ಕೋಟ: ಹಪ್ಪಳದ ಮೆಷಿನ್ನಲ್ಲಿ ಸಿಲುಕಿ ಯುವತಿಯ ಬೆರಳು ಕಟ್; ಮಾಲೀಕನ ನಿರ್ಲಕ್ಷ್ಯದ ವಿರುದ್ಧ ಪ್ರಕರಣ ದಾಖಲು
ಗಾಯಗೊಂಡ ಯುವತಿಯನ್ನು ಯಡಾಡಿ ಮತ್ಯಾಡಿ ನಿವಾಸಿ ರಶ್ಮಿ (32) ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಕಾರ್ಖಾನೆಯ ಮಾಲೀಕ ಸಂಜೀವ ಕುಲಾಲ್ ಎಂಬುವವರ ವಿರುದ್ಧ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಟ: ತರಬೇತಿ ನೀಡದೆ ಬಲವಂತವಾಗಿ ಯಂತ್ರದಲ್ಲಿ ಕೆಲಸ ಮಾಡಲು ಹೇಳಿದ ಮಾಲೀಕನ ನಿರ್ಲಕ್ಷ್ಯದಿಂದಾಗಿ ಯುವತಿಯೊಬ್ಬರು ತನ್ನ ಬಲಗೈ ತೋರುಬೆರಳನ್ನು ಕಳೆದುಕೊಂಡಿರುವ ದಾರುಣ ಘಟನೆ ಕುಂದಾಪುರ ತಾಲೂಕಿನ ಯಡಾಡಿ ಮತ್ಯಾಡಿ ಗ್ರಾಮದಲ್ಲಿ ನಡೆದಿದೆ. ಗಾಯಗೊಂಡ ಯುವತಿಯನ್ನು ಯಡಾಡಿ ಮತ್ಯಾಡಿ ನಿವಾಸಿ ರಶ್ಮಿ (32) ಎಂದು ಗುರುತಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕಾರ್ಖಾನೆಯ ಮಾಲೀಕ ಸಂಜೀವ ಕುಲಾಲ್ ಎಂಬುವವರ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು ?
ದೂರಿನ ವಿವರಗಳ ಪ್ರಕಾರ, ರಶ್ಮಿ ಅವರು ಕಳೆದ ಒಂದು ವರ್ಷದಿಂದ ಯಡಾಡಿ ಮತ್ಯಾಡಿ ಗ್ರಾಮದ ‘ಸಚಿ ಫುಡ್ ಪ್ರೊಡಕ್ಟ್ಸ್’ ಫ್ಯಾಕ್ಟರಿಯಲ್ಲಿ ನರ್ಸರಿ ಮತ್ತು ಬಿಲ್ಲಿಂಗ್ ಕೆಲಸ ಮಾಡಿಕೊಂಡಿದ್ದರು. ಏಪ್ರಿಲ್ 6 ರಂದು ಬೆಳಿಗ್ಗೆ 9:30 ರ ಸುಮಾರಿಗೆ ಮಾಲೀಕ ಸಂಜೀವ ಕುಲಾಲ್ ಅವರು ರಶ್ಮಿ ಅವರಿಗೆ ಹಪ್ಪಳ ತಯಾರಿಸುವ ಯಂತ್ರದಲ್ಲಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ.
“ನನಗೆ ಹಪ್ಪಳದ ಮೆಷಿನ್ನಲ್ಲಿ ಕೆಲಸ ಮಾಡಲು ಬರುವುದಿಲ್ಲ” ಎಂದು ರಶ್ಮಿ ನಿರಾಕರಿಸಿದರೂ, “ಕೆಲಸಕ್ಕೆ ಬಂದ ಮೇಲೆ ಹೇಳಿದ ಕೆಲಸ ಮಾಡಬೇಕು” ಎಂದು ಮಾಲೀಕರು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಕೋಟ: ಮೊಳಹಳ್ಳಿಯಲ್ಲಿ ಇಸ್ಪೀಟು ಜುಗಾರಿ ಅಡ್ಡೆಗೆ ಪೊಲೀಸರ ದಿಢೀರ್ ದಾಳಿ; ಆರು ಮಂದಿ ಅರೆಸ್ಟ್
ಮೆಷಿನ್ನಲ್ಲಿ ಸಿಲುಕಿದ ಕೈ – ಬೆರಳು ಕಟ್ !
ಕಾರ್ಖಾನೆಯ ಮಾಲೀಕರು ಒತ್ತಡ ಹೇರಿದ ಹಿನ್ನೆಲೆಯಲ್ಲಿ ರಶ್ಮಿ ಅವರು ಹಪ್ಪಳದ ಯಂತ್ರ ಆನ್ ಮಾಡಿ ಹಿಟ್ಟು ಹಾಕಲು ಮುಂದಾಗಿದ್ದಾರೆ. ಆದರೆ, ಯಂತ್ರದ ಸರಿಯಾದ ಜ್ಞಾನವಿಲ್ಲದ ಕಾರಣ ಕೇವಲ ಕೆಲವೇ ಕ್ಷಣಗಳಲ್ಲಿ ಅವರ ಬಲಗೈ ಮೆಷಿನ್ನೊಳಗೆ ಸಿಲುಕಿಕೊಂಡಿದೆ. ತಕ್ಷಣವೇ ಅವರನ್ನು ರಕ್ಷಿಸಿ, ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ತೀವ್ರ ಗಾಯಗೊಂಡಿದ್ದರಿಂದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ರಶ್ಮಿ ಅವರ ಬಲಗೈ ತೋರುಬೆರಳನ್ನು ತೆಗೆದಿದ್ದಾರೆ.
ಮಾಲೀಕನ ವಿರುದ್ಧ ಪ್ರಕರಣ ದಾಖಲು
ಹಪ್ಪಳ ತಯಾರಿಕೆ ವೇಳೆಯಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ, ಸೂಕ್ತ ತರಬೇತಿಯನ್ನೂ ನೀಡದೆ ಜೀವಕ್ಕೆ ಅಪಾಯವಿರುವ ಯಂತ್ರದಲ್ಲಿ ಕೆಲಸ ಮಾಡಲು ಬಲವಂತಪಡಿಸಿದ್ದೇ ಈ ಅವಘಡಕ್ಕೆ ಕಾರಣ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮಾಲೀಕನ ಬೇಜವಾಬ್ದಾರಿತನದಿಂದಾಗಿ ಯುವತಿ ಇದೀಗ ಅಂಗವೈಕಲ್ಯ ಅನುಭವಿಸುವಂತಾಗಿದೆ.
ಸದ್ಯ ರಶ್ಮಿ ನೀಡಿದ ದೂರಿನನ್ವಯ ಕೋಟ ಪೊಲೀಸ್ ಠಾಣೆಯಲ್ಲಿ ಮಾಲೀಕ ಸಂಜೀವ ಕುಲಾಲ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.



