ಬೆಂಗಳೂರು : ಕಸ ಎಸೆದ್ರೆ ಜೈಲೂಟ ಫಿಕ್ಸ್ : ಕಸದ ಬ್ಲಾಕ್ ಸ್ಪಾಟ್‌ ಮುಕ್ತ ಬೆಂಗಳೂರಿಗೆ ಜಿಬಿಎ ಬಿಗ್ ಆ್ಯಕ್ಷನ್

ಬೆಂಗಳೂರು ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿದ್ದ ಕಸದ ಬ್ಲಾಕ್ ಸ್ಪಾಟ್‌ಗಳನ್ನು ತೆರವುಗೊಳಿಸಿದ ಜಾಗದಲ್ಲಿ ಮತ್ತೆ ಕಸ ಎಸೆಯುವ ಸಾರ್ವಜನಿಕರಿಗೆ ಪಾಠ ಕಲಿಸಲು ಅಧಿಕಾರಿಗಳು ಈಗ ನೇರವಾಗಿ ಕಾನೂನು ಅಸ್ತ್ರವನ್ನು ಬಳಸುತ್ತಿದ್ದಾರೆ.

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರು ನಗರದಲ್ಲಿ ಕಸದ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಲು ಮತ್ತು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡಲು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಬೆಂಗಳೂರು ಉತ್ತರ ನಗರ ಪಾಲಿಕೆ ಅಧಿಕಾರಿಗಳು ಭಾರಿ ಮುನ್ನೆಚ್ಚರಿಕೆ ಹಾಗೂ ಕಠಿಣ ಕ್ರಮಗಳಿಗೆ ಮುಂದಾಗಿದ್ದಾರೆ.

ಬೆಂಗಳೂರು ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿದ್ದ ಕಸದ ಬ್ಲಾಕ್ ಸ್ಪಾಟ್‌ಗಳನ್ನು ತೆರವುಗೊಳಿಸಿದ ಜಾಗದಲ್ಲಿ ಮತ್ತೆ ಕಸ ಎಸೆಯುವ ಸಾರ್ವಜನಿಕರಿಗೆ ಪಾಠ ಕಲಿಸಲು ಅಧಿಕಾರಿಗಳು ಈಗ ನೇರವಾಗಿ ಕಾನೂನು ಅಸ್ತ್ರವನ್ನು ಬಳಸುತ್ತಿದ್ದಾರೆ. ಇದರ ಮೊದಲ ಭಾಗವಾಗಿ, ಇತ್ತೀಚೆಗೆ ಸ್ವಚ್ಛಗೊಳಿಸಲಾಗಿದ್ದ ಸಾರ್ವಜನಿಕ ಸ್ಥಳದಲ್ಲಿ ತಡರಾತ್ರಿ ಕಸ ಎಸೆಯುತ್ತಿದ್ದ ನಾಲ್ವರ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಗಂಭೀರ ಪ್ರಕರಣ ದಾಖಲಿಸಲಾಗಿದೆ.

ಬೆಂಗಳೂರು ಉತ್ತರ ನಗರ ಪಾಲಿಕೆಯ ಸರ್ವಜ್ಞನಗರ ವಿಭಾಗದ ಬಾಣಸವಾಡಿ 7ನೇ ಮುಖ್ಯರಸ್ತೆಯಲ್ಲಿದ್ದ ಕಸದ ಬ್ಲಾಕ್ ಸ್ಪಾಟ್ ಅನ್ನು ಸಂಪೂರ್ಣವಾಗಿ ತೆರವುಗೊಳಿಸಿ, ಸೌಂದರ್ಯೀಕರಣ ಗೊಳಿಸಲಾಗಿತ್ತು. ಆ ಜಾಗದಲ್ಲಿ ಸಾರ್ವಜನಿಕರು ಮತ್ತೆ ಕಸ ಹಾಕದಂತೆ ನಿಗಾ ಇಡಲು ವಾರ್ಡ್ ಮಾರ್ಷಲ್‌ಗಳನ್ನು ನಿಯೋಜಿಸಲಾಗಿತ್ತು.

ಜುಲೈ 16ರಂದು ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಾರ್ಷಲ್‌ಗಳು, ನಾಲ್ವರು ವ್ಯಕ್ತಿಗಳು ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ತ್ಯಾಜ್ಯ ಎಸೆಯುತ್ತಿರುವುದನ್ನು ಪತ್ತೆ ಹಚ್ಚಿ ಸ್ಥಳದಲ್ಲೇ ತಡೆದಿದ್ದಾರೆ. ನಿಯಮದ ಪ್ರಕಾರ ದಂಡ ಪಾವತಿಸುವಂತೆ ಸೂಚಿಸಿದಾಗ, ಮಾರ್ಷಲ್‌ಗಳ ಜೊತೆ ಗಲಾಟೆ ಮಾಡಿದ ಆ ವ್ಯಕ್ತಿಗಳು ದಂಡ ಕಟ್ಟಲು ನಿರಾಕರಿಸಿ, ಕಸವನ್ನು ಅಲ್ಲೇ ಬಿಸಾಡಿ ಪರಾರಿಯಾಗಿದ್ದರು.

ಈ ಬೇಜವಾಬ್ದಾರಿ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮದ ಸಹಾಯಕ ಪ್ರಧಾನ ವ್ಯವಸ್ಥಾಪಕರು ತಕ್ಷಣವೇ ಬಾಣಸವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಭಾರತೀಯ ನ್ಯಾಯ ಸಂಹಿತೆ , 2023ರ ಕಲಂ 280ರ ಅಡಿಯಲ್ಲಿ ಸಾರ್ವಜನಿಕ ಸ್ವಚ್ಛತೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಸಾರ್ವಜನಿಕ ಸ್ಥಳಗಳನ್ನು ಕಸ ಮುಕ್ತವಾಗಿಡಲು ಜಿಬಿಎ ಅತ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲೂ ಸಾರ್ವಜನಿಕ ಸ್ವಚ್ಛತೆಗೆ ಧಕ್ಕೆ ತರುವ ಇಂತಹ ಕಿಡಿಗೇಡಿಗಳ ವಿರುದ್ಧ ದಂಡಾತ್ಮಕ ಹಾಗೂ ಕಠಿಣ ಕಾನೂನು ಕ್ರಮಗಳು ಮುಂದುವರಿಯಲಿವೆ ಎಂದು ಪಾಲಿಕೆಯ ಅಧಿಕಾರಿಗಳು ಭಾರಿ ಎಚ್ಚರಿಕೆ ನೀಡಿದ್ದಾರೆ.

Bengaluru Garbage Rules GBA Warns of Jail Term for Dumping Trash in Public Places

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »