ಸ್ಮಾರ್ಟ್‌ಫೋನ್ ಪ್ರಿಯರೇ ಎಚ್ಚರ: ಪ್ರತಿದಿನ ಫೋನ್ 100% ಚಾರ್ಜ್ ಮಾಡ್ತೀರಾ? ಹಾಗಿದ್ರೆ ನೀವು ಅಪಾಯದಲ್ಲಿದ್ದೀರಿ!

ಮೊಬೈಲ್ ಡಿಸ್ಪ್ಲೇ ಮೇಲೆ ಆ '100%' ಎಂಬ ಅಂಕಿ ಕಂಡರೆ ಸಿಗುವ ನೆಮ್ಮದಿಯೇ ಬೇರೆ. ಆದರೆ, ಟೆಕ್ ತಜ್ಞರು ಮತ್ತು ವಿಜ್ಞಾನದ ಪ್ರಕಾರ, ನಿಮ್ಮ ಈ ನೆಮ್ಮದಿಯ ಹವ್ಯಾಸವೇ ನಿಮ್ಮ ಸ್ಮಾರ್ಟ್‌ಫೋನ್ ಪಾಲಿಗೆ ಮರಣಶಾಸನವಾಗುತ್ತಿದೆ!

ಬೆಂಗಳೂರು: ನಮ್ಮಲ್ಲಿ ಬಹುತೇಕರಿಗೆ ಒಂದು ಸಾಮಾನ್ಯ ಹವ್ಯಾಸವಿರುತ್ತದೆ. ಬೆಳಗ್ಗೆ ಎದ್ದ ತಕ್ಷಣ ಅಥವಾ ಆಫೀಸ್‌ಗೆ ಕಲ್ಪಿಸುವ ಮುನ್ನ ಮೊಬೈಲ್ ಫೋನ್ ಅನ್ನು ಚಾರ್ಜಿಂಗ್‌ ಇಟ್ಟು, ಅದು ನೂರಕ್ಕೆ ನೂರು (100%) ಆಗುವವರೆಗೂ ಕಾಯುತ್ತೇವೆ. ಇನ್ನೂ ಕೆಲವರಂತೂ ರಾತ್ರಿ ಮಲಗುವಾಗ ಫೋನ್ ಚಾರ್ಜರ್‌ಗೆ ಸಿಕ್ಕಿಸಿ, ಬೆಳಗ್ಗೆ ಎದ್ದಾಗ ಅನ್‌ಪ್ಲಗ್ ಮಾಡುತ್ತಾರೆ. ಮೊಬೈಲ್ ಡಿಸ್ಪ್ಲೇ ಮೇಲೆ ಆ ‘100%’ ಎಂಬ ಅಂಕಿ ಕಂಡರೆ ಸಿಗುವ ನೆಮ್ಮದಿಯೇ ಬೇರೆ. ಆದರೆ, ಟೆಕ್ ತಜ್ಞರು ಮತ್ತು ವಿಜ್ಞಾನದ ಪ್ರಕಾರ, ನಿಮ್ಮ ಈ ನೆಮ್ಮದಿಯ ಹವ್ಯಾಸವೇ ನಿಮ್ಮ ಸ್ಮಾರ್ಟ್‌ಫೋನ್ ಪಾಲಿಗೆ ಮರಣಶಾಸನವಾಗುತ್ತಿದೆ!

ಹೌದು, ನೀವು ಕೇಳುತ್ತಿರುವುದು ನೂರಕ್ಕೆ ನೂರು ನಿಜ. ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಪ್ರತಿದಿನ ಕಂಪ್ಲೀಟ್ ಆಗಿ 100% ಚಾರ್ಜ್ ಮಾಡುವುದರಿಂದ ಅದರ ಬ್ಯಾಟರಿ ಆಯುಷ್ಯ ಅತ್ಯಂತ ವೇಗವಾಗಿ ಕ್ಷೀಣಿಸುತ್ತದೆ.

ಲಿಥಿಯಂ-ಐಯಾನ್ ಬ್ಯಾಟರಿಗಳ ಮೇಲಾಗುವ ‘ಕೆಮಿಕಲ್ ಸ್ಟ್ರೆಸ್’ ಏನು?

ಇವತ್ತಿನ ದಿನದ ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ‘ಲಿಥಿಯಂ-ಐಯಾನ್’ (Lithium-ion) ಬ್ಯಾಟರಿಗಳನ್ನು ಬಳಸಿರುತ್ತಾರೆ. ನಾವು ಫೋನ್ ಅನ್ನು ಪೂರ್ತಿಯಾಗಿ 100% ಚಾರ್ಜ್ ಮಾಡಿದಾಗ ಅಥವಾ ಸಂಪೂರ್ಣವಾಗಿ 0% ಗೆ ಇಳಿಸಿದಾಗ ಬ್ಯಾಟರಿಯ ಒಳಗಿನ ರಾಸಾಯನಿಕಗಳ ಮೇಲೆ ವಿಪರೀತ ಒತ್ತಡ (Chemical Stress) ಉಂಟಾಗುತ್ತದೆ.

ನೀವು ಗಮನಿಸಿರಬಹುದು; ಹೊಸದಾಗಿ ಫೋನ್ ಖರೀದಿಸಿದಾಗ ಬ್ಯಾಟರಿ ಲೈಫ್ ಅದ್ಭುತವಾಗಿರುತ್ತದೆ. ಆದರೆ ಒಂದು ವರ್ಷ ಕಳೆಯುತ್ತಿದ್ದಂತೆ ಬ್ಯಾಟರಿ ಬ್ಯಾಕಪ್ ಕಮ್ಮಿಯಾಗುತ್ತಾ ಬರುತ್ತದೆ. ಇದಕ್ಕೆ ನಾವು ದಿನಾಲೂ ಮಾಡುವ ಈ 100% ಚಾರ್ಜಿಂಗ್ ತಪ್ಪು ಮತ್ತು ಬ್ಯಾಟರಿ ಮೇಲಾಗುವ ಕೆಮಿಕಲ್ ಸ್ಟ್ರೆಸ್ ಆಯುಷ್ಯವನ್ನು ಕುಗ್ಗಿಸುವುದೇ ಮುಖ್ಯ ಕಾರಣ.

ಬ್ಯಾಟರಿ ದೀರ್ಘಕಾಲ ಬಾಳಿಕೆ ಬರಲು ಪಾಲಿಸಿ ’80-20 ರೂಲ್’!

ಹಾಗಾದರೆ ಫೋನ್ ಅನ್ನು ಎಷ್ಟು ಚಾರ್ಜ್ ಮಾಡಬೇಕು? ಬ್ಯಾಟರಿ ಎಕ್ಸ್‌ಪರ್ಟ್ಸ್ ಪ್ರಕಾರ, ಸ್ಮಾರ್ಟ್‌ಫೋನ್‌ಗಳ ದೀರ್ಘಾವಧಿ ಬಾಳಿಕೆಗೆ ’80-20 ನಿಯಮ’ (80-20 Rule) ಅತ್ಯಂತ ಸೂಕ್ತ ಹಾಗೂ ಬೆಸ್ಟ್.

20% ರೂಲ್: ನಿಮ್ಮ ಫೋನ್ ಚಾರ್ಜ್ 20% ಗೆ ಇಳಿದ ತಕ್ಷಣವೇ ಚಾರ್ಜರ್‌ಗೆ ಕನೆಕ್ಟ್ ಮಾಡಿ. ಚಾರ್ಜ್ ಪೂರ್ತಿ ಖಾಲಿಯಾಗುವವರೆಗೂ ಕಾಯಬೇಡಿ.

80% ರೂಲ್: ಮೊಬೈಲ್ ಚಾರ್ಜ್ 80% ತಲುಪಿದ ತಕ್ಷಣವೇ ಚಾರ್ಜಿಂಗ್ ಆಫ್ ಮಾಡಿಬಿಡಿ.

ನಿಮ್ಮ ಫೋನ್ ಬ್ಯಾಟರಿ ಮಟ್ಟ ಯಾವಾಗಲೂ ಶೇಕಡಾ 20 ರಿಂದ 80 ರ ಆಸುಪಾಸಿನಲ್ಲಿದ್ದರೆ, ಬ್ಯಾಟರಿಯ ಒಟ್ಟಾರೆ ಆಯಸ್ಸು ದುಪ್ಪಟ್ಟಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಇಂದೇ ಈ ಅಭ್ಯಾಸ ಬದಲಿಸಿಕೊಳ್ಳಿ

ನಿಮ್ಮ ಲಕ್ಷಾಂತರ ರೂಪಾಯಿ ಅಥವಾ ಕಷ್ಟದ ಗಳಿಕೆಯ ಸ್ಮಾರ್ಟ್‌ಫೋನ್ ದೀರ್ಘಕಾಲ ಸುಸ್ಥಿತಿಯಲ್ಲಿ ಇರಬೇಕೆಂದರೆ, ಇನ್ಮುಂದೆ ಫೋನ್ ಅನ್ನು 100% ಚಾರ್ಜ್ ಮಾಡಲು ಹೋಗಬೇಡಿ. ಅದರಲ್ಲೂ ವಿಶೇಷವಾಗಿ, ರಾತ್ರಿ ಇಡೀ ಚಾರ್ಜಿಂಗ್ ಇಟ್ಟು ಮಲಗುವ ಅಪಾಯಕಾರಿ ಹವ್ಯಾಸಕ್ಕೆ ಇಂದೇ ಬ್ರೇಕ್ ಹಾಕಿ. ನಿಮ್ಮ ಫೋನ್ ಬ್ಯಾಟರಿಯನ್ನು ನೀವೇ ಕಾಪಾಡಿಕೊಳ್ಳಿ!

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.