Karkala News : ಕಾರ್ಕಳ: 5 ಸಾವಿರ ಹಣಕ್ಕಾಗಿ ಮನೆಗೆ ನುಗ್ಗಿ ವೃದ್ಧನ ಮೇಲೆ ಧಾಂದಲೆ
ಕಾರ್ಕಳದ ಈದು ಗ್ರಾಮದ ಹೊಸ್ಮಾರ್ನಲ್ಲಿ 70 ವರ್ಷದ ವೃದ್ಧ ಸಾಧು ಪೂಜಾರಿ ಅವರ ಮೇಲೆ ಪರಿಚಯದ ವ್ಯಕ್ತಿಯೇ ಮರದ ಸೊಂಟೆಯಿಂದ ಭೀಕರ ಹಲ್ಲೆ ನಡೆಸಿದ್ದಾನೆ. 5,000 ರೂಪಾಯಿ ಹಣ ನೀಡುವಂತೆ ಬೆದರಿಸಿ, ಹಲ್ಲೆ ನಡೆಸಿ ಪರಾರಿಯಾದ ಆಪಾದಿತನ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Karkala News : ಕಾರ್ಕಳ: ಕೇವಲ 5 ಸಾವಿರ ರೂಪಾಯಿ ಸಾಲ ಮರುಪಾವತಿ ವಿಚಾರಕ್ಕೆ ಸಂಭಂಧಿಸಿದಂತೆ ವೃದ್ದನೋರ್ವನ ಮನೆಗೆ ನುಗ್ಗಿ ಭೀಕರವಾಗಿ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಒಡ್ಡಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೊಸ್ಮಾರು ಎಂಬಲ್ಲಿ ನಡೆದಿದೆ.
ಉಡುಪಿಯ ಕಾರ್ಕಳ ತಾಲೂಕಿನ ಈದು ಗ್ರಾಮದ ಸಾಧು ಪೂಜಾರಿ (70 ವರ್ಷ) ಎಂಬವರೇ ಹಲ್ಲೆಗೊಳಗಾದ ವೃದ್ಧ. ಜೂನ್ 29ರಂದು ರಾತ್ರಿ ಹೊಸ್ಮಾರಿನಲ್ಲಿರುವ ನಾಗಪ್ರಸಾದ್ ಹೋಟೆಲ್ನಲ್ಲಿ ಎಂದಿನಂತೆ ಕೆಲಸ ಮುಗಿಸಿ ನಡೆದುಕೊಂಡು ತಮ್ಮ ಮನೆಗೆ ಬಂದಿದ್ದರು. ರಾತ್ರಿ ಸುಮಾರು 9:30ರ ವೇಳೆಗೆ ಅವರು ಮನೆಯೊಳಗೆ ಹೋಗಿದ್ದಾಗ, ಪರಿಚಯದ ದಿಲೀಪ್ ಪೂಜಾರಿ ಎಂಬಾತ ತನ್ನ ಮೋಟಾರ್ ಸೈಕಲ್ನಲ್ಲಿ ಗೇಟ್ ಬಳಿ ಬಂದು ನಿಲ್ಲಿಸಿದ್ದಾನೆ.
5 ಸಾವಿರ ಹಣಕ್ಕಾಗಿ ಪೀಡನೆ – ಕೊಲೆ ಬೆದರಿಕೆ
ಸಾಧು ಪೂಜಾರಿ ಅವರು ಮನೆಗೆ ಬಂದ ವೇಳೆಯಲ್ಲಿ ಮನೆಗ ಸಿಟ್ಔಟ್ಗೆ ಬಂದು ಕುಳಿತ ದಿಲೀಪ್ ಪೂಜಾರಿ ಸಾಧು ಪೂಜಾರಿಯನ್ನು ಹೊರಗೆ ಕರೆದಿದ್ದಾನೆ. ತನಗೆ ತಕ್ಷಣವೇ 5,000 ರೂಪಾಯಿ ಹಣ ನೀಡಬೇಕು ಎಂದು ಪಟ್ಟು ಹಿಡಿದು ಬೆದರಿಸಿದ್ದಾನೆ. ಆದರೆ ಹಣ ನೀಡಲು ನಿರಾಕರಿಸಿದಾಗ ಕೊಲೆ ಬೆದರಿಕೆ ಒಡ್ಡಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಷ್ಟಕ್ಕೆ ಸುಮ್ಮನಾಗದ ದಿಲೀಪ್ ತಾನು ಜೊತೆಯಲ್ಲಿ ತಂದಿದ್ದ ಮರದ ದೊಣ್ಣೆಯಿಂದ ಸಾಧು ಪೂಜಾರಿ ಅವರ ಎಡ ಭುಜ, ಎಡಬದಿಯ ತೋಳು, ಎಡಗಾಲಿನ ಮೊಣಗಂಟಿನ ಕೆಳಗೆ ಹಾಗೂ ಬಲಗೈಗೆ ಮನಬಂದಂತೆ ಹೊಡೆದಿದ್ದಾನೆ. ಹಲ್ಲೆಯ ತೀವ್ರತೆಗೆ ವೃದ್ಧನಿಗೆ ತೀವ್ರ ರಕ್ತಗಾಯಗಳಾಗಿವೆ.
ವೃದ್ಧ ಸಾಧು ಪೂಜಾರಿ ಅವರು ಜೋರಾಗಿ ಬೊಬ್ಬೆ ಹೊಡೆದಾಗ, ಮನೆಯವರು ಹಾಗೂ ನೆರೆಹೊರೆಯವರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಜನ ಬರುತ್ತಿರುವುದನ್ನು ಕಂಡ ಆಪಾದಿತ ದಿಲೀಪ್ ಪೂಜಾರಿ ತಾನು ತಂದಿದ್ದ ಮೋಟಾರ್ ಸೈಕಲ್ ಹತ್ತಿ ಅಲ್ಲಿಂದ ವೇಗವಾಗಿ ಓಡಿ ಹೋಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಗಾಯಾಳು ಸಾಧು ಪೂಜಾರಿ ನೀಡಿದ ದೂರಿನ ಮೇರೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

