ಕಾಪು: ಬಸ್ ಟೈಮಿಂಗ್ಸ್ ವಿಚಾರಕ್ಕೆ ಗಲಾಟೆ; ಎಕ್ಸ್ಪ್ರೆಸ್ ಬಸ್ಗಳ ನಡುವೆ ಉದ್ದೇಶಪೂರ್ವಕ ಡಿಕ್ಕಿ
ಬಸ್ ಟೈಮಿಂಗ್ಸ್ ವಿಚಾರದ ವೈಷಮ್ಯದಿಂದಾಗಿ ಪ್ರಯಾಣಿಕರಿಂದ ತುಂಬಿದ್ದ ಎರಡು ಎಕ್ಸ್ಪ್ರೆಸ್ ಬಸ್ಗಳು ಉದ್ದೇಶಪೂರ್ವಕವಾಗಿ ಪರಸ್ಪರ ಗುದ್ದಿಕೊಂಡಿರುವ ಆಘಾತಕಾರಿ ಘಟನೆ ಕಾಪು ಬಸ್ ನಿಲ್ದಾಣದ ಬಳಿ ನಡೆದಿದೆ.

ಕಾಪು: ಬಸ್ ಟೈಮಿಂಗ್ಸ್ ವಿಚಾರದ ವೈಷಮ್ಯದಿಂದಾಗಿ ಪ್ರಯಾಣಿಕರಿಂದ ತುಂಬಿದ್ದ ಎರಡು ಎಕ್ಸ್ಪ್ರೆಸ್ ಬಸ್ಗಳು ಉದ್ದೇಶಪೂರ್ವಕವಾಗಿ ಪರಸ್ಪರ ಗುದ್ದಿಕೊಂಡಿರುವ ಆಘಾತಕಾರಿ ಘಟನೆ ಕಾಪು ಬಸ್ ನಿಲ್ದಾಣದ ಬಳಿ ನಡೆದಿದೆ. ಉಡುಪಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಆನಂದ್ ಟ್ರಾವೆಲ್ಸ್ ಮತ್ತು ಸಂದೇಶ್ ಟ್ರಾವೆಲ್ಸ್ ಬಸ್ಗಳ ನಡುವೆ ಘಟನೆ ನಡೆದಿದೆ.
ಮಾಹಿತಿಯ ಪ್ರಕಾರ, ಬಸ್ಸಿನ ಟೈಮಿಂಗ್ಸ್ (ಸಮಯದ ವೇಳಾಪಟ್ಟಿ) ವಿಚಾರವಾಗಿ ಈ ಎರಡೂ ಬಸ್ಸುಗಳ ನಿರ್ವಾಹಕರು ಹಾಗೂ ಸಿಬ್ಬಂದಿ ನಡುವೆ ಉದ್ಯಾವರದಿಂದಲೇ ತೀವ್ರ ವಾಗ್ವಾದ ನಡೆದಿತ್ತು. ಪರಸ್ಪರ ಮುನ್ನುಗ್ಗುವ ಸ್ಪರ್ಧೆಯಲ್ಲಿದ್ದ ಈ ಬಸ್ಗಳು ಕಾಪು ಬಸ್ ನಿಲ್ದಾಣದ ತನಕವೂ ಜಟಾಪಟಿ ನಡೆಸುತ್ತಾ ಬಂದಿದ್ದವು.
ಸಂದೇಶ್ ಟ್ರಾವೆಲ್ಸ್ ಬಸ್ ಕಾಪು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಲು ನಿಂತಿದ್ದ ವೇಳೆ, ಹಿಂದಿನಿಂದ ಅತಿವೇಗವಾಗಿ ಬಂದ ಆನಂದ್ ಟ್ರಾವೆಲ್ಸ್ ಬಸ್ ಅದರ ಹಿಂಬದಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಬಸ್ಗಳು ಈ ರೀತಿ ನೇರವಾಗಿ ಗುದ್ದಿಕೊಳ್ಳುತ್ತಿದ್ದಂತೆ ಬಸ್ಸಿನೊಳಗಿದ್ದ ಪ್ರಯಾಣಿಕರು ದಿಢೀರ್ ಆಘಾತಗೊಂಡು ಭಯಭೀತರಾದರು. ಡಿಕ್ಕಿಯ ರಭಸಕ್ಕೆ ಕೆಲವರಿಗೆ ಸಣ್ಣಪುಟ್ಟ ಆತಂಕ ಉಂಟಾಯಿತು.
ಡಿಕ್ಕಿ ಹೊಡೆದ ಬಳಿಕವೂ ತಣ್ಣಗಾಗದ ಎರಡೂ ಬಸ್ಗಳ ಚಾಲಕರು ಮತ್ತು ನಿರ್ವಾಹಕರು ನಡುರಸ್ತೆಯಲ್ಲೇ ಪರಸ್ಪರ ಬಾಯ್ಮಾತಿನ ಜಗಳಕ್ಕಿಳಿದರು. ಇದರಿಂದಾಗಿ ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ಇTರ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಕೆಲಕಾಲ ಭಾರೀ ತೊಂದರೆಯುಂಟಾಯಿತು.
ಸ್ಥಳದಲ್ಲಿ ಸಾರ್ವಜನಿಕರು ಹಾಗೂ ಪ್ರಯಾಣಿಕರಿಂದ ಮಾಹಿತಿ ಪಡೆದ ಕಾಪು ಪೊಲೀಸರು ಕೂಡಲೇ ಧಾವಿಸಿ ಬಂದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಬಳಿಕ ಸಾರ್ವಜನಿಕರಿಗೆ ಹಾಗೂ ಸಂಚಾರಕ್ಕೆ ಅಡ್ಡಿಯುಂಟು ಮಾಡಿದ ಆ ಎರಡೂ ಬಸ್ಗಳನ್ನು ವಶಕ್ಕೆ ಪಡೆದು ಠಾಣೆಗೆ ಕೊಂಡೊಯ್ದಿದ್ದಾರೆ. ನಿರ್ಲಕ್ಷ್ಯ ಹಾಗೂ ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟವಾಡಿದ ಬಸ್ ಸಿಬ್ಬಂದಿಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

