ಕನ್ನಡಿಗರಿಗೆ NEET ಸಾರಥ್ಯ : ನೀಟ್ ಬಿಕ್ಕಟ್ಟು ಶಮನಕ್ಕೆ ಮೋದಿ ಮಂತ್ರ, ಶಿಕ್ಷಣಕ್ಕೆ ಜೋಷಿ, ಪರೀಕ್ಷಾ ಸುಧಾರಣೆಗೆ ನಿಲೇಕಣಿ ಸಾರಥ್ಯ
ಪರೀಕ್ಷಾ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಆಧಾರಿತ ಪಾರದರ್ಶಕತೆ ತರಲು ಪ್ರಧಾನಿ ಮೋದಿ ಅವರು ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಕಾರ್ಯಪಡೆಯನ್ನು ರಚಿಸಿದ್ದಾರೆ.

ಬೆಂಗಳೂರು : ಭಾರತದದಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಬಿಕ್ಕಟ್ಟನ್ನು ಶಾಂತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಕನ್ನಡಿಗರ ಮೇಲೆ ಅತ್ಯಂತ ದೊಡ್ಡ ಭರವಸೆ ಮತ್ತು ನಂಬಿಕೆಯನ್ನು ಇಟ್ಟಿದ್ದಾರೆ.
ನೀಟ್ ಪರೀಕ್ಷಾ ವಿವಾದದ ತೀವ್ರತೆಗೆ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ದೇಶದ ಅತ್ಯಂತ ಮಹತ್ವದ ಹಾಗೂ ಸೂಕ್ಷ್ಮವಾದ ಶಿಕ್ಷಣ ಸಚಿವಾಲಯದ ಚುಕ್ಕಾಣಿಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಹೆಚ್ಚುವರಿಯಾಗಿ ಹಂಚಿಕೆ ಮಾಡಲಾಗಿದೆ.
ಇದರ ಬೆನ್ನಲ್ಲೇ ದೇಶದ ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸುಧಾರಿಸುವ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು ಪುನಶ್ಚೇತನಗೊಳಿಸುವ ಜವಾಬ್ದಾರಿಯನ್ನು ಮತ್ತೊಬ್ಬ ಪ್ರಮುಖ ಕನ್ನಡಿಗ, ಆಧಾರ್ ಶಿಲ್ಪಿ ನಂದನ್ ನಿಲೇಕಣಿ ಅವರಿಗೆ ವಹಿಸಲಾಗಿದೆ.
ಹಾಲಿ ಕೇಂದ್ರ ಪಡಿತರ, ಗ್ರಾಹಕ ವ್ಯವಹಾರ ಹಾಗೂ ನವೀಕೃತ ಇಂಧನ ಸಚಿವರಾಗಿರುವ ಪ್ರಹ್ಲಾದ್ ಜೋಶಿ ಅವರು ಈಗಾಗಲೇ ಶಿಕ್ಷಣ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದು, ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಮಹತ್ವದ ಸಮಾಲೋಚನೆ ನಡೆಸಿದ್ದಾರೆ.
ಪ್ರಧಾನಿಯವರು ತಮ್ಮ ಮೇಲೆ ಇಟ್ಟಿರುವ ಭರವಸೆಯನ್ನು ಉಳಿಸಿಕೊಳ್ಳುವುದಾಗಿ ಹೇಳಿರುವ ಜೋಶಿ, ಇಲಾಖೆಯ ಕಾರ್ಯವೈಖರಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡು ಮುಂದಿನ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ದೇಶದ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಯಾಗಿರುವ ಈ ಇಲಾಖೆಯನ್ನು ಮುನ್ನಡೆಸಲು ಕನ್ನಡಿಗ ನಾಯಕನಿಗೆ ಮೋದಿಯವರು ಮಣೆ ಹಾಕಿರುವುದು ರಾಜ್ಯದ ಮಟ್ಟಿಗೆ ಮಹತ್ವದ ರಾಜಕೀಯ ಬೆಳವಣಿಗೆಯಾಗಿದೆ.
ಇನ್ನು ಕೇವಲ ಸಚಿವ ಸ್ಥಾನ ಮಾತ್ರವಲ್ಲದೆ, ಪರೀಕ್ಷಾ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಆಧಾರಿತ ಪಾರದರ್ಶಕತೆ ತರಲು ಪ್ರಧಾನಿ ಮೋದಿ ಅವರು ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಕಾರ್ಯಪಡೆಯನ್ನು ರಚಿಸಿದ್ದಾರೆ.
ಈ ಮೂಲಕ ನೀಟ್ನಂತಹ ದೇಶದ ಅತಿ ದೊಡ್ಡ ಪರೀಕ್ಷೆಗಳಲ್ಲಿ ನಡೆದಿರುವ ಲೋಪದೋಷಗಳನ್ನು ಸರಿಪಡಿಸುವ ಹಾಗೂ ಭವಿಷ್ಯದಲ್ಲಿ ಇಂತಹ ಅಕ್ರಮಗಳು ಮರುಕಳಿಸದಂತೆ ತಡೆಯುವ ಸಂಪೂರ್ಣ ಹೊಣೆಗಾರಿಕೆಯನ್ನು ಇಬ್ಬರು ಕನ್ನಡಿಗರ ಹೆಗಲಿಗೇ ವಹಿಸಿದಂತಾಗಿದೆ. ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಇಡೀ ದೇಶದ ಶಿಕ್ಷಣ ವ್ಯವಸ್ಥೆಯನ್ನು ತಹಬದಿಗೆ ತರಲು ಮೋದಿ ಸರ್ಕಾರ ಕೈಗೊಂಡಿರುವ ಈ ನಿರ್ಧಾರವು ಕನ್ನಡಿಗರ ದಕ್ಷತೆ ಮತ್ತು ಆಡಳಿತಾತ್ಮಕ ಸಾಮರ್ಥ್ಯಕ್ಕೆ ಸಂದ ದೊಡ್ಡ ಮನ್ನಣೆಯಾಗಿದೆ.
Narendra Modi Neet Masterplan Kannadigas Take Charge Of NEET Reforms

