ಡಿಕೆಶಿ ಮಂತ್ರಿಮಂಡಲದಲ್ಲಿ ಜನರ ದೂರು ದಾಖಲಿಸಲೆಂದೇ ಪ್ರತ್ಯೇಕ ಖಾತೆ : ಪ್ರಜಾಸೇವೆ ಇಲಾಖೆಗೆ ಶೀಘ್ರದಲ್ಲೇ ನೂತನ ಸಚಿವರ ಆಯ್ಕೆ
ಸಾರ್ವಜನಿಕರ ಕುಂದುಕೊರತೆಗಳನ್ನು ಅತ್ಯಂತ ವೇಗವಾಗಿ ಆಲಿಸಿ, ಸ್ಥಳದಲ್ಲೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಐತಿಹಾಸಿಕ ನಿರ್ಧಾರವೊಂದನ್ನು ಕೈಗೊಂಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಎರಡನೇ ಸಚಿವ ಸಂಪುಟ ಸಭೆಯಲ್ಲಿ 'ಪ್ರಜಾಸೇವೆ' ಎಂಬ ನೂತನ ಇಲಾಖೆಯನ್ನು ಸ್ಥಾಪಿಸಲು ಒಪ್ಪಿಗೆ ನೀಡಲಾಗಿದೆ.
ಸಾರ್ವಜನಿಕರ ಕುಂದುಕೊರತೆಗಳನ್ನು ಅತ್ಯಂತ ವೇಗವಾಗಿ ಆಲಿಸಿ, ಸ್ಥಳದಲ್ಲೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಐತಿಹಾಸಿಕ ನಿರ್ಧಾರವೊಂದನ್ನು ಕೈಗೊಂಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಎರಡನೇ ಸಚಿವ ಸಂಪುಟ ಸಭೆಯಲ್ಲಿ ‘ಪ್ರಜಾಸೇವೆ’ ಎಂಬ ನೂತನ ಇಲಾಖೆಯನ್ನು ಸ್ಥಾಪಿಸಲು ಒಪ್ಪಿಗೆ ನೀಡಲಾಗಿದೆ. ಇಂತಹ ಪ್ರತ್ಯೇಕ ಸಚಿವಾಲಯವನ್ನು ಹೊಂದುತ್ತಿರುವ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲಿದೆ.
ನೂತನ ಇಲಾಖೆಯ ಅಡಿಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಲೆಂದೇ ಪ್ರತಿಯೊಬ್ಬ ಸಚಿವರಿಗೂ ಪ್ರತ್ಯೇಕ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗುವುದು. ಇಲಾಖೆಯ ಸುಗಮ ಕಾರ್ಯನಿರ್ವಹಣೆಗಾಗಿ ಒಬ್ಬರು ಐಎಎಸ್ ಅಧಿಕಾರಿ ಹಾಗೂ ಇತರೆ ಸಿಬ್ಬಂದಿಗಳನ್ನು ನಿಯೋಜಿಸಲು ನಿರ್ಧರಿಸಲಾಗಿದೆ. ಸಾರ್ವಜನಿಕರು, ಶಾಸಕರು ಅಥವಾ ಜನಪ್ರತಿನಿಧಿಗಳಿಂದ ಬರುವ ದೂರುಗಳಿಗೆ ಇಲ್ಲಿ ಆದ್ಯತೆಯ ಮೇರೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲಾ ಸಚಿವರು ವಾರಕ್ಕೊಮ್ಮೆಯಾದರೂ ತಮಗೆ ನಿಯೋಜಿಸಲಾದ ವಿಧಾನಸಭಾ ಕ್ಷೇತ್ರಗಳಿಗೆ ಕಡ್ಡಾಯವಾಗಿ ಭೇಟಿ ನೀಡಬೇಕು ಮತ್ತು ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಬೇಕು ಎಂಬ ಕಟ್ಟುನಿಟ್ಟಿನ ನಿಯಮವನ್ನು ಜಾರಿಗೆ ತರಲಾಗಿದೆ.
Also Read: ಕರಾವಳಿ ಪ್ರವಾಸೋದ್ಯಮಕ್ಕೆ ನಟ ರಿಷಬ್ ಶೆಟ್ಟಿ ರಾಯಭಾರಿ!
ಇಲಾಖೆಯು ಮುಖ್ಯವಾಗಿ ಐದು ಸೂತ್ರಗಳ ಆಧಾರದ ಮೇಲೆ ಕೆಲಸ ಮಾಡಲಿದೆ. ಸಚಿವರು ಕ್ಷೇತ್ರ ಭೇಟಿ ಮಾಡುವುದು, ಸಾರ್ವಜನಿಕರ ಅಹವಾಲುಗಳನ್ನು ದಾಖಲಿಸುವುದು, ಆ ದೂರುಗಳನ್ನು ಮುಖ್ಯಮಂತ್ರಿಗೆ ತಲುಪಿಸುವುದು, ತುರ್ತು ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣದ ಪರಿಹಾರ ಒದಗಿಸುವುದು ಮತ್ತು ಮಾಧ್ಯಮಗಳಲ್ಲಿ ವರದಿಯಾಗುವ ಸಾರ್ವಜನಿಕರ ಸಮಸ್ಯೆಗಳನ್ನು ಸ್ವಯಂಪ್ರೇರಿತವಾಗಿ ಗಮನಿಸಿ ಸ್ಪಂದಿಸುವುದು ಈ ಇಲಾಖೆಯ ಪ್ರಮುಖ ಕಾರ್ಯವೈಖರಿಯಾಗಿದೆ.
ಮತ್ತೊಂದು ಪ್ರಮುಖ ನಿರ್ಧಾರದಲ್ಲಿ, ಒಸಿ ಇಲ್ಲದ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸಲು ಸರ್ಕಾರ ಮುಂದಾಗಿದೆ. 2026ರ ಮೇ 31ರೊಳಗಿನ ಇಂತಹ ಕಟ್ಟಡಗಳ ಮಾಲೀಕರು, ಆದೇಶ ಹೊರಬಿದ್ದ 15 ದಿನಗಳ ಒಳಗಾಗಿ ಅರ್ಜಿ ಸಲ್ಲಿಸಲು ಸಚಿವ ಸಂಪುಟವು ಸಮ್ಮತಿ ಸೂಚಿಸಿದೆ. ಆದರೆ, ಹೊಸ ನಿಯಮಾವಳಿಗಳ ಪ್ರಕಾರ ಇನ್ನು ಮುಂದೆ ಇಂತಹ ಸೌಲಭ್ಯ ಪಡೆಯಲು ಆರಂಭಿಕ ಪ್ರಮಾಣಪತ್ರ ಮತ್ತು ಸ್ವಾಧೀನಾನುಭವ ಪ್ರಮಾಣಪತ್ರ ಸಲ್ಲಿಕೆ ಕಡ್ಡಾಯವಾಗಿರುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
Separate department to register peoples complaints in DKS ministry New minister to be appointed soon for Public Service Department



