ಟಾಟಾ EV ಮೇಲೆ ಭರ್ಜರಿ ರಿಯಾಯಿತಿ! ₹3.5 ಲಕ್ಷವರೆಗೆ ಡಿಸ್ಕೌಂಟ್

ಟಾಟಾ ಕರ್ವ್ ಇವಿ ಖರೀದಿಸಲು ಇದು ಉತ್ತಮ ಸಮಯವಾಗಿದೆ. ಕಂಪನಿ ನೀಡುತ್ತಿರುವ ಭಾರೀ ರಿಯಾಯಿತಿಯಿಂದ ಪ್ರೀಮಿಯಂ ಎಲೆಕ್ಟ್ರಿಕ್ ಎಸ್‌ಯುವಿ ಕಡಿಮೆ ಬೆಲೆಗೆ ಲಭ್ಯವಾಗುತ್ತಿದ್ದು, ಗ್ರಾಹಕರ ಗಮನ ಸೆಳೆಯುತ್ತಿದೆ.

ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚುತ್ತಿರುವ ಹೊತ್ತಿನಲ್ಲಿ ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ಎಲೆಕ್ಟ್ರಿಕ್ ಕಾರುಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ಘೋಷಿಸಿದೆ. ಅದರಲ್ಲೂ ಟಾಟಾ ಕರ್ವ್ ಇವಿ (Curvv EV) ಖರೀದಿದಾರರಿಗೆ ದೊಡ್ಡ ಮಟ್ಟದ ಲಾಭ ಸಿಗುವ ಸಾಧ್ಯತೆ ಇದೆ. ವಿವಿಧ ಆಫರ್‌ಗಳನ್ನು ಸೇರಿಸಿದರೆ ಒಟ್ಟು ₹3.5 ಲಕ್ಷದವರೆಗೆ ಪ್ರಯೋಜನ ದೊರೆಯಬಹುದು.

ಡೀಲರ್‌ಗಳ ಮಾಹಿತಿಯ ಪ್ರಕಾರ, ಈ ಆಫರ್‌ಗಳಲ್ಲಿ ಗ್ರೀನ್ ಬೋನಸ್, ಎಕ್ಸ್‌ಚೇಂಜ್ ಬೆನಿಫಿಟ್, ಸ್ಕ್ರ್ಯಾಪೇಜ್ ಬೋನಸ್, ಲಾಯಲ್ಟಿ ರಿವಾರ್ಡ್ ಹಾಗೂ ಕಾರ್ಪೊರೇಟ್ ಸ್ಕೀಮ್‌ಗಳಂತಹ ಸೌಲಭ್ಯಗಳು ಸೇರಿವೆ. ಆದರೆ ರಿಯಾಯಿತಿಯ ಪ್ರಮಾಣ ನಗರ, ವೇರಿಯಂಟ್ ಹಾಗೂ ಸ್ಟಾಕ್ ಲಭ್ಯತೆ ಆಧರಿಸಿ ಬದಲಾಗಬಹುದು.

ಟಾಟಾ ಕರ್ವ್ ಇವಿ ತನ್ನ ವಿಶಿಷ್ಟ ಎಸ್‌ಯುವಿ-ಕೂಪೆ ವಿನ್ಯಾಸದಿಂದಲೇ ಗಮನ ಸೆಳೆದಿದೆ. ಸ್ಲೋಪಿಂಗ್ ರೂಫ್‌ಲೈನ್, ಫ್ಲಷ್ ಡೋರ್ ಹ್ಯಾಂಡಲ್‌ಗಳು, ಹಿಂಭಾಗದ ಸ್ಪಾಯ್ಲರ್ ಹಾಗೂ ಆಕರ್ಷಕ ಎಕ್ಸ್‌ಟೀರಿಯರ್ ವಿನ್ಯಾಸವು ಕಾರಿಗೆ ಪ್ರೀಮಿಯಂ ಲುಕ್ ನೀಡುತ್ತದೆ. ಯುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ಮಾದರಿಯನ್ನು ವಿನ್ಯಾಸಗೊಳಿಸಲಾಗಿದೆ.

ಒಳಾಂಗಣದಲ್ಲಿಯೂ ಹಲವು ಆಧುನಿಕ ಸೌಲಭ್ಯಗಳಿವೆ. 12.3 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ವ್ಯವಸ್ಥೆ, ಡಿಜಿಟಲ್ ಕಾಕ್‌ಪಿಟ್, ಕನೆಕ್ಟೆಡ್ ಕಾರ್ ತಂತ್ರಜ್ಞಾನ, ವೈರ್‌ಲೆಸ್ ಚಾರ್ಜಿಂಗ್, ವೆಂಟಿಲೇಟೆಡ್ ಸೀಟುಗಳು, ಪನೋರಾಮಿಕ್ ಸನ್‌ರೂಫ್ ಹಾಗೂ ಓವರ್-ದಿ-ಏರ್ ಅಪ್‌ಡೇಟ್ ಸೌಲಭ್ಯಗಳು ಪ್ರಯಾಣದ ಅನುಭವವನ್ನು ಮತ್ತಷ್ಟು ಸುಧಾರಿಸುತ್ತವೆ.

ಸುರಕ್ಷತೆಯ ವಿಷಯದಲ್ಲಿಯೂ ಟಾಟಾ ಯಾವುದೇ ರಾಜಿ ಮಾಡಿಕೊಳ್ಳಿಲ್ಲ. ಕಾರಿನಲ್ಲಿ 6 ಏರ್‌ಬ್ಯಾಗ್‌ಗಳು, 360 ಡಿಗ್ರಿ ಕ್ಯಾಮೆರಾ, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಹಾಗೂ ಲೆವೆಲ್-2 ADAS ತಂತ್ರಜ್ಞಾನ ಲಭ್ಯವಿದೆ. ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್ ಮತ್ತು ಆಟೋ ಎಮರ್ಜೆನ್ಸಿ ಬ್ರೇಕಿಂಗ್ ವ್ಯವಸ್ಥೆಗಳು ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ.

ಪರ್ಫಾರ್ಮೆನ್ಸ್ ವಿಚಾರಕ್ಕೆ ಬಂದರೆ, ಕರ್ವ್ ಇವಿ 55kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಈ ಎಲೆಕ್ಟ್ರಿಕ್ ಎಸ್‌ಯುವಿ ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ ಗರಿಷ್ಠ 502 ಕಿಲೋಮೀಟರ್ ರೇಂಜ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ವಾಸ್ತವಿಕ ಬಳಕೆಯಲ್ಲಿ ಸುಮಾರು 400 ರಿಂದ 425 ಕಿ.ಮೀ ರೇಂಜ್ ನಿರೀಕ್ಷಿಸಬಹುದು. ವೇಗದ ಡಿಸಿ ಚಾರ್ಜರ್ ಮೂಲಕ 10ರಿಂದ 80 ಶೇಕಡಾ ಚಾರ್ಜ್ ಮಾಡಲು ಸುಮಾರು 40 ನಿಮಿಷ ಸಾಕಾಗುತ್ತದೆ.

ಪ್ರಸ್ತುತ ಕರ್ವ್ ಇವಿ ಬೆಲೆ ಸುಮಾರು ₹16.99 ಲಕ್ಷದಿಂದ ಆರಂಭವಾಗುತ್ತದೆ. ಆದರೆ ಲಭ್ಯವಿರುವ ರಿಯಾಯಿತಿಗಳು ಹಾಗೂ ವಿನಿಮಯ ಆಫರ್‌ಗಳ ಪ್ರಯೋಜನ ಪಡೆದುಕೊಂಡರೆ ಅಂತಿಮ ಬೆಲೆ ಗಮನಾರ್ಹವಾಗಿ ಕಡಿಮೆಯಾಗಬಹುದು. ಇದರಿಂದ ಹೆಚ್ಚಿನ ಗ್ರಾಹಕರು ಪ್ರೀಮಿಯಂ ಎಲೆಕ್ಟ್ರಿಕ್ ಎಸ್‌ಯುವಿ ಖರೀದಿಸಲು ಮುಂದಾಗುವ ಸಾಧ್ಯತೆ ಇದೆ.

ಮಾರುಕಟ್ಟೆ ತಜ್ಞರ ಅಭಿಪ್ರಾಯದಂತೆ, ಹಬ್ಬದ ಸೀಸನ್ ಹಾಗೂ ಹೆಚ್ಚುತ್ತಿರುವ ಸ್ಪರ್ಧೆಯನ್ನು ಗಮನದಲ್ಲಿಟ್ಟುಕೊಂಡು ಟಾಟಾ ಈ ರಿಯಾಯಿತಿ ತಂತ್ರವನ್ನು ಅನುಸರಿಸಿದೆ. ಇದರಿಂದ ಮಾರಾಟ ಹೆಚ್ಚಿಸುವ ಜೊತೆಗೆ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ತನ್ನ ಬಲಿಷ್ಠ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶ ಹೊಂದಿದೆ.

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories