ನಿಮ್ದು ಗಂಟೆಗಟ್ಟಲೆ ಕಳಿತು ಮಾಡುವ ಉದ್ಯೋಗವಾ? ಹಾಗಾದ್ರೆ ಈ ಆರೋಗ್ಯ ಸಲಹೆ ನಿಮಗಾಗಿ

ಗಂಟೆಗಟ್ಟಲೆ ಒಂದೇ ಭಂಗಿಯಲ್ಲಿ ಅಥವಾ ತಪ್ಪು ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದ ಮೊಣಕಾಲು, ಸೊಂಟ, ಬೆನ್ನುಮೂಳೆಯ ಮೇಲೆ ನಿರಂತರ ಒತ್ತಡ ಉಂಟಾಗುತ್ತದೆ. ಇದು ಕಾಲಕ್ರಮೇಣ ಎಲುಬು ಸವೆತ, ನೋವು ಮುಂತಾದ ತೊಂದರೆಗಳಿಗೆ ಕಾರಣವಾಗಬಹುದು.

ಇಂದಿನ ಜೀವನಶೈಲಿಯಲ್ಲಿ ಬಹುತೇಕ ಎಲ್ಲರೂ ದೀರ್ಘಕಾಲ ಕುರ್ಚಿಯಲ್ಲಿ ಕುಳಿತು ಮಾಡುವ ಉದ್ಯೋಗವನ್ನು ಹೊಂದಿರುತ್ತಾರೆ. ಅದರಲ್ಲೂ ಬಹಳಷ್ಟು ಜನರಿಗೆ ತಾವು ಎಷ್ಟು ಗಂಟೆಯಿಂದ ಕುಳಿತೇ ಇದ್ದೇವೆ ಎಂಬುದು ಕೂಡಾ ಗಮನಕ್ಕೆ ಬಾರದೆ ಇರುವಂತಹ ಕೆಲಸದಲ್ಲಿರುತ್ತಾರೆ. ಹಾಗೆ ಗಂಟೆಗಟ್ಟಲೆ ಒಂದೇ ಭಂಗಿಯಲ್ಲಿ ಅಥವಾ ತಪ್ಪು ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದ ಮೊಣಕಾಲು, ಸೊಂಟ, ಬೆನ್ನುಮೂಳೆಯ ಮೇಲೆ ನಿರಂತರ ಒತ್ತಡ ಉಂಟಾಗುತ್ತದೆ. ಇದು ಕಾಲಕ್ರಮೇಣ ಎಲುಬು ಸವೆತ, ನೋವು ಮುಂತಾದ ತೊಂದರೆಗಳಿಗೆ ಕಾರಣವಾಗಬಹುದು. ಆದರೆ ಇಂದಿನ ಉದ್ಯೋಗ ಶೈಲಿಯಲ್ಲಿ ಕುಳಿತು ಕೆಲಸ ಮಾಡುವುದು ಅನಿವಾರ್ಯವಾಗಿದೆ. ಹಾಗಾದರೆ ಇದಕ್ಕೆ ಪರಿಹಾರವೇನು? ಇಲ್ಲಿದೆ ಓದಿ.

ಸರಿಯಾದ ಕುರ್ಚಿ ಆಯ್ದುಕೊಳ್ಳಿ

ನೀವು ಕುಳಿತುಕೊಳ್ಳುವಾಗ ಬಳಸುವ ಕುರ್ಚಿ ಬಹಳ ಮುಖ್ಯ ಎಂದು ತಜ್ಞರು ಹೇಳುತ್ತಾರೆ. ಸೊಂಟ ಮತ್ತು ಬೆನ್ನುಮೂಳೆಗೆ ಬೆಂಬಲ ನೀಡುವಂತಹ ಸರಿಯಾದ ಕುರ್ಚಿ ಬಳಸುವುದರಿಂದ ಅಪಾಯ ಕಡಿಮೆಯಾಗುತ್ತದೆ. ಬೆನ್ನುಮೂಳೆಯ ನೈಸರ್ಗಿಕ ಬಾಗುವಿಕೆಗೆ ಇದು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ನಿಮ್ಮ ಎತ್ತರಕ್ಕೆ ಸರಿಯಾಗಿ ಕುರ್ಚಿಯ ಎತ್ತರವನ್ನು ಹೊಂದಿಸಿಕೊಳ್ಳುವುದು ಬಹಳ ಮುಖ್ಯ. ಮೃದುವಾದ ಆಸನ ಮತ್ತು ಹ್ಯಾಂಡ್‌ ರೆಸ್ಟ್‌ ಇರುವ ಕುರ್ಚಿಗಳು ಕೀಲುಗಳ ಮೇಲೆ ಬೀಳುವ ಒತ್ತಡವನ್ನು ತಡೆಯಲು ಸಹಾಯ ಮಾಡುತ್ತವೆ. ಸುದೀರ್ಘವಾಗಿ ಕುಳಿತು ಕೆಲಸ ಮಾಡುವವರು ಜೆಲ್‌ ಸೀಟ್‌ ಕುಶನ್‌ ಬಳಸುವುದು ಒಳ್ಳೆಯದು ಎಂದು ವೈದ್ಯರು ಸಲಹೆ ನೀಡುತ್ತಾರೆ. ಇದು ದೇಹದ ತೂಕವನ್ನು ಎಲ್ಲ ಕಡೆ ಸಮಾನವಾಗಿ ವಿತರಿಸುತ್ತದೆ. ಮೊಣಕಾಲು, ಸೊಂಟದ ಮೇಲಿನ ಒತ್ತಡದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಕುಳಿತುಕೊಳ್ಳುವುದಕ್ಕೆ ಹೆಚ್ಚು ಆರಾಮದಾಯಕವೆನಿಸುತ್ತದೆ. ಬೆನ್ನಿಗೆ ಬೆಂಬಲ ನೀಡುವಂತಹ ದಿಂಬುಗಳನ್ನು ಬಳಸುವುದರಿಂದ ಬೆನ್ನಿನ ಸಮಸ್ಯೆ ದೂರವಾಗುತ್ತದೆ.

ಪಾದಗಳ ಭಂಗಿ

ಬೆನ್ನು ನೋವುಗೆ ಮತ್ತೊಂದು ಬಹಳ ದೊಡ್ಡ ಕಾರಣ ಪಾದಗಳ ಭಂಗಿ. ಕುರ್ಚಿಯಲ್ಲಿ ಕುಳಿತುಕೊಳ್ಳುವಾಗ ಯಾವಾಗಲೂ ಪಾದವು ಸಂಪೂರ್ಣವಾಗಿ ನೆಲಕ್ಕೆ ತಾಗಿರಬೇಕು. ಪಾದ ಸರಿಯಾಗಿ ನೆಲಕ್ಕೆ ತಾಗಿದ್ದರೆ ಮೊಣಕಾಲು ಮತ್ತು ಸೊಂಟದ ಭಾಗವು ಸರಿಯಾದ ಕೋನದಲ್ಲಿರುತ್ತದೆ. ಇದು ಕೀಲುಗಳ ಮೇಲಿನ ಅನಗತ್ಯ ಒತ್ತಡವನ್ನು ಕಡಿಮೆ ಮಾಡುತ್ತದೆ. ರಕ್ತ ಪರಿಚಲನೆ ಸುಧಾರಿಸುತ್ತದೆ. ದಿನವಿಡೀ ಕುಳಿತು ಕೆಲಸ ಮಾಡುವವರಿಗೆ ಇದು ಬಹಳ ಮುಖ್ಯ. ಯಾವಾಗಲೂ ಮೊಣಕಾಲುಗಳು 90 ಡಿಗ್ರಿ ಕೋನದಲ್ಲಿರುವಂತೆ ಕುಳಿತುಕೊಳ್ಳಿ. ಪಾದಗಳು ಸರಿಯಾಗಿ ನೆಲಕ್ಕೆ ತಾಗುವಂತಹ ಕುರ್ಚಿಗಳನ್ನೇ ಆಯ್ದುಕೊಳ್ಳಿ.

ಇದನ್ನೂ ಓದಿ : ಮಸಾಲಾ ಪದಾರ್ಥಗಳ ಸೇವನೆಯಿಂದ ಮಾತ್ರ ಎಸಿಡಿಟಿ ಬರತ್ತಾ ? ತಜ್ಞರು ಹೇಳಿದ ಕಾರಣ ಮತ್ತು ಪರಿಹಾರ ತಿಳಿಯಿರಿ

ಬ್ಯಾಲೆನ್ಸ್‌ ಬಾಲ್‌ ಕುರ್ಚಿಗಳು

ಈಗಾಗಲೇ ಬೆನ್ನು ನೋವು, ಕಾಲು ನೋವು ಅನುಭವಿಸುತ್ತಿರುವವರಿಗೆ ಬ್ಯಾಲೆನ್ಸ್‌ ಬಾಲ್‌ ಕುರ್ಚಿಗಳು ಬಹಳ ಪ್ರಯೋಜನಕಾರಿಯಾಗಿವೆ. ಇದರ ಮೇಲೆ ಕುಳಿತುಕೊಳ್ಳುವುದರಿಂದ ಸ್ನಾಯುಗಳು ಸಮತೋಲನವನ್ನು ಕಾಪಾಡಿಕೊಳ್ಳಲು ಕೆಲಸ ಮಾಡುತ್ತವೆ. ಇದು ಬೆನ್ನು ಮತ್ತುಮೊಣಕಾಲುಗಳ ಮೇಲೆ ಬೀಳುವ ಒತ್ತಡವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಸ್ನಾಯು ಬಲಪಡಿಸುವ ವ್ಯಾಯಮಗಳನ್ನು ಮಾಡುವುದು, ಹಗುರವಾದ ವ್ಯಾಯಾಮಗಳನ್ನು ಪ್ರತಿನಿತ್ಯ ಮಾಡುವುದು, ಗಣಮಟ್ಟದ ಪಾದರಕ್ಷೆಗಳನ್ನು ಧರಿಸುವುದು, ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳುವುದು ಹೀಗೆ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವುದರ ಮೂಲಕ ಬೆನ್ನು ನೋವು ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದು.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.