Agriculture Loan : ರೈತರಿಗೆ ಗುಡ್ ನ್ಯೂಸ್ ! 2022-23ರಲ್ಲಿ ಕೃಷಿ ಸಾಲದ ಗುರಿ 18 ಲಕ್ಷ ಕೋಟಿಗೆ ಹೆಚ್ಚಳವಾಗುವ ಸಂಭವ

ದೆಹಲಿ: ದೇಶದ ಕೃಷಿ ಸಮುದಾಯಕ್ಕೆ ಸಂಬಂಧಿಸಿದ ಕೇಂದ್ರ ಸರ್ಕಾರ (Union Government) ಪ್ರಮುಖ ಸುದ್ದಿಯೊಂದನ್ನು ಬಹಿರಂಗಗೊಳಿಸಿದೆ.  ಕೇಂದ್ರ ಸರ್ಕಾರ ಫೆಬ್ರುವರಿ 1ರಂದು ಮಂಡಿಸುವ 2022-23ನೇ ಸಾಲಿನ ಬಜೆಟ್​ನಲ್ಲಿ ಕೃಷಿ ಸಾಲದ ಗುರಿಯನ್ನು (Agriculture Loan Target) 18ರಿಂದ 18.50 ಲಕ್ಷ ಕೋಟಿ ರೂಪಾಯಿಗೆ ವಿಸ್ತರಿಸುವ ಸಂಭವ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 2021-22ರ ಆರ್ಥಿಕ ವರ್ಷದ ಸಾಲಿನಲ್ಲಿ (Economic Year 2021-22) ಇದು 16.50 ಲಕ್ಷ ಕೋಟಿ ರೂಪಾಯಿ ಇದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India) ಕೂಡ ಅಡಮಾನ ರಹಿತ ಸಾಲವನ್ನು ಒಂದು ಲಕ್ಷ ರೂಪಾಯಿಯಿಂದ 1.60 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿದೆ.

ಕೆಲವೊಮ್ಮೆ ಸರ್ಕಾರ ನಿಗದಿ ಮಾಡಿದ ಗುರಿಯನ್ನೂ ಮೀರಿ ಸಾಲ ವಿತರಣೆಯಾದ ಉದಾಹರಣೆಗಳು ಇವೆ. 2016-17ರ ಬಜೆಟ್​ನಲ್ಲಿ 9 ಲಕ್ಷ ಕೋಟಿ ರೂಪಾಯಿ ಕೃಷಿ ಸಾಲದ ಗುರಿ ಇತ್ತು. ಆದರೆ 10.66 ಲಕ್ಷ ಕೋಟಿ ರೂಪಾಯಿಗೆ ಹಿಗ್ಗಿತು. 2017-18ರಲ್ಲಿ 10 ಲಕ್ಷ ಕೋಟಿ ರೂಪಾಯಿ ಇದ್ದ ಕೃಷಿ ಸಾಲದ ಗುರಿ, ಆರ್ಥಿಕ ಸಾಲಿನ ಮುಕ್ತಾಯದ ಹೊತ್ತಿಗೆ 1.68 ಲಕ್ಷ ಕೋಟಿ ರೂಪಾಯಿಗೆ ತಲುಪಿತು. ಹೀಗೆ ಕೃಷಿ ಸಾಲ ವಿತರಣೆ ತನ್ನ ಗುರಿಯನ್ನೂ ಮೀರಿದ ಹಲವು ಉದಾಹರಣೆಗಳನ್ನು ಸಹ ಉಲ್ಲೇಖಿಸಬಹುದಾಗಿದೆ. ಫೆಬ್ರುವರಿ 1ರಂದು ಮಂಡನೆಯಾಗುವ  2022-23ನೇ ಸಾಲಿನ ಕೇಂದ್ರ ಬಜೆಟ್​ನಲ್ಲಿ ಕೃಷಿ ಸಾಲದ ಗುರಿ 18 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಳಗೊಳ್ಳುವ ಸಂಭವ ಇದೆ.

ದೇಶದ ಕೃಷಿಕ ಸಮುದಾಯವು ಸಾಮಾನ್ಯವಾಗಿ ಶೇಕಡಾ 9ರಿಂದ 10ರ ಬಡ್ಡಿದರದಲ್ಲಿ ಕೈ ಸಾಲ ಮಾಡಿ ಸಂಕಷ್ಟಕ್ಕೆ ಸಿಲುಕುತ್ತಾರೆ. ಆದರೆ ಸರ್ಕಾರ ಕಡಿಮೆ ಅವಧಿಯ ತಿರುವಳಿ ಹೊಂದಿರುವ ಸಾಲದಲ್ಲಿ 3 ಲಕ್ಷ ರೂಪಾಯಿವರೆಗೆ ಬೆಳೆ ಸಾಲವನ್ನು ಶೇಕಡಾ 4ರ ಬಡ್ಡಿದರಕ್ಕೆ ನೀಡುತ್ತದೆ. ಅಂದರೆ, ಬಡ್ಡಿದರದ ಮೇಲೆ ಶೇಕಡಾ 2ರಷ್ಟು ಸಬ್ಸಿಡಿ ಹಾಗೂ ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ರೈತರಿಗೆ ಶೇ. 3ರಷ್ಟು ಬಡ್ಡಿ ದರ ಕಡಿತ ಮಾಡುತ್ತದೆ.  ಕೃಷಿ ಸಾಲದ ಗುರಿಯನ್ನು ಹೆಚ್ಚಿಸುವ ಮೂಲಕ ದೇಶದ ಕೃಷಿಕ ಸಮುದಾಯಕ್ಕೆ ಹಲವು ಅವಕಾಶಗಳನ್ನು ತೆರೆದಿಡುವ ಪ್ರಯತ್ನಕ್ಕೆ ಸರ್ಕಾರ ಕೈಹಾಕಿದೆ ಎಂದು ಹೇಳಲಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಅಡಮಾನ ರಹಿತ ಸಾಲವನ್ನು ಒಂದು ಲಕ್ಷ ರೂಪಾಯಿಯಿಂದ 1.60 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿರುವುದರಿಂದ ಕೃಷಿ ಸಮುದಾಯಕ್ಕೆ ಸಣ್ಣ ಪ್ರಮಾಣದ ರೈತರಿಗೂ ಹಲವು ಬಗೆಯ ನೆರವು ಒದಗಿಬರಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: real estate 11e sketch: ಕೃಷಿ ಭೂಮಿಯನ್ನು ಸೈಟ್ ಆಗಿ ಪರಿವರ್ತಿಸುವ, ಸೈಟ್ ಖರೀದಿಸುವ ಮುನ್ನ ಗಮನಿಸಲೇಬೇಕಾದ ಅಂಶಗಳಿವು

ಇದನ್ನೂ ಓದಿ: Buy Gold in Google Pay: ಗೂಗಲ್ ಪೇ ಆ್ಯಪ್‌ನಲ್ಲೇ ಚಿನ್ನ ಖರೀದಿಸಬಹುದು, ಮಾರಬಹುದು! ಹೇಗೆ ಎಂಬ ವಿವರ ಇಲ್ಲಿದೆ

(Agriculture Loan will be increase in 2021-2022 says Central Government)

Comments are closed.