ಬಂತು OTP ಇಲ್ಲದೇ WhatsApp ಲಾಗಿನ್ ಸೌಲಭ್ಯ! ಹೊಸ ಫೀಚರ್ ಎಂಟ್ರಿ

ವಾಟ್ಸ್ಆಪ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಹೊಸ ಸೌಲಭ್ಯ ಲಭ್ಯವಾಗಲಿದೆ. OTP ನಮೂದಿಸದೇ ಮೊಬೈಲ್ ನೆಟ್‌ವರ್ಕ್ ಆಧಾರಿತ ದೃಢೀಕರಣದ ಮೂಲಕ ವೇಗವಾಗಿ ಲಾಗಿನ್ ಆಗುವ ವ್ಯವಸ್ಥೆ ಪರಿಚಯಿಸಲಾಗಿದೆ.

ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಮಹತ್ವದ ಬದಲಾವಣೆ ಬರಲಿದೆ. ಇನ್ನು ಮುಂದೆ ವಾಟ್ಸ್ಆಪ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಖಾತೆಗಳಿಗೆ ಲಾಗಿನ್ ಆಗಲು ಪ್ರತಿಸಾರಿ OTPಗಾಗಿ ಕಾಯುವ ಅಗತ್ಯ ಕಡಿಮೆಯಾಗಬಹುದು.

ವೊಡಾಫೋನ್ ಐಡಿಯಾ (Vi) ಮತ್ತು ಮೆಟಾ ಸಹಭಾಗಿತ್ವದಲ್ಲಿ ಹೊಸ Silent Mobile Verification (SMV) ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ. ಇದರ ಮೂಲಕ ಮೊಬೈಲ್ ನೆಟ್‌ವರ್ಕ್ ಆಧಾರದಲ್ಲಿ ಬಳಕೆದಾರರ ಸಂಖ್ಯೆಯನ್ನು ಸ್ವಯಂಚಾಲಿತವಾಗಿ ಪರಿಶೀಲಿಸಲಾಗುತ್ತದೆ.

ಸಾಮಾನ್ಯವಾಗಿ ಹೊಸ ಸಾಧನದಲ್ಲಿ ಲಾಗಿನ್ ಮಾಡುವಾಗ ಅಥವಾ ಖಾತೆಯನ್ನು ಮರುಸ್ಥಾಪಿಸುವ ವೇಳೆ OTP ನಮೂದಿಸಬೇಕಾಗುತ್ತದೆ. ಆದರೆ ಈ ಹೊಸ ವ್ಯವಸ್ಥೆಯಲ್ಲಿ ಪರಿಶೀಲನೆ ಪ್ರಕ್ರಿಯೆ ಹಿನ್ನಲೆಯಲ್ಲಿ (Background) ಪೂರ್ಣಗೊಳ್ಳುವುದರಿಂದ ಬಳಕೆದಾರರಿಗೆ OTP ಟೈಪ್ ಮಾಡುವ ಅವಶ್ಯಕತೆ ಇರುವುದಿಲ್ಲ.

ಕೆಲವೊಮ್ಮೆ OTP ಸಂದೇಶಗಳು ತಡವಾಗಿ ಬರುವುದು ಅಥವಾ ಸಿಗ್ನಲ್ ಸಮಸ್ಯೆಯಿಂದ ಸ್ವೀಕರಿಸಲು ಸಾಧ್ಯವಾಗದಿರುವುದು ಬಳಕೆದಾರರಿಗೆ ತೊಂದರೆ ಉಂಟುಮಾಡುತ್ತದೆ. ಹೊಸ ತಂತ್ರಜ್ಞಾನದಿಂದ ಈ ಸಮಸ್ಯೆಗಳನ್ನು ಬಹುತೇಕ ನಿವಾರಿಸಬಹುದಾಗಿದೆ.

SMV ಎಂಬುದು ಸುರಕ್ಷಿತ ನೆಟ್‌ವರ್ಕ್ ಆಧಾರಿತ ದೃಢೀಕರಣ ವಿಧಾನವಾಗಿದೆ. ಬಳಕೆದಾರರ ಮೊಬೈಲ್ ಸಂಖ್ಯೆಯನ್ನು ಟೆಲಿಕಾಂ ನೆಟ್‌ವರ್ಕ್ ಮೂಲಕವೇ ಪರಿಶೀಲಿಸುವುದರಿಂದ ಪ್ರತ್ಯೇಕವಾಗಿ ಕೋಡ್ ನಮೂದಿಸುವ ಅಗತ್ಯವಿರುವುದಿಲ್ಲ. ಇದರಿಂದ ಲಾಗಿನ್ ಪ್ರಕ್ರಿಯೆ ಇನ್ನಷ್ಟು ವೇಗವಾಗಿ ಮತ್ತು ಸುಲಭವಾಗಿ ನಡೆಯಲಿದೆ.

ಹೊಸ ಸಿಮ್ ಸಕ್ರಿಯಗೊಳಿಸುವುದು, ಖಾತೆ ಮರುಪಡೆಯುವುದು, ರೀ-ಲಾಗಿನ್ ಮಾಡುವುದು ಅಥವಾ ಮೊಬೈಲ್ ಸಂಖ್ಯೆಯ ದೃಢೀಕರಣದಂತಹ ಸಂದರ್ಭಗಳಲ್ಲಿ ಈ ವ್ಯವಸ್ಥೆ ಸಹಕಾರಿಯಾಗಲಿದೆ ಎಂದು ಕಂಪನಿ ತಿಳಿಸಿದೆ.

ಪ್ರಸ್ತುತ ಈ ಸೌಲಭ್ಯವನ್ನು Vi ಬಳಕೆದಾರರಿಗಾಗಿ ಪರಿಚಯಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇತರೆ ಟೆಲಿಕಾಂ ಸಂಸ್ಥೆಗಳೂ ಇದೇ ಮಾದರಿಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ಡಿಜಿಟಲ್ ಸೇವೆಗಳ ಬಳಕೆ ಮತ್ತಷ್ಟು ಸುಗಮವಾಗಲಿದೆ.

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories