ಹೊಸ ಟಿವಿ ಖರೀದಿಸುತ್ತಿದ್ದೀರಾ? ಈ ಒಂದು ವಿಷಯ ಕೇಳದೇ ಹಣ ಕೊಡಬೇಡಿ
ಟಿವಿಗೆ ನೇರ ಎಕ್ಸ್ಪೈರಿ ದಿನಾಂಕ ಇಲ್ಲದಿದ್ದರೂ ಅದರ ಕಾರ್ಯಕ್ಷಮತೆಗೆ ಮಿತಿ ಇದೆ. ಡಿಸ್ಪ್ಲೇ ತಂತ್ರಜ್ಞಾನ ಮತ್ತು ನಿರ್ವಹಣೆಯೇ ಅದರ ದೀರ್ಘಾವಧಿಯ ಬಳಕೆಯನ್ನು ನಿರ್ಧರಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಟಿವಿ ಕೇವಲ ಮನರಂಜನಾ ಸಾಧನವಲ್ಲ, ಮನೆಯ ಪ್ರಮುಖ ಎಲೆಕ್ಟ್ರಾನಿಕ್ ಉಪಕರಣವಾಗಿದೆ. ಸಾವಿರಗಳಿಂದ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಖರೀದಿಸುವ ಗ್ರಾಹಕರು ಅದರ ಫೀಚರ್ಗಳನ್ನು ಗಮನಿಸುತ್ತಾರೆ. ಆದರೆ ಟಿವಿ ಎಷ್ಟು ವರ್ಷ ಬಾಳಿಕೆ ಬರುತ್ತದೆ ಎಂಬುದರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ.
ಟಿವಿಗಳಿಗೆ ನಿಗದಿತ ಎಕ್ಸ್ಪೈರಿ ಡೇಟ್ ಇರುವುದಿಲ್ಲ. ಆದರೆ ಪ್ರತಿಯೊಂದು ಟಿವಿಯಲ್ಲಿರುವ ಎಲೆಕ್ಟ್ರಾನಿಕ್ ಭಾಗಗಳಿಗೆ ಮಿತವಾದ ಕಾರ್ಯಕ್ಷಮತಾ ಅವಧಿ ಇರುತ್ತದೆ. ಹೀಗಾಗಿ ಕಾಲಕ್ರಮೇಣ ಅದರ ಗುಣಮಟ್ಟದಲ್ಲಿ ಬದಲಾವಣೆ ಕಂಡುಬರುವುದು ಸಹಜ.
ಟಿವಿಯ ಆಯುಷ್ಯವನ್ನು ನಿರ್ಧರಿಸುವಲ್ಲಿ ಡಿಸ್ಪ್ಲೇ ಪ್ರಮುಖ ಪಾತ್ರ ವಹಿಸುತ್ತದೆ. OLED, LED ಹಾಗೂ Mini LED ತಂತ್ರಜ್ಞಾನಗಳ ನಡುವೆ ಕಾರ್ಯಕ್ಷಮತೆಯಲ್ಲೂ ವ್ಯತ್ಯಾಸವಿದೆ. ಬಳಕೆದಾರರ ಉಪಯೋಗದ ರೀತಿಯೂ ಇದರ ಮೇಲೆ ಪರಿಣಾಮ ಬೀರುತ್ತದೆ.
ದಿನಕ್ಕೆ ಸರಾಸರಿ 5ರಿಂದ 6 ಗಂಟೆಗಳ ಕಾಲ ಟಿವಿ ಬಳಸಿದರೆ ಅದು ಹಲವು ವರ್ಷಗಳವರೆಗೆ ಉತ್ತಮವಾಗಿ ಕಾರ್ಯನಿರ್ವಹಿಸಬಹುದು. ಆದರೆ ವಿದ್ಯುತ್ ಏರಿಳಿತ, ಅಧಿಕ ಉಷ್ಣತೆ, ತೇವಾಂಶ ಹಾಗೂ ಧೂಳು ಅದರ ಆಯುಷ್ಯವನ್ನು ಕಡಿಮೆ ಮಾಡಬಹುದು.
ಟಿವಿ ಹಳೆಯದಾಗುತ್ತಿರುವಾಗ ಕೆಲವು ಸೂಚನೆಗಳು ಗೋಚರಿಸುತ್ತವೆ. ಪರದೆಯ ಬೆಳಕು ಕಡಿಮೆಯಾಗುವುದು, ಬಣ್ಣಗಳ ಗುಣಮಟ್ಟ ಕುಸಿಯುವುದು ಅಥವಾ ಅಸಮ ಪ್ರಮಾಣದ ಬೆಳಕು ಕಾಣಿಸಿಕೊಳ್ಳುವುದು ಸಾಮಾನ್ಯ ಲಕ್ಷಣಗಳಾಗಿವೆ.
ಕೆಲವು OLED ಟಿವಿಗಳಲ್ಲಿ ಪರದೆಯ ಮೇಲೆ ಒಂದೇ ಚಿತ್ರ ದೀರ್ಘಕಾಲ ಉಳಿದರೆ ‘ಬರ್ನ್-ಇನ್’ ಸಮಸ್ಯೆ ಕಾಣಿಸಬಹುದು. LED ಮಾದರಿಗಳಲ್ಲಿ ಬ್ಯಾಕ್ಲೈಟ್ ದುರ್ಬಲವಾಗುವುದರಿಂದ ಚಿತ್ರ ಗುಣಮಟ್ಟದ ಮೇಲೆ ಪರಿಣಾಮ ಬೀಳಬಹುದು.
ಸ್ಮಾರ್ಟ್ ಟಿವಿಗಳಲ್ಲಿ ಅಪ್ಡೇಟ್ ಬೆಂಬಲ ನಿಲ್ಲುವ ಮೂಲಕ ಕೆಲವು ಆ್ಯಪ್ಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಬಹುದು. ಹೀಗಾಗಿ ಹಳೆಯ ಟಿವಿಗಳಲ್ಲಿ ಹೊಸ ಸೌಲಭ್ಯಗಳನ್ನು ಬಳಸಲು ಅಡಚಣೆ ಉಂಟಾಗಬಹುದು.
ಟಿವಿಯ ಆಯುಷ್ಯ ಹೆಚ್ಚಿಸಬೇಕಾದರೆ ಸರ್ಜ್ ಪ್ರೊಟೆಕ್ಟರ್ ಬಳಸುವುದು, ನಿಯಮಿತ ಸ್ವಚ್ಛತೆ ಮಾಡುವುದು ಹಾಗೂ ಸರಿಯಾದ ವಾತಾವರಣದಲ್ಲಿ ಇಡುವುದು ಅಗತ್ಯ. ಈ ಕ್ರಮಗಳಿಂದ ಹಲವು ವರ್ಷಗಳ ಕಾಲ ಉತ್ತಮ ಕಾರ್ಯಕ್ಷಮತೆಯನ್ನು ಪಡೆಯಬಹುದು.



