ಕರ್ನಾಟಕದಲ್ಲಿ ಮತ್ತೆ ಶುರು ಸಂಪುಟ ಸರ್ಕಸ್​ : ಮುಂದಿನ ವಾರ ಸಂಪುಟ ವಿಸ್ತರಣೆ ಫಿಕ್ಸ್‌

ದೆಹಲಿಯ ಜಂತರ್​ಮಂತರ್​ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಸಂಪುಟ ವಿಸ್ತರಣೆಯ ಬಗ್ಗೆ ಯಾವುದೇ ಮಾತು ಬೇಡ ಎಂದು ಹೈಕಮಾಂಡ್​ ತಾಕೀತು ಮಾಡಿದ್ದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಯಾವುದೇ ರಾಜಕೀಯ ಬೆಳವಣಿಗೆ ಸಂಭವಿಸಿರಲಿಲ್ಲ.

ಬೆಂಗಳೂರು : ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ, ದೆಹಲಿಯಲ್ಲಿ ಕಾಕ್ರೋಚ್​ ಪ್ರತಿಭಟನೆಯ ಕಾವು ತಣ್ಣಗಾಗಿದೆ. ಆದರೆ ಇತ್ತ ರಾಜ್ಯ ರಾಜಕಾರಣದಲ್ಲಿ ಸಂಪುಟ ವಿಸ್ತರಣೆಯ ಕಾವು ಪುನಃ ಜೋರಾಗಿದೆ. ಜಿರಳೆ ಕಾಟದಿಂದಾಗಿ ಕಳೆದೊಂದು ವಾರದಿಂದ ಮೌನವಾಗಿದ್ದ ಸಂಪುಟ ವಿಸ್ತರಣೆ ಸರ್ಕಸ್​ ಇದೀಗ ಮತ್ತೆ ಮುನ್ನಲೆಗೆ ಬಂದಿದೆ .

ದೆಹಲಿಯ ಜಂತರ್​ಮಂತರ್​ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಸಂಪುಟ ವಿಸ್ತರಣೆಯ ಬಗ್ಗೆ ಯಾವುದೇ ಮಾತು ಬೇಡ ಎಂದು ಹೈಕಮಾಂಡ್​ ತಾಕೀತು ಮಾಡಿದ್ದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಯಾವುದೇ ರಾಜಕೀಯ ಬೆಳವಣಿಗೆ ಸಂಭವಿಸಿರಲಿಲ್ಲ. ಆದರೆ ಇದೀಗ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ನಾಳೆ ಅಥವಾ ನಾಡಿದ್ದು ದೆಹಲಿಯಲ್ಲಿ ಹೈಕಮಾಂಡ್​ ಜೊತೆಯಲ್ಲಿ ರಾಜ್ಯ ಕಾಂಗ್ರೆಸ್​ ನಾಯಕರು ಸಭೆ ನಡೆಸಲಿದ್ದು, ಈ ಸಭೆಯಲ್ಲಿ ರಾಜ್ಯ ಸಂಪುಟ ಸದಸ್ಯರ ಅಂತಿಮ ಪಟ್ಟಿ ಹೊರಬೀಳಲಿದೆ ಎನ್ನಲಾಗಿದೆ.

ಸಿಎಂ ಡಿ.ಕೆ.ಶಿವಕುಮಾರ್​, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್​ ಹೈಕಮಾಂಡ್​ ನಡುವೆ ಈ ಸಭೆಯಲ್ಲಿ ತಾಳಮೇಳ ಸರಿಯಾಗಿ ಕೂಡಿಬಂದಲ್ಲಿ, ಬುಧವಾರದಂದು ಸಂಪುಟ ವಿಸ್ತರಣೆ ಪ್ರಕ್ರಿಯೆ ರಾಜ್ಯದಲ್ಲಿ ನಡೆಯಲಿದೆ ಎಂದು ರಾಜಕೀಯ ಮೂಲಗಳು ತಿಳಿಸಿವೆ. ಸದ್ಯಕ್ಕಿರುವ ಮಾಹಿತಿಯ ಪ್ರಕಾರ, ಡಿ.ಕೆ. ಶಿವಕುಮಾರ್​ಗೆ ಸಂಪುಟ ವಿಸ್ತರಣೆಯಲ್ಲಿ ಈ ಹಿಂದೆ ಸಿದ್ದರಾಮ್ಯಯ ಅವರಿಗೆ ನೀಡಿದ್ದ ಸ್ವಾತಂತ್ರ್ಯವನ್ನು ಹೈಕಮಾಂಡ್​ ನೀಡುತ್ತಿಲ್ಲ ಎನ್ನಲಾಗಿದೆ.

ಈಗಾಗಲೇ ಸಚಿವರ ಸಂಭಾವ್ಯ ಪಟ್ಟಿಯ ವಿಚಾರದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳು ಮೂಡಿ ಬರ್ತಾ ಇದ್ದು ತಾರ್ಕಿಕ ಅಂತ್ಯಕ್ಕಾಗಿ ಹೈ ವೋಲ್ಟೇಜ್​ ಸಭೆ ಆಯೋಜಿಸಲಾಗಿದೆ. ಈಗಾಗಲೇ ಸಿಎಂ ಬದಲಾವಣೆಯ ರಿಸ್ಕ್​ ತೆಗೆದುಕೊಂಡಿರುವ ಕಾಂಗ್ರೆಸ್​ ಹೈಕಮಾಂಡ್​ ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ತನ್ನ ಮತಬ್ಯಾಂಕ್​ಗೆ ತೊಂದರೆಯಾಗದಂತೆ ಸಚಿವ ಸ್ಥಾನ ಹಂಚಿಕೆ ಮಾಡಬೇಕೆಂದು ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.

ಪ್ರಾದೇಶಿಕ ಅಸಮಾನತೆ, ವಿವಿಧ ಸಮುದಾಯಗಳಿಗೆ ತೃಪ್ತಿ ಆಗುವಂತಹ ಮದ್ದು ಅರಿಯಬೇಕು ಎಂಬುದು ಕಾಂಗ್ರೆಸ್​ ಹೈಕಮಾಂಡ್ ಲೆಕ್ಕಾಚಾರವಾಗಿದೆ. ಹೀಗಾಗಿ ಯಾರಿಗೆಲ್ಲಾ ಸಚಿವ ಸ್ಥಾನದ ಭಾಗ್ಯ ಒಲಿಯಲಿದೆ ? ಯಾರಿಗೆಲ್ಲ ನಿರಾಶೆ ಕಾದಿದೆ ಎಂಬುದಕ್ಕೆ ಬಹುತೇಕ ಮುಂದಿನ ವಾರ ತೆರೆ ಬೀಳಲಿದೆ.

cabinet expansion Karnataka in Next week

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »