ಫೋನ್‌ಪೇ ಬಳಕೆದಾರರಿಗೆ ಎಚ್ಚರಿಕೆ: ವಾಲೆಟ್ ಶುಲ್ಕದ ಬಗ್ಗೆ ಕಂಪನಿಯ ಸ್ಪಷ್ಟನೆ

ಫೋನ್‌ಪೇ ವಾಲೆಟ್ ಇನ್‌ಆ್ಯಕ್ಟಿವಿಟಿ ಶುಲ್ಕದ ಬಗ್ಗೆ ಹರಿದಾಡುತ್ತಿರುವ ಗೊಂದಲಗಳಿಗೆ ಕಂಪನಿ ತೆರೆ ಎಳೆದಿದ್ದು, ಯುಪಿಐ ಹಾಗೂ ಬ್ಯಾಂಕ್ ಖಾತೆಗಳಿಗೆ ಯಾವುದೇ ಪರಿಣಾಮವಿಲ್ಲ ಎಂದು ಸ್ಪಷ್ಟಪಡಿಸಿದೆ.

ಡಿಜಿಟಲ್ ಪಾವತಿಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ಫೋನ್‌ಪೇ (PhonePe) ತನ್ನ ವಾಲೆಟ್ ಇನ್‌ಆ್ಯಕ್ಟಿವಿಟಿ ಶುಲ್ಕದ ಕುರಿತು ಸ್ಪಷ್ಟನೆ ನೀಡಿದ್ದು, ಬಳಕೆದಾರರ ಆತಂಕವನ್ನು ದೂರ ಮಾಡುವ ಪ್ರಯತ್ನ ಮಾಡಿದೆ. ಕಳೆದ ಕೆಲವು ದಿನಗಳಿಂದ ವಾಲೆಟ್ ಬಳಸದೇ ಇದ್ದರೆ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗುತ್ತದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು.

ಈ ಕುರಿತು ಪ್ರತಿಕ್ರಿಯಿಸಿರುವ ಫೋನ್‌ಪೇ, ಇನ್‌ಆ್ಯಕ್ಟಿವಿಟಿ ಶುಲ್ಕವು ಕೇವಲ ಫೋನ್‌ಪೇ ವಾಲೆಟ್‌ಗೆ ಮಾತ್ರ ಅನ್ವಯವಾಗುತ್ತದೆ ಎಂದು ತಿಳಿಸಿದೆ. ಯುಪಿಐ (UPI) ವ್ಯವಹಾರಗಳು ಅಥವಾ ಬ್ಯಾಂಕ್ ಖಾತೆಗಳಿಗೆ ಇದರೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಕಂಪನಿಯ ಪ್ರಕಾರ, ಫೋನ್‌ಪೇ ಖಾತೆ, ಯುಪಿಐ ಸೇವೆ ಮತ್ತು ಫೋನ್‌ಪೇ ವಾಲೆಟ್ ಮೂರು ವಿಭಿನ್ನ ವ್ಯವಸ್ಥೆಗಳಾಗಿವೆ. ಯುಪಿಐ ನೇರವಾಗಿ ಬ್ಯಾಂಕ್ ಖಾತೆಗೆ ಸಂಪರ್ಕ ಹೊಂದಿದ್ದರೆ, ವಾಲೆಟ್‌ನಲ್ಲಿ ಮುಂಚಿತವಾಗಿ ಹಣವನ್ನು ಲೋಡ್ ಮಾಡಿ ಬಳಸಬೇಕಾಗುತ್ತದೆ. ಹೀಗಾಗಿ ವಾಲೆಟ್‌ಗೆ ಸಂಬಂಧಿಸಿದ ನಿಯಮಗಳು ಯುಪಿಐಗೆ ಅನ್ವಯವಾಗುವುದಿಲ್ಲ.

ಬಳಕೆದಾರರ ವಾಲೆಟ್‌ನಲ್ಲಿ ಹಣವಿಲ್ಲದಿದ್ದರೆ ಅಥವಾ ದೀರ್ಘಕಾಲ ಬಳಸದೇ ಇದ್ದರೂ ಬ್ಯಾಂಕ್ ಖಾತೆಯಿಂದ ಒಂದು ರೂಪಾಯಿಯೂ ಕಡಿತವಾಗುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ಯಾವುದೇ ಶುಲ್ಕ ವಿಧಿಸುವ ಪರಿಸ್ಥಿತಿ ಬಂದರೂ ಅದು ವಾಲೆಟ್‌ನಲ್ಲಿ ಉಳಿದಿರುವ ಮೊತ್ತಕ್ಕೆ ಮಾತ್ರ ಸೀಮಿತವಾಗಿರುತ್ತದೆ.

ಇನ್ನು ವಾಲೆಟ್‌ನಿಂದ ಇನ್‌ಆ್ಯಕ್ಟಿವಿಟಿ ಶುಲ್ಕವನ್ನು ಕಡಿತಗೊಳಿಸುವ ಮೊದಲು 15 ದಿನಗಳ ಮುಂಚಿತವಾಗಿ ಮಾಹಿತಿ ನೀಡಲಾಗುತ್ತದೆ. ಆ ಅವಧಿಯಲ್ಲಿ ಬಳಕೆದಾರರು ವಾಲೆಟ್ ಅನ್ನು ಪುನಃ ಸಕ್ರಿಯಗೊಳಿಸಬಹುದು, ಹಣ ಸೇರಿಸಬಹುದು ಅಥವಾ ಉಳಿದಿರುವ ಮೊತ್ತವನ್ನು ಹಿಂಪಡೆಯಬಹುದು. ಅಗತ್ಯವಿದ್ದರೆ ವಾಲೆಟ್ ಅನ್ನು ಶಾಶ್ವತವಾಗಿ ಮುಚ್ಚುವ ಅವಕಾಶವೂ ಇರುತ್ತದೆ.

ವಾಲೆಟ್ ನಿಷ್ಕ್ರಿಯಗೊಂಡಿದ್ದರೂ ಅದನ್ನು ಮರುಸಕ್ರಿಯಗೊಳಿಸಲು ಸಂಪೂರ್ಣ ಕೆವೈಸಿ (KYC) ಅಗತ್ಯವಿಲ್ಲ. ಒಟಿಪಿ (OTP) ಪರಿಶೀಲನೆ ಪೂರ್ಣಗೊಳಿಸಿ ಒಂದು ಸಣ್ಣ ವ್ಯವಹಾರ ನಡೆಸಿದರೆ ವಾಲೆಟ್ ಮತ್ತೆ ಸಕ್ರಿಯವಾಗುತ್ತದೆ ಎಂದು ಕಂಪನಿ ತಿಳಿಸಿದೆ.

ಕ್ಯಾಶ್‌ಬ್ಯಾಕ್ ಪಡೆಯುವ ಬಳಕೆದಾರರು ಕೂಡ ಎಚ್ಚರಿಕೆಯಿಂದ ಇರಬೇಕಾಗಿದೆ. ಫೋನ್‌ಪೇನಲ್ಲಿ ದೊರೆಯುವ ಹೆಚ್ಚಿನ ಕ್ಯಾಶ್‌ಬ್ಯಾಕ್‌ಗಳು ವಾಲೆಟ್‌ಗೆ ಜಮೆಯಾಗದೆ ಗಿಫ್ಟ್ ಕಾರ್ಡ್ ಬ್ಯಾಲೆನ್ಸ್ ರೂಪದಲ್ಲಿ ಸಂಗ್ರಹವಾಗುತ್ತವೆ. ಆದ್ದರಿಂದ ಕ್ಯಾಶ್‌ಬ್ಯಾಕ್ ಬಂದಿದೆ ಎನ್ನುವುದರಿಂದ ಮಾತ್ರ ವಾಲೆಟ್ ಸಕ್ರಿಯವಾಗಿದೆ ಎಂದು ಭಾವಿಸುವುದು ಸರಿಯಲ್ಲ. ಗಿಫ್ಟ್ ಕಾರ್ಡ್ ಬ್ಯಾಲೆನ್ಸ್‌ಗೆ ಇನ್‌ಆ್ಯಕ್ಟಿವಿಟಿ ಶುಲ್ಕ ಅನ್ವಯಿಸುವುದಿಲ್ಲ.

Related Stories