ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ಭಾರಿ ಸಂಚಲನ : ಶೀಘ್ರದಲ್ಲೇ ಬರಲಿದೆ ಹಾನರ್‌ನ 10000mAh ಬೃಹತ್ ಬ್ಯಾಟರಿಯ ಮೊಬೈಲ್
ಇತ್ತೀಚಿಗೆ ಸೋರಿಕೆಯಾದ ಮಾಹಿತಿಗಳ ಪ್ರಕಾರ 10,000mAh ಸಾಮರ್ಥ್ಯದ ಶಕ್ತಿಶಾಲಿ ಬ್ಯಾಟರಿಯ ಫೋನ್‌ಅನ್ನು ಹಾನರ್ ತರುತ್ತಿದೆ
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದೊಡ್ಡ ಬ್ಯಾಟರಿಗಳನ್ನು ಹೊಂದಿರುವ ಹಲವು ಮೊಬೈಲ್ ಫೋನ್‌ಗಳಿವೆ. ಆದರೆ ಈಗ ಅದಕ್ಕೆ ಸೆಡ್ಡುಹೊಡೆಯುವಂತೆ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಬೃಹತ್ ಬ್ಯಾಟರಿಯ ಮತ್ತೊಂದು ಫೋನ್ ಬರಲು ಸಜ್ಜಾಗಿದೆ. ಇತ್ತೀಚಿಗೆ ಸೋರಿಕೆಯಾದ ಮಾಹಿತಿಗಳ ಪ್ರಕಾರ 10,000mAh ಸಾಮರ್ಥ್ಯದ ಶಕ್ತಿಶಾಲಿ ಬ್ಯಾಟರಿಯ ಫೋನ್‌ಅನ್ನು ಹಾನರ್ ತರುತ್ತಿದೆ ಎನ್ನಲಾಗಿದೆ. ಹಾನರ್‌ನಿಂದ ಬಿಡುಗಡೆಯಾಗಲಿರುವ ಹೊಸ ಮೊಬೈಲ್ ಬೃಹತ್ ಬ್ಯಾಟರಿ, ಗರಿಷ್ಠ ಹೊಳಪು ಹೊಂದಿರುವುದು ನಿಜವಾಗಿದ್ದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುವ ಎಲ್ಲಾ ಸಾಧ್ಯತೆಗಳಿವೆ.
ಹಾನರ್ ಈ ಹೊಸ ಫೋನ್‌ನ ಹೆಸರು, ಪ್ರೊಸೆಸರ್, ಕ್ಯಾಮೆರಾ ವ್ಯವಸ್ಥೆ, ಚಾರ್ಜಿಂಗ್ ಸಾಮರ್ಥ್ಯ ಮತ್ತು ಬಿಡುಗಡೆ ದಿನಾಂಕ ಮುಂತಾದ ಪ್ರಮುಖ ವಿಷಯಗಳನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ.
ಇತ್ತೀಚೆಗೆ, ಹಾನರ್ ಚೀನಾದಲ್ಲಿ ದೊಡ್ಡ ಬ್ಯಾಟರಿಗಳನ್ನು ಹೊಂದಿರುವ ಹಲವಾರು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಡಿಸೆಂಬರ್ 2025 ರಲ್ಲಿ ಬಿಡುಗಡೆಯಾದ ಹಾನರ್ ವಿನ್ ಮತ್ತು ಹಾನರ್ ವಿನ್ ಆರ್‌ಟಿ ಮಾದರಿಯ ಸ್ಮಾರ್ಟ್‌ಫೋನ್‌ಗಳು 10,000 mAh ಬ್ಯಾಟರಿ ಮತ್ತು 6000 ನಿಟ್ಸ್ ಪೀಕ್ ಬ್ರೈಟ್‌ನೆಸ್ ಡಿಸ್ಪ್ಲೇಯನ್ನು ನೀಡಿದೆ. ಅದರ ನಂತರ, ಹಾನರ್ ವಿನ್ ಟರ್ಬೊ ರೂಪಾಂತರವನ್ನು 10,000 mAh ಬ್ಯಾಟರಿ ಮತ್ತು 8000 ನಿಟ್ಸ್ ಪೀಕ್ ಬ್ರೈಟ್‌ನೆಸ್ ಡಿಸ್ಪ್ಲೇಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲದೆ, ಹಾನರ್ ಪವರ್ 2 ಫೋನ್ 10,080 mAh ಬ್ಯಾಟರಿ ಮತ್ತು 8000 ನಿಟ್ಸ್ ಪೀಕ್ ಬ್ರೈಟ್‌ನೆಸ್ ಡಿಸ್ಪ್ಲೇಯನ್ನು ನೀಡಿದೆ. ಈಗ ಅವುಗಳನ್ನೆಲ್ಲಾ ನೋಡಿದರೆ ಆನರ್‌ನ ಮುಂಬರುವ ಮೊಬೈಲ್ 10,000 mAh ಬ್ಯಾಟರಿ ಮತ್ತು 10,000 ನಿಟ್ಸ್ ಪೀಕ್ ಬ್ರೈಟ್‌ನೆಸ್ ಅನ್ನು ನೀಡುವ ಎಲ್ಲಾ ಸಾಧ್ಯತೆಯಿದೆ. ಈ ಮೊಬೈಲ್ ಸೂರ್ಯನ ಪ್ರಖರ ಬಿಸಿಲಿನಲ್ಲಿಯೂ ಸ್ಪಷ್ಟ ಚಿತ್ರ ಕಾಣಿಸಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಮೊಬೈಲ್ ದರ ಏರಿಕೆಗೆ ಕೌಂಟ್‌ಡೌನ್! ಈಗ ಖರೀದಿಸದಿದ್ದರೆ ಹೆಚ್ಚು ಹಣ ತೆರಬೇಕು
ಸೋರಿಕೆಯಾದ ವಿವರಗಳ ಪ್ರಕಾರ, ಹೊಸ ಹಾನರ್ ಫೋನ್ 6.79-ಇಂಚಿನ ಡಿಸ್ಪ್ಲೇ, 1200*2640 ಪಿಕ್ಸೆಲ್ ರೆಸಲ್ಯೂಶನ್, 12GB RAM, 256GB ಸ್ಟೋರೇಜ್, 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 5-ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾವನ್ನು ಹೊಂದಿರುವ ಸಾಧ್ಯತೆಯಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಾಗಿ 16-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಒದಗಿಸುವ ಸಾಧ್ಯತೆಯಿದೆ. ಇದು ಆಂಡ್ರಾಯ್ಡ್ 16-ಆಧಾರಿತ ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸುವ ಸಾಧ್ಯತೆಯಿದೆ. ಆದಾಗ್ಯೂ, ಅಧಿಕೃತ ಪ್ರಕಟಣೆಯ ನಂತರವೇ ಈ ವಿವರಗಳನ್ನು ಸ್ಪಷ್ಟಪಡಿಸುವ ಸಾಧ್ಯತೆಯಿದೆ. ಅದೆನೇ ಇರಲಿ, ಬೃಹತ್ ಬ್ಯಾಟರಿಯ ಈ ಮೊಬೈಲ್ ಮಾರುಕಟ್ಟೆಗೆ ಬಂದರೆ ಸಂಚಲನ ಮೂಡಿಸುವುದಂತೂ ಖಂಡಿತ.


