ರಕ್ಷಾಬಂಧನಕ್ಕೆ ಸರ್ಕಾರದ ಗಿಫ್ಟ್! ಮಹಿಳೆಯರಿಗೆ ತಿಂಗಳಿಗೆ 2500 ಸಿಗುವ ಹೊಸ ಯೋಜನೆ
ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ತಿಂಗಳಿಗೆ 2500 ರೂಪಾಯಿ ಆರ್ಥಿಕ ನೆರವು ನೀಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ರಕ್ಷಾಬಂಧನದಂದು ಆರಂಭಿಸಲು ಸರ್ಕಾರ ಸಿದ್ಧತೆ ನಡೆಸಿದ್ದು, ಲಕ್ಷಾಂತರ ಮಹಿಳೆಯರಿಗೆ ಇದರ ಲಾಭ ದೊರೆಯುವ ನಿರೀಕ್ಷೆಯಿದೆ.

ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಮಾಸಿಕ ಆರ್ಥಿಕ ನೆರವು ನೀಡುವ ಉದ್ದೇಶದಿಂದ ದೆಹಲಿ ಸರ್ಕಾರ ಮಹತ್ವದ ಯೋಜನೆಯನ್ನು ಜಾರಿಗೆ ತರಲು ಸಜ್ಜಾಗಿದೆ. ರಕ್ಷಾಬಂಧನದ ಪ್ರಯುಕ್ತ ಆರಂಭವಾಗಲಿರುವ ಈ ಯೋಜನೆಯಡಿ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2,500 ರೂಪಾಯಿ ನೇರವಾಗಿ ಜಮೆಯಾಗಲಿದೆ.
ಈ ಯೋಜನೆಯನ್ನು ಅಧಿಕೃತವಾಗಿ ದೆಹಲಿ ಲಕ್ಷ್ಮಿ ಯೋಜನೆ ಹೆಸರಿನಲ್ಲಿ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಂದ ರಕ್ಷಾಬಂಧನದ ದಿನ ಉದ್ಘಾಟನೆ ಮಾಡುವ ಸಿದ್ಧತೆ ನಡೆಯುತ್ತಿದೆ.
ಯೋಜನೆಗಾಗಿ 2026 ರಿಂದ 27ನೇ ಸಾಲಿನ ಬಜೆಟ್‌ನಲ್ಲಿ 5,100 ಕೋಟಿ ರೂಪಾಯಿಗೂ ಅಧಿಕ ಅನುದಾನ ಮೀಸಲಿಡಲಾಗಿದೆ. ದೆಹಲಿಯಾದ್ಯಂತ ಸುಮಾರು 17 ರಿಂದ 22 ಲಕ್ಷ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆಯುವ ಸಾಧ್ಯತೆ ಇದೆ ಎಂದು ಸರ್ಕಾರ ಅಂದಾಜಿಸಿದೆ.
ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ವಿಶೇಷ ಆನ್‌ಲೈನ್ ನೋಂದಣಿ ಪೋರ್ಟಲ್ ಹಾಗೂ ಮೊಬೈಲ್ ಅಪ್ಲಿಕೇಶನ್ ಸಿದ್ಧಪಡಿಸಲಾಗಿದೆ. ಅರ್ಹತಾ ಪರಿಶೀಲನೆಯ ಬಳಿಕ ಯಾವುದೇ ಮಧ್ಯವರ್ತಿಗಳಿಲ್ಲದೆ ನೇರ ಲಾಭ ವರ್ಗಾವಣೆ ವ್ಯವಸ್ಥೆಯ ಮೂಲಕ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತದೆ.
ಯಾರಿಗೆ ಸಿಗಲಿದೆ ಸೌಲಭ್ಯ
21 ರಿಂದ 59 ವರ್ಷದೊಳಗಿನ ಮಹಿಳೆಯರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ದೆಹಲಿಯ ಶಾಶ್ವತ ನಿವಾಸಿಯಾಗಿದ್ದು, ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ಹೊಂದಿರುವುದು ಕಡ್ಡಾಯವಾಗಿದೆ. ಬಡತನ ರೇಖೆಗಿಂತ ಕೆಳಗಿನ ಅಥವಾ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೇರಿದ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ. ಪಡಿತರ ಚೀಟಿ ಹೊಂದಿರುವವರಿಗೆ ಹೆಚ್ಚಿನ ಆದ್ಯತೆ ಇರಲಿದೆ.
ಸರ್ಕಾರಿ ನೌಕರರ ಕುಟುಂಬದ ಮಹಿಳೆಯರು, ಆದಾಯ ತೆರಿಗೆ ಪಾವತಿಸುವ ಕುಟುಂಬಗಳು, ಈಗಾಗಲೇ ಇತರೆ ಸರ್ಕಾರಿ ಪಿಂಚಣಿ ಯೋಜನೆಗಳ ಫಲಾನುಭವಿಗಳು ಹಾಗೂ ಸ್ವಂತ ಕಾರು ಹೊಂದಿರುವ ಕುಟುಂಬಗಳ ಮಹಿಳೆಯರಿಗೆ ಈ ಯೋಜನೆ ಅನ್ವಯಿಸುವುದಿಲ್ಲ. ಒಂದು ಕುಟುಂಬದಲ್ಲಿ ಒಬ್ಬ ಮಹಿಳೆಗೆ ಮಾತ್ರ ಈ ಸೌಲಭ್ಯ ದೊರೆಯಲಿದೆ.

