ಅಡುಗೆ ಎಣ್ಣೆ ಪ್ಯಾಕಿಂಗ್ಗೆ ಹೊಸ ನಿಯಮ: ಗ್ರಾಹಕರಿಗೆ ಬೆಲೆ ಹೋಲಿಕೆ ಇನ್ನು ಸುಲಭ; ಕಂಪನಿಗಳ ಆಟಕ್ಕೆ ಕೇಂದ್ರದ ಬ್ರೇಕ್!
ಇನ್ಮುಂದೆ ಅಡುಗೆ ಎಣ್ಣೆ ತಯಾರಕರು ಅಥವಾ ಪ್ಯಾಕೇಜರ್ಸ್ ತಮಗೆ ಇಷ್ಟ ಬಂದ ಗಾತ್ರ ಹಾಗೂ ಪ್ರಮಾಣದಲ್ಲಿ ತೈಲವನ್ನು ಮಾರಾಟ ಮಾಡುವಂತಿಲ್ಲ.

ದೇಶದ ಗ್ರಾಹಕರ ಹಿತರಕ್ಷಣೆ ಮತ್ತು ಮಾರುಕಟ್ಟೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಅಡುಗೆ ಎಣ್ಣೆ ತಯಾರಕರು ಅಥವಾ ಪ್ಯಾಕೇಜರ್ಸ್ ತಮಗೆ ಇಷ್ಟಬಂದ ಗಾತ್ರ ಹಾಗೂ ಪ್ರಮಾಣದಲ್ಲಿ ತೈಲವನ್ನು ಮಾರಾಟ ಮಾಡುವಂತಿಲ್ಲ. ಖಾದ್ಯ ತೈಲಗಳ ಪ್ಯಾಕಿಂಗ್ಗಾಗಿ ಕೇಂದ್ರ ಸರ್ಕಾರವು ಹೊಸ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು ಜಾರಿಗೆ ತಂದಿದ್ದು, ನಿರ್ದಿಷ್ಟಪಡಿಸಿದ 9 ಅಳತೆಗಳಲ್ಲಿ ಮಾತ್ರ ಎಣ್ಣೆ ಮಾರಾಟ ಮಾಡಲು ಕಡ್ಡಾಯಗೊಳಿಸಿದೆ.
ಈ ಹೊಸ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಎಣ್ಣೆ ತಯಾರಕರು, ಆಮದುದಾರರು ಮತ್ತು ಪ್ಯಾಕ್ ಮಾಡುವ ಸಂಸ್ಥೆಗಳಿಗೆ ಕೇಂದ್ರ ಸರ್ಕಾರವು ಮೂರು ತಿಂಗಳ ಗಡುವನ್ನು ವಿಧಿಸಿದೆ. ಈ ಅವಧಿಯೊಳಗೆ ಎಲ್ಲಾ ಕಂಪನಿಗಳು ಹೊಸ ನಿಯಮಕ್ಕೆ ತಕ್ಕಂತೆ ತಮ್ಮ ಉತ್ಪಾದನೆ ಮತ್ತು ಪ್ಯಾಕಿಂಗ್ ವ್ಯವಸ್ಥೆಯನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ.
ಪರಿಷ್ಕೃತ ನಿಯಮದ ಪ್ರಕಾರ, ಅಡುಗೆ ಎಣ್ಣೆಯನ್ನು ಕೇವಲ 200 ಗ್ರಾಂ, 500 ಗ್ರಾಂ, 1 ಲೀಟರ್/ಕೆಜಿ, 2 ಲೀಟರ್/ಕೆಜಿ, 3 ಲೀಟರ್/ಕೆಜಿ, 4 ಲೀಟರ್/ಕೆಜಿ, 5 ಲೀಟರ್/ಕೆಜಿ, 15 ಲೀಟರ್/ಕೆಜಿ ಮತ್ತು 20 ಲೀಟರ್/ಕೆಜಿ ಪ್ಯಾಕೆಟ್ ಅಥವಾ ಡಬ್ಬಿಗಳಲ್ಲಿ ಮಾತ್ರ ಮಾರಾಟ ಮಾಡಬಹುದು. ಗ್ರಾಹಕರು ಹೆಚ್ಚಾಗಿ ಬಳಸುವ ಪಾಮ್ ಆಯಿಲ್, ಸೂರ್ಯಕಾಂತಿ, ಸೋಯಾಬೀನ್, ಸಾಸಿವೆ, ಶೇಂಗಾ ಹಾಗೂ ಜೋಳದ ಎಣ್ಣೆ ಸೇರಿದಂತೆ ಎಲ್ಲಾ ಪ್ರಮುಖ ಖಾದ್ಯ ತೈಲಗಳಿಗೆ ಈ ಆದೇಶ ಅನ್ವಯವಾಗುತ್ತದೆ. ಆದರೆ, ಅತ್ಯಂತ ಸಣ್ಣ ಪ್ರಮಾಣದ ಅಂದರೆ 200 ಎಂಎಲ್ಗಿಂತ ಕಡಿಮೆ ಇರುವ ಸಾಚೆ ಪ್ಯಾಕೆಟ್ಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ.



