Japan Bus-Rail : ಇದನ್ನು ಬಸ್ ಎನ್ನುವಿರೋ? ರೈಲು ಎನ್ನುವಿರೋ? ಜಪಾನ್‌ನಲ್ಲಿ ಹೊಸ ವಾಹನದ ಬಳಕೆ ಆರಂಭ

ರಸ್ತೆ ಮತ್ತು ರೈಲ್ವೇ ಹಳಿ ಎರಡರ ಮೆಲೂ ಚಲಿಸಬಲ್ಲಂತಹ ವಾಹನವೊಂದನ್ನು(Japan Bus-Rail) ಜಪಾನ್‌ ದೇಶದಲ್ಲಿ ರೂಪಿಸಲಾಗಿದೆ. ರಬ್ಬರ್‌ ಟೈರ್‌ಗಳ ಸಹಾಯ ದಿಂದ ರಸ್ತೆಯ ಮೇಲೂ ಹಾಗೂ ಉಕ್ಕಿನ ಚಕ್ರಗಳ ಸಹಾಯದಿಂದ ರೈಲು ಹಳಿಗಳ ಮೇಲೂ ಓಡಬಲ್ಲದು. ರಸ್ತೆಯಿಂದ ರೈಲು ಹಳಿಗೆ ಹಾಗೂ ಹಳಿಯಿಂದ ರಸ್ತೆಗೆ ಅವಶ್ಯಕತೆಗೆ ತಕ್ಕಂತೆ ತನ್ನಿಂತಾನೇ ಬದಲಾಗುವ ವಿನ್ಯಾಸವನ್ನು ಇದು ಹೊಂದಿದ್ದು ದಕ್ಷಿಣ ಜಪಾನ್‌ನ ತೀರಪ್ರದೇಶದ ದೂರ-ದೂರದ ಊರುಗಳ ಜನರ ಓಡಾಟಕ್ಕೆ ಇದು ಅತ್ಯಂತ ಸಹಕಾರಿಯಾಗಲಿದೆ.

ಅಂದಹಾಗೆ ಜಪಾನ್‌ ತನ್ನ ದೂರಪ್ರದೇಶಗಳಲ್ಲಿ ವಾಸಿಸುವ ಜನರ ಉಪಯೋಗಕ್ಕಾಗಿ ಇಬ್ಬಗೆಯ ಮೋಟಾರು ವಾಹನವೊಂದನ್ನು ವಿನ್ಯಾಸಗೊಳಿಸಿರುವುದಲ್ಲದೇ ಅದರ ಕಾರ್ಯಾಚರಣೆಯನ್ನೂ ಆರಂಭಿಸಿದೆ. ನೋಡಲು ಮಿನಿಬಸ್‌ನಂತೆ ಕಾಣುವ ಈ ವಾಹನ 21 ಜನರು ಪ್ರಯಾಣಿಸುವ ಸಾಮರ್ಥ್ಯ ಹೊಂದಿದ್ದು ಇದು ಸಾಂಪ್ರದಾಯಿಕ ರಸ್ತೆಗಳಲ್ಲಿ ಬಸ್‌ನಂತೆ ಹಾಗೂ ರೈಲು ಹಳಿಗಳ ಮೇಲೆ ರೈಲಿನಂತೆಯೂ ಚಲಿಸಬಲ್ಲದು.

ಸುದ್ದಿಮೂಲಗಳ ಪ್ರಕಾರ ಇದು ಜಪಾನ್‌ನ ಕೈಯೋ ನಗರದಲ್ಲಿ ಸಾರ್ವಜನಿಕ ಸೇವೆಗೆ ನಿಯೋಜಿತವಾಗಿದೆ. ರಸ್ತೆಯ ಮೇಲೆ ಇದು ಸಾಮಾನ್ಯ ಬಸ್‌ನಂತೆ ಕಂಡರೂ ರಸ್ತೆಯಿಂದ ಹಳಿಗೆ ಬದಲಾಗಬೇಕಾದಾಗ ಇದರ ಉಕ್ಕಿನ ಚಕ್ರಗಳು ಮುಂಭಾಗದ ರಬ್ಬರ್‌ ಚಕ್ರಗಳನ್ನು ಮೇಲೆತ್ತಿ ತಾವು ಹಳಿಗಳ ಮೇಲೆ ಹೋಗುವುದಲ್ಲದೇ ಇದರ ಹಿಂಭಾಗದ ರಬ್ಬರ್‌ ಚಕ್ರಗಳು ವಾಹನವನ್ನು ಹಳಿಗಳ ಮೇಲಕ್ಕೆ ತಳ್ಳಿ ರೈಲಿನಂತೆ ಚಲಿಸಲು ಅನುವು ಮಾಡಿಕೊಡುತ್ತದೆ.

ರಸ್ತೆಯ ಮೇಲೆ ಈ ವಾಹನವು ಪ್ರತಿ ಗಂಟೆಗೆ ಗರಿಷ್ಠ 60 ಕಿ.ಮೀ. ವೇಗದಲ್ಲೂ ಹಾಗೂ ಹಳಿಗಳ ಮೇಲೆ ಪ್ರತಿ ಗಂಟೆಗೆ ನೂರಕ್ಕೂ ಹೆಚ್ಚು ಕಿ.ಮೀ. ವೇಗದಲ್ಲಿ ಚಲಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಡೀಸೆಲ್‌ ಮೊಟಾರ್‌ನಿಂದ ಚಲಿಸುವ ಈ ವಾಹನವು ಅನೇಕ ಬಣ್ಣಗಳಲ್ಲಿ ಲಭ್ಯವಿದೆ.

ಜಪಾನ್‌ನ ಅಸಾ ರೈಲ್‌ವೇ ಸಂಸ್ಥೆಯು ಈ ವಾಹನವನ್ನು ನಿರ್ವಹಿಸುತ್ತಿದ್ದು ದೂರದ ಪ್ರದೇಶದ ಜನರ ಓಡಾಟಕ್ಕೆ ಇದು ಸಹಾಕಾರಿಯಾಗಿದೆ, ಜನರನ್ನು ಸಮೀಪದ ರೈಲು ನಿಲ್ದಾಣಗಳಿಗೆ ತಲುಪಿಸಲೂ ಅನುಕೂಲಕರವಾಗಿದೆ ಎಂದು ಸಂಸ್ಥೆಯ ಮುಖ್ಯ ನಿರ್ವಾಹಕ ಅಧಿಕಾರಿ ಶಿಗೆಕಿ ಮಿಯುರಾ ತಿಳಿಸಿದ್ದಾರೆ. ಗ್ರಾಮೀಣ ಜನರ, ಅದರಲ್ಲೂ ವಯಸ್ಸಾದವರಿಗೆ ಇದು ಬಹಳ ಉಪಯುಕ್ತವಾಗಿರುವುದರ ಜೊತೆಗೆ ಪ್ರವಾಸಿಗರಿಗೂ ಉತ್ತಮ ಅನುಭವ ನೀಡಲಿದ್ದು ಒಳ್ಳೆಯ ಆದಾಯವನ್ನೂ ತರಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Job Alert in Flipkart Bengaluru: ಫ್ಲಿಪ್‌ಕಾರ್ಟ್‌ನಲ್ಲಿ ಉದ್ಯೋಗಾವಕಾಶ; ಜವಾಬ್ದಾರಿಯು ಹುದ್ದೆ, ಓರ್ವ ಅಭ್ಯರ್ಥಿಗೆ ಮಾತ್ರ ಅವಕಾಶ

(Japan Bus-Rail Japan bus runs on rail world’s first dual mode vehicle details in Kannada)

Comments are closed.