ಕೇರಳದಲ್ಲಿ ಮಳೆರಾಯನ ಅಟ್ಟಹಾಸ: ಸುರಂಗ ಮಾರ್ಗದ ಬಳಿ ಗುಡ್ಡ ಕುಸಿದು 30ಕ್ಕೂ ಹೆಚ್ಚು ಜನ ಮಣ್ಣಿನಡಿ ಲಾಕ್!
ಎರಡು ವರ್ಷಗಳ ಹಿಂದೆ ಕೇರಳದ ವಯನಾಡಿನ ಚೂರಲ್ಮಲದಲ್ಲಿ ನೂರಾರು ಜೀವಗಳನ್ನು ಬಲಿಪಡೆದಿದ್ದ ಭೀಕರ ಭೂಕುಸಿತದ ಕಹಿ ನೆನಪು ಮಾಸುವ ಮುನ್ನವೇ, ವಯನಾಡಿನಲ್ಲಿ ಮತ್ತೊಂದು ಅತ್ಯಂತ ಆಘಾತಕಾರಿ ದುರಂತ ಸಂಭವಿಸಿದೆ. ವಯನಾಡಿನ ಮೆಪ್ಪಾಡಿ ಎಂಬಲ್ಲಿ ಭಾರೀ ಮಳೆಯಿಂದಾಗಿ ಭೀಕರ ಭೂಕುಸಿತ (Landslide) ಉಂಟಾಗಿದ್ದು, ಇಬ್ಬರು ಕಾರ್ಮಿಕರು ದುರಂತವಾಗಿ ಸಾವನ್ನಪ್ಪಿದ್ದಾರೆ.

ತಿರುವನಂತಪುರಂ: ಎರಡು ವರ್ಷಗಳ ಹಿಂದೆ ಕೇರಳದ ವಯನಾಡಿನ ಚೂರಲ್ಮಲದಲ್ಲಿ ನೂರಾರು ಜೀವಗಳನ್ನು ಬಲಿಪಡೆದಿದ್ದ ಭೀಕರ ಭೂಕುಸಿತದ ಕಹಿ ನೆನಪು ಮಾಸುವ ಮುನ್ನವೇ, ವಯನಾಡಿನಲ್ಲಿ ಮತ್ತೊಂದು ಅತ್ಯಂತ ಆಘಾತಕಾರಿ ದುರಂತ ಸಂಭವಿಸಿದೆ. ವಯನಾಡಿನ ಮೆಪ್ಪಾಡಿ ಎಂಬಲ್ಲಿ ಭಾರೀ ಮಳೆಯಿಂದಾಗಿ ಭೀಕರ ಭೂಕುಸಿತ (Landslide) ಉಂಟಾಗಿದ್ದು, ಇಬ್ಬರು ಕಾರ್ಮಿಕರು ದುರಂತವಾಗಿ ಸಾವನ್ನಪ್ಪಿದ್ದಾರೆ.
ವಯನಾಡಿನ ಸುರಂಗ ಮಾರ್ಗ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಪ್ರದೇಶದ ಮೀನಾಕ್ಷಿ ಸೇತುವೆ ಬಳಿ ಈ ಭೂಕುಸಿತ ಸಂಭವಿಸಿದೆ. ಗುಡ್ಡ ಕುಸಿದು ಮಣ್ಣಿನ ರಾಶಿ ಬಿದ್ದ ಪರಿಣಾಮ ಸ್ಥಳದಲ್ಲೇ ಇಬ್ಬರು ಕಾರ್ಮಿಕರು ಜೀವಂತ ಸಮಾಧಿಯಾಗಿದ್ದಾರೆ. ಇನ್ನು ಘಟನಾ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಬರೋಬ್ಬರಿ 30ಕ್ಕೂ ಹೆಚ್ಚು ಕಾರ್ಮಿಕರು ಹಾಗೂ ಸ್ಥಳೀಯರು ಮಣ್ಣಿನ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಭೀತಿ ಎದುರಾಗಿದೆ.
ಸ್ಥಳದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಭಾರಿ ಹಿನ್ನಡೆಯಾಗಿದೆ. ಆದರೂ ಸ್ಥಳೀಯ ಆಡಳಿತ, ಅಗ್ನಿಶಾಮಕ ದಳ ಮತ್ತು ವಿಪತ್ತು ನಿರ್ವಹಣಾ ಸಿಬ್ಬಂದಿ ಜೆಸಿಬಿಗಳ ಸಹಾಯದಿಂದ ಮಣ್ಣನ್ನು ಸರಿಸಿ ಸಿಲುಕಿರುವವರನ್ನು ಹೊರತೆಗೆಯಲು ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ದುರಂತ ಸಂಭವಿಸುತ್ತಿದ್ದಂತೆ ಸ್ಥಳೀಯರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದ್ದು, ಆಸ್ಪತ್ರೆಗಳನ್ನು ಕಟ್ಟೆಚ್ಚರದಲ್ಲಿ ಇಡಲಾಗಿದೆ.

