಆನ್ಲೈನ್ ಸಲ್ಲಿಕೆಗಾಗಿ 100 ರೂ. ಸೇವಾ ಶುಲ್ಕ ಇರಲಿದೆ.
ಅಗತ್ಯವಿರುವ ಪ್ರಮುಖ ದಾಖಲೆಗಳು:
ಉಚಿತ ಬಸ್ ಪಾಸ್ಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಈ ಕೆಳಗಿನ ದಾಖಲೆಗಳು ಅತ್ಯಗತ್ಯವಾಗಿವೆ:
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ಪ್ರಸ್ತುತ ಸಾಲಿನ ಕಾಲೇಜು ಪ್ರವೇಶಾತಿ ರಶೀದಿ (Admission Receipt)
- ಎರಡು ಪಾಸ್ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರಗಳು
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ ನಂತರ, ವಿದ್ಯಾರ್ಥಿಗಳು ಆ ಅಪ್ಲಿಕೇಶನ್ ಫಾರ್ಮ್ ಅನ್ನು ಪ್ರಿಂಟ್ ತೆಗೆದುಕೊಂಡು, ತಾವು ಓದುತ್ತಿರುವ ವಿದ್ಯಾಸಂಸ್ಥೆಯ ಮುಖ್ಯಸ್ಥರಿಂದ (ಪ್ರಾಂಶುಪಾಲರು/ಮುಖ್ಯೋಪಾಧ್ಯಾಯರು) ಕಡ್ಡಾಯವಾಗಿ ಸಹಿ ಮತ್ತು ಸೀಲು ಹಾಕಿಸಿಕೊಳ್ಳಬೇಕು.
ಸಹಿ-ಸೀಲು ಹಾಕಿಸಿದ ಅರ್ಜಿಯನ್ನು ಬಿಎಂಟಿಸಿ (BMTC) ಪಾಸ್ ವಿಭಾಗದ ಅಧಿಕಾರಿಗಳು ಪರಿಶೀಲಿಸಿ ಅನುಮೋದನೆ ನೀಡುತ್ತಾರೆ. ಅರ್ಜಿ ಅನುಮೋದನೆಯಾದ ತಕ್ಷಣ ವಿದ್ಯಾರ್ಥಿಯ ಮೊಬೈಲ್ಗೆ ಸಂದೇಶ (SMS) ಬರುತ್ತದೆ. ಮೊಬೈಲ್ಗೆ ಮೆಸೇಜ್ ಬಂದ ನಂತರ ಮೆಜೆಸ್ಟಿಕ್, ಕೆಂಗೇರಿ, ಶಾಂತಿನಗರ, ಎಲೆಕ್ಟ್ರಾನಿಕ್ ಸಿಟಿ, ಹೊಸಕೋಟೆ ಹಾಗೂ ಆನೇಕಲ್ ಸೇರಿದಂತೆ ಪ್ರಮುಖ ಟಿಟಿಎಂಸಿ (TTMC) ಬಸ್ ನಿಲ್ದಾಣಗಳಲ್ಲಿ ಉಚಿತವಾಗಿ ಪಾಸ್ ಪಡೆದುಕೊಳ್ಳಬಹುದು.
ಯಾವೆಲ್ಲಾ ದರಗಳು ಮನ್ನಾ ಆಗಲಿವೆ?
ಮುಖ್ಯಮಂತ್ರಿಗಳ ಉಚಿತ ಪಾಸ್ ಆದೇಶ ಸಂಪೂರ್ಣ ಜಾರಿಗೆ ಬರುವ ಮುನ್ನ ಚಾಲ್ತಿಯಲ್ಲಿದ್ದ ಹಳೆಯ ದರ ಪಟ್ಟಿ ಹೀಗಿದೆ (ಇನ್ಮುಂದೆ ಈ ಎಲ್ಲಾ ಶುಲ್ಕಗಳು ಸಂಪೂರ್ಣ ಮನ್ನಾ ಆಗಲಿವೆ):
1 ರಿಂದ 7ನೇ ತರಗತಿ: ಉಚಿತ (ಕೇವಲ ರೂ 150 ಸೇವಾ ಶುಲ್ಕವಿತ್ತು)
8 ರಿಂದ 10ನೇ ತರಗತಿ (ಬಾಲಕರಿಗೆ): ಒಟ್ಟು ರೂ 750
11 ಮತ್ತು 12ನೇ ತರಗತಿ (ಪಿಯುಸಿ): ಒಟ್ಟು ರೂ 1,050
ಪದವಿ ಮತ್ತು ಸ್ನಾತಕೋತ್ತರ: ಒಟ್ಟು ರೂ 1,300
ತಾಂತ್ರಿಕ ಮತ್ತು ವೈದ್ಯಕೀಯ (Medical/Engineering): ಒಟ್ಟು ರೂ 1,830
ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ವಿದ್ಯಾರ್ಥಿಗಳಿಗೆ ಈ ಹಿಂದೆಯೂ ಸಹ ಪಾಸಿನ ದರ ಉಚಿತವಾಗಿದ್ದು, ಕೇವಲ 150 ರೂ. ಸೇವಾ ಶುಲ್ಕ ಮಾತ್ರ ಇತ್ತು. ಆದರೆ ಇನ್ಮುಂದೆ ಅವರೂ ಸಹ ಯಾವುದೇ ಶುಲ್ಕ ಭರಿಸುವ ಅಗತ್ಯವಿಲ್ಲ. ಮುಖ್ಯಮಂತ್ರಿಗಳ ಈ ಐತಿಹಾಸಿಕ ತೀರ್ಮಾನದಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ಆರ್ಥಿಕವಾಗಿ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.



