ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಪತಿ ಉದ್ಯಮಿ ರಾಜ್ ಕುಂದ್ರಾಗೆ ಇಂದು ಮಹತ್ವದ ದಿನ. ನೀಲಿಚಿತ್ರಗಳ ತಯಾರಿಕೆ ಹಾಗೂ ಪ್ರಸಾರದ ಆರೋಪದಡಿಯಲ್ಲಿ ಬಂಧನಕ್ಕೊಳಗಾಗಿರುವ ರಾಜ್ ಕುಂದ್ರಾ ಇಂದು ನ್ಯಾಯಾಲಯಕ್ಕೆ ಹಾಜರಾಗಲಿದ್ದು, 14 ವರ್ಷಗಳ ಬಳಿಕ ಬಾಲಿವುಡ್ ಗೆ ಮರಳಿ ಬಣ್ಣ ಹಚ್ಚಿದ ಶಿಲ್ಪಾ ಶೆಟ್ಟಿ ಮೂವಿಯೂ ಇಂದು ತೆರೆ ಕಾಣಲಿದೆ.

ಹಲವು ಹಿಟ್ ಚಿತ್ರಗಳ ಮೂಲಕ ಬಾಲಿವುಡ್ ನ್ನು ಆಳಿದ ನಟಿ ಶಿಲ್ಪಾ ಶೆಟ್ಟಿ 14 ವರ್ಷಗಳಿಂದ ಯಾವುದೇ ಸಿನಿಮಾದಲ್ಲಿ ನಟಿಸಿರಲಿಲ್ಲ. 14 ವರ್ಷಗಳ ಬಳಿ ಶಿಲ್ಪಾ ಶೆಟ್ಟಿ ಹಂಗಾಮಾ ಸಿನಿಮಾದ ಮೂಲಕ ಬಾಲಿವುಡ್ ನಲ್ಲಿ ಮತ್ತೆ ಬಣ್ಣ ಹಚ್ಚಿದ್ದಾರೆ. ಸಂಪೂರ್ಣ ಕಾಮೆಡಿ ಸಿನಿಮಾ ಹಂಗಾಮಾ 2 ಡಿಸ್ನಿ ಹಾಟ್ ಸ್ಟಾರ್ ನಲ್ಲಿ ಇಂದು ಬಿಡುಗಡೆಯಾಗಿದೆ.

ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಈ ಸಿನಿಮಾದಲ್ಲಿ ಪರೇಶ್ ರಾವಲ್ ಗೆ ಜೋಡಿಯಾಗಿದ್ದು, ಇನ್ನೊಂದು ಹಿರೋಯಿನ್ ಪಾತ್ರದಲ್ಲಿ ಕನ್ನಡತಿ ಪ್ರಣತಿ ಮಿಂಚಿದ್ದಾರೆ. ಒಂದೆಡೆ ಶಿಲ್ಪಾ ಶೆಟ್ಟಿ ಕಮ್ ಬ್ಯಾಕ್ ನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲವಾದರೇ ಇನ್ನೊಂದೆಡೆ ನೀಲಿ ಚಿತ್ರ ತಯಾರಿಕೆ ಆರೋಪದಡಿ ಜೈಲು ಸೇರಿರುವ ರಾಜ್ ಕುಂದ್ರಾ ಭವಿಷ್ಯ ಕೂಡ ಇಂದು ನಿರ್ಣಯವಾಗಲಿದೆ.

ರಾಜ್ ಕುಂದ್ರಾ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಲಿದ್ದು, ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ರಾಜ್ ಕುಂದ್ರಾ ಹಾಗೂ ಇತರ 9 ಜನರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಪತಿ ಬಂಧನದ ಹಿನ್ನೆಲೆಯಲ್ಲಿ ತಮ್ಮ ಸೆಕೆಂಡ್ ಇನ್ನಿಂಗ್ಸ್ ನ ಮೊದಲ ಸಿನಿಮಾ ಹಂಗಾಮಾ-2 ರಿಲೀಸ್ ಹಾಗೂ ಪ್ರಚಾರ ಕಾರ್ಯಕ್ರಮದಿಂದ ಶಿಲ್ಪಾ ಶೆಟ್ಟಿ ದೂರ ಉಳಿದಿದ್ದಾರೆ.

ಆದರೆ ಪತಿಯ ಬಂಧನದ ಬಳಿಕ ಮೊದಲ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿರುವ ಶಿಲ್ಪಾ ಶೆಟ್ಟಿ, ಈಗ ಜೀವಂತವಾಗಿರುವುದಕ್ಕೆ ಅದೃಷ್ಟಶಾಲಿ ಎಂದೇ ತಿಳಿದಿದ್ದೇನೆ. ಆ ಕಾರಣ ನಾನು ಗಟ್ಟಿಯಾಗಿ ಉಸಿರು ತೆಗೆದುಕೊಳ್ಳುತ್ತೇನೆ. ಈ ಹಿಂದೆಯೂ ಕಷ್ಟ ಹಾಗೂ ಸವಾಲುಗಳನ್ನು ಎದುರಿಸಿದ್ದೇನೆ. ಸಂಕಷ್ಟಗಳನ್ನು ದಾಟಿ ಬದುಕುಳಿದಿದ್ದೇನೆ. ಭವಿಷ್ಯದಲ್ಲಿ ಸವಾಲುಗಳನ್ನು ಎದುರಿಸುತ್ತೇನೆ ಹಾಗೂ ನನ್ನ ಇವತ್ತಿನ ಬದುಕನ್ನು ಬದುಕುತ್ತೇನೆ ಎಂದಿದ್ದಾರೆ.