ಆರ್ಥಿಕವಾಗಿ ಸದೃಢ ಮಹಿಳೆಯರಿಗೆ ಬಿಗ್‌ಶಾಕ್‌! ಪತಿಗಿಂತ ಹೆಚ್ಚು ಆದಾಯ ಇದ್ದರೆ ಜೀವನಾಂಶ ಇಲ್ಲ

ಪತಿಗಿಂತ ಹೆಚ್ಚಿನ ಆದಾಯ ಗಳಿಸುತ್ತಿರುವ ಮತ್ತು ಆರ್ಥಿಕವಾಗಿ ಸ್ವಾವಲಂಬಿಯಾಗಿರುವ ಪತ್ನಿಯು ವಿಚ್ಛೇದನದ ಬಳಿಕ ಪತಿಯಿಂದ ಜೀವನಾಂಶ ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಬೆಂಗಳೂರು: ಪತಿಗಿಂತ ಹೆಚ್ಚಿನ ಆದಾಯ ಗಳಿಸುತ್ತಿರುವ ಮತ್ತು ಆರ್ಥಿಕವಾಗಿ ಸ್ವಾವಲಂಬಿಯಾಗಿರುವ ಪತ್ನಿಯು ವಿಚ್ಛೇದನದ ಬಳಿಕ ಪತಿಯಿಂದ ಜೀವನಾಂಶ ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಹಿಳೆಯರು ಯಾವಾಗಲೂ ಪುರುಷರಿಂದಲೇ ಆರ್ಥಿಕ ನಿರ್ವಹಣೆ ಪಡೆಯಬೇಕು ಎಂಬ ಲಿಂಗ ಆಧಾರಿತ ಪೂರ್ವಾಗ್ರಹ ಆಲೋಚನೆಗಳಿಂದ ಕೌಟುಂಬಿಕ ನ್ಯಾಯಾಲಯಗಳು ಪ್ರಭಾವಿತವಾಗಬಾರದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಕೌಟುಂಬಿಕ ನ್ಯಾಯಾಲಯವೊಂದು ಪತ್ನಿಯ ಜೀವನ ನಿರ್ವಹಣೆಗೆ ಪ್ರತಿ ತಿಂಗಳು 20 ಸಾವಿರ ರೂಪಾಯಿ ನೀಡುವಂತೆ ಪತಿಗೆ ಮಧ್ಯಂತರ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಪತಿಯು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಿಲ್ಲಕೂರ್ ಸುಮಲತಾ ಅವರಿದ್ದ ನ್ಯಾಯಪೀಠವು ಆ ಆದೇಶವನ್ನು ರದ್ದುಗೊಳಿಸಿದೆ.

ವಿಚಾರಣೆ ವೇಳೆ ಪತಿಯು, ತನಗೆ ಮಾಸಿಕ 60,646 ರೂಪಾಯಿ ವೇತನವಿದ್ದು, ತನ್ನ ಪತ್ನಿ ತಿಂಗಳಿಗೆ ಬರೋಬ್ಬರಿ 1 ಲಕ್ಷ ರೂಪಾಯಿ ಸಂಪಾದಿಸುತ್ತಿದ್ದಾಳೆ ಎಂಬ ದಾಖಲೆಗಳನ್ನು ಒದಗಿಸಿದ್ದರು. ಪತ್ನಿಯು ಸಹ ತನ್ನ ಆದಾಯವು ಪತಿಯ ಗಳಿಕೆಗಿಂತ ಹೆಚ್ಚಿರುವುದನ್ನು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದರು. ಮದುವೆಯ ಸಂದರ್ಭದಲ್ಲಿ ತಾನು ಮಾಡಿಕೊಂಡ ಸಾಲಗಳನ್ನು ತೀರಿಸಲು ಪತಿಯಿಂದ ಹಣದ ಅಗತ್ಯವಿದೆ ಎಂದು ಆಕೆ ಪ್ರತಿವಾದ ಮಂಡಿಸಿದ್ದರು.

Also Read: ರಾಜ್ಯದಲ್ಲಿ ವಿದ್ಯುತ್​ ವಿತರಣೆ ಖಾಸಗೀಕರಣ ಮಾಡಲ್ಲ : ಸಿಎಂ ಡಿ.ಕೆ ಶಿವಕುಮಾರ್​ ಭರವಸೆ

ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳು, ಪತ್ನಿಯು ತನ್ನ ಆದಾಯದಿಂದ ಸ್ವತಃ ತನ್ನನ್ನು ತಾನು ಸುಲಭವಾಗಿ ಸಾಕೋ ಸಾಮರ್ಥ್ಯ ಹೊಂದಿರುವಾಗ ಪತಿಯಿಂದ ಹಣ ಪಡೆಯುವ ಅಗತ್ಯವಿಲ್ಲ ಎಂದಿದ್ದಾರೆ. ಹೆಂಡತಿಯ ಆದಾಯವು ಹೆಚ್ಚಾಗಿದ್ದು, ಮಕ್ಕಳನ್ನು ನೋಡಿಕೊಳ್ಳುವಂತಹ ಯಾವುದೇ ಹೆಚ್ಚುವರಿ ಆರ್ಥಿಕ ಹೊಣೆಗಾರಿಕೆಗಳು ಆಕೆಯ ಮೇಲ ಇರದೇ ಇದ್ದಾಗ, ಇಂತಹ ಜೀವನಾಂಶದ ಆದೇಶಗಳನ್ನು ಕಾನೂನಿನ ದೃಷ್ಟಿಯಲ್ಲಿ ಒಪ್ಪಲು ಸಾಧ್ಯವಿಲ್ಲ.

ಮಹಿಳೆಗೆ ಜೀವನ ನಡೆಸಲು ಯಾವುದೇ ಆದಾಯದ ಮೂಲ ಇಲ್ಲದ ಅತ್ಯಂತ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಜೀವನಾಂಶದ ಆದೇಶಗಳನ್ನು ಪರಿಗಣಿಸಬೇಕು ಎಂದು ಹೈಕೋರ್ಟ್ ಮಹತ್ವದ ಮಾರ್ಗದರ್ಶನ ನೀಡಿದೆ.

Big shock for financially strong women No alimony if income is more than husband

 

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »