ಸಿಲಿಕಾನ್‌ ಸಿಟಿಯಲ್ಲಿ ಮುಂದುವರಿದ ರೇವ್ ಪಾರ್ಟಿ: ವಿಲ್ಲಾ ಮೇಲೆ ಸಿಸಿಬಿ ದಾಳಿ, ಮೂವರ ಬಂಧನ!

ಪ್ರತಿಷ್ಠಿತ ಐಪಿಎಸ್‌ ಲೇಔಟ್‌ನಲ್ಲಿ ರಹಸ್ಯವಾಗಿ ನಡೆಯುತ್ತಿದ್ದ ಅಕ್ರಮ ರೇವ್‌ ಪಾರ್ಟಿ (Rave Party) ಮೇಲೆ ಸಿಸಿಬಿ ಮಹಿಳಾ ಘಟಕದ ಪೊಲೀಸರು ದಿಢೀರ್ ದಾಳಿ ನಡೆಸಿ, ಮೂವರು ಆಯೋಜಕರನ್ನು ಬಂಧಿಸಿದ್ದಾರೆ.

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಸಿಸಿಬಿ ಪೊಲೀಸರು ಚುರುಕುಗೊಂಡಿದ್ದು, ಪ್ರತಿಷ್ಠಿತ ಐಪಿಎಸ್‌ ಲೇಔಟ್‌ನಲ್ಲಿ ರಹಸ್ಯವಾಗಿ ನಡೆಯುತ್ತಿದ್ದ ಅಕ್ರಮ ರೇವ್‌ ಪಾರ್ಟಿ (Rave Party) ಮೇಲೆ ಸಿಸಿಬಿ ಮಹಿಳಾ ಘಟಕದ ಪೊಲೀಸರು ದಿಢೀರ್ ದಾಳಿ ನಡೆಸಿ, ಮೂವರು ಆಯೋಜಕರನ್ನು ಬಂಧಿಸಿದ್ದಾರೆ. ಪಾರ್ಟಿಯಲ್ಲಿದ್ದ ಯುವತಿಯರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಎಚ್‌ಎಸ್‌ಆರ್ ಲೇಔಟ್‌ನ 6ನೇ ಸೆಕ್ಟರ್‌ನಲ್ಲಿರುವ ಪ್ರತಿಷ್ಠಿತ ಐಪಿಎಸ್‌ ಲೇಔಟ್‌ನ ‘ಸಿ-9’ ಸರ್ವಿಸ್ ವಿಲ್ಲಾವನ್ನು (‘ರೆವ್ ಕೀ ಹಾಸ್ಪಿಟಾಲಿಟಿ ಸರ್ವಿಸ್’) ದಿನಕ್ಕೆ 20,000 ರೂ. ಬಾಡಿಗೆಗೆ ಪಡೆದು ಈ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಪೊಲೀಸರ ಕಣ್ಣಿಗೆ ಬೀಳದಂತೆ ಅತ್ಯಂತ ಸುರಕ್ಷಿತ ಸ್ಥಳವೆಂದು ಭಾವಿಸಿ ಇಲ್ಲಿ ಮೋಜು-ಮಸ್ತಿಗೆ ಯೋಜನೆ ರೂಪಿಸಲಾಗಿತ್ತು.

ಯಾರಿಗೂ ಅನುಮಾನ ಬಾರದಂತೆ ಎಚ್ಚರಿಕೆ ವಹಿಸಿದ್ದ ಆಯೋಜಕರು, ಅಮಿಗೋಸ್’ (Amigos) ಎಂಬ ಮೊಬೈಲ್ ಆ್ಯಪ್‌ ಮೂಲಕ ಯುವಕ-ಯುವತಿಯರನ್ನು ಪಾರ್ಟಿಗೆ ಆಹ್ವಾನಿಸಿದ್ದರು. ಅಷ್ಟೇ ಅಲ್ಲದೆ, ಪ್ರವೇಶಕ್ಕಾಗಿ ದರ ನಿಗದಿಪಡಿಸಲಾಗಿದ್ದು, ಯುವಕರಿಗೆ 1,099 ರೂ. ಹಾಗೂ ಯುವತಿಯರಿಗೆ 499 ರೂ.ಗಳಂತೆ ಎಂಟ್ರಿ ಫೀಸ್ ವಸೂಲಿ ಮಾಡಲಾಗಿತ್ತು. ಇಡೀ ರಾತ್ರಿ ಮದ್ಯ, ನಿಷೇಧಿತ ಹುಕ್ಕಾ ಹಾಗೂ ಇ-ಸಿಗರೇಟ್‌ಗಳೊಂದಿಗೆ ಪಾರ್ಟಿ ಜೋರಾಗಿ ನಡೆದಿತ್ತು.

ಖಚಿತ ಮಾಹಿತಿ ಆಧರಿಸಿ ಮಧ್ಯರಾತ್ರಿ ದಾಳಿ ನಡೆಸಿದ ಸಿಸಿಬಿ ಮಹಿಳಾ ಘಟಕದ ಅಧಿಕಾರಿಗಳು, ಸ್ಥಳದಲ್ಲಿದ್ದ ನಿಷೇಧಿತ ಹುಕ್ಕಾ, ಇ-ಸಿಗರೇಟ್‌ ಹಾಗೂ ಅಪಾರ ಪ್ರಮಾಣದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ರೇವ್‌ ಪಾರ್ಟಿ ಆಯೋಜಿಸಿದ್ದ ದೀಕ್ಷಿತ್, ವೇದಾಂತ್ ಪಂಡಿತ್ ಹಾಗೂ ಶಂಕರ್ ಎಂಬ ಮೂವರನ್ನು ಬಂಧಿಸಲಾಗಿದೆ. ಅಲ್ಲದೆ, ನಿಯಮ ಉಲ್ಲಂಘಿಸಿ ಇಂತಹ ಅಕ್ರಮ ಚಟುವಟಿಕೆಗೆ ವಿಲ್ಲಾ ಬಾಡಿಗೆಗೆ ನೀಡಿದ್ದ ಮನೆ ಮಾಲೀಕರ ವಿರುದ್ಧವೂ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.