ಜಪಾನ್ ಮೊಬಿಲಿಟಿ ಶೋ 2025 ರಲ್ಲಿ ಪ್ರದರ್ಶನಗೊಳ್ಳಲಿರುವ ಮಾರುತಿಯ 4 ಕಾರುಗಳು
Japan Mobility Show 2025: ಜಪಾನಿನ ರಾಜಧಾನಿ ಟೋಕಿಯೋದಲ್ಲಿ ಇದೇ ಅಕ್ಟೋಬರ್ 30 ರಿಂದ ನವೆಂಬರ್ 9 ರವರೆಗೆ ಹತ್ತು ದಿನಗಳ ಕಾಲ ಜಪಾನ್ ಮೊಬಿಲಿಟಿ ಶೋ 2025 ನಡೆಯಲಿದೆ.
ಇದರಲ್ಲಿ ಜಪಾನಿನ ಕಾರು ತಯಾರಿಕಾ ಕಂಪನಿ ಸುಜುಕಿ ತನ್ನ ಅನೇಕ ಕಾರುಗಳನ್ನು ಪ್ರದರ್ಶಿಸಲಿದೆ. ಈ ಶೋ ಭಾರತಕ್ಕೆ ಬಹಳ ವಿಶೇಷವಾಗಿದೆ.
ಹೇಗೆಂದರೆ ಭಾರತದ ಕಾರು ತಯಾರಿಕಾ ಕಂಪನಿ ಮಾರುತಿ–ಸುಜುಕಿಯ 4 ಕಾರುಗಳು ಪ್ರದರ್ಶನಗೊಳ್ಳಲಿದೆ. ಅವು ಭಾರತದಲ್ಲೇ ತಯಾರಾದ ಮಾದರಿಗಳು ಎಂಬುದು ವೈಶಿಷ್ಟ್ಯವಾಗಿದೆ.
ಮಾರುತಿ ಜಿಮ್ನಿ 5 ಡೋರ್, ಮಾರುತಿ ಇ ವಿಟಾರಾ, ಮಾರುತಿ ಫ್ರಾಂಕ್ಸ್ FFV ಕಾನ್ಸೆಪ್ಟ್ ಮತ್ತು ಮಾರುತಿ ವಿಕ್ಟೋರಿಸ್ ಸಿಬಿಜಿ ಆವೃತ್ತಿಗಳು ಸೇರಿವೆ.
ಜಪಾನಿನ ಮೊಬಿಲಿಟಿ ಶೋ ದಲ್ಲಿ ಪ್ರದರ್ಶನಗೊಳ್ಳಲಿರುವ ಈ ಕಾರುಗಳ ಕಿರು ಪರಿಚಯ ಹೀಗಿದೆ.
ಮಾರುತಿ ಜಿಮ್ನಿ 5– ಡೋರ್
ಸುಜುಕಿ ತನ್ನ ಜನಪ್ರಿಯ ಆಫ್-ರೋಡರ್ ಜಿಮ್ನಿಯ 5-ಡೋರ್‌ನ ಆವೃತ್ತಿಯಾದ ಜಿಮ್ನಿ ನೊಮೇಡ್ ಅನ್ನು ಜಪಾನ್‌ನ ಮೊಬಿಲಿಟಿ ಶೋನಲ್ಲಿ ಪ್ರದರ್ಶಿಸುತ್ತಿದೆ.
ಈ ಮಾದರಿಯು ಭಾರತದಲ್ಲಿ ನಿರ್ಮಿತವಾದ ಮಾರುತಿ ಜಿಮ್ನಿಯನ್ನು ಆಧರಿಸಿದೆ. ಹೊಸ ಕಾರಿನ ವಿನ್ಯಾಸವು ಹೆಚ್ಚಾಗಿ ಒಂದೇ ಆಗಿದ್ದರೂ, ಜಪಾನ್-ಸ್ಪೆಕ್ ಜಿಮ್ನಿ ನೊಮೇಡ್ ADAS ನಂತಹ ಹೆಚ್ಚುವರಿ ವೈಶಿಷ್ಟ್ಯಗಳನ್ನು ನೀಡುತ್ತದೆ.
ಇದು 1.5-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ಚಾಲನೆ ಒಳಪಡುತ್ತುದೆ.
ಮಾರುತಿ ಇ-ವಿಟಾರಾ
ಎರಡನೇ ಮಾದರಿಯೆಂದರೆ ಮಾರುತಿ ಇ ವಿಟಾರಾ. ಇದು ಭಾರತದ ಗುಜರಾತ್‌ನಲ್ಲಿ ತಯಾರಾದ ಸಂಪೂರ್ಣ ಎಲೆಕ್ಟ್ರಿಕಲ್ SUV ಆಗಿದೆ.
ಇದನ್ನು ಸುಮಾರು 100 ದೇಶಗಳಿಗೆ ರಫ್ತು ಮಾಡಲಾಗುವುದು ಎಂದು ಕಂಪನಿ ಹೇಳಿದೆ. ಜೊತೆಗೆ ಇದು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಇದನ್ನು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುತ್ತಿದೆ. 49 kWh ಮತ್ತು 61 kWh. ಇದನ್ನು ಒಮ್ಮೆ ಚಾರ್ಜ್ ಮಾಡಿದರೆ 500 ಕಿ.ಮೀ ಗಿಂತ ಹೆಚ್ಚಿನ ವ್ಯಾಪ್ತಿಯನ್ನು ನೀಡುತ್ತದೆ. ಇದು ಯುರೋ NCAP ಕ್ರ್ಯಾಶ್ ಪರೀಕ್ಷೆಗಳಲ್ಲಿ 4-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಸಾಧಿಸಿದೆ.
ಇದರ ವಿನ್ಯಾಸವು ಮಾರುತಿಯ ಹೊಸ ವಿನ್ಯಾಸ ಭಾಷೆಯನ್ನು ಅನುಸರಿಸುವ ಮೂಲಕ ಇದು ಆಧುನಿಕ ನೋಟವನ್ನು ನೀಡುತ್ತದೆ.
ಮಾರುತಿ ಫ್ರಾಂಕ್ಸ್ FFV ಪರಿಕಲ್ಪನೆ (ಫ್ಲೆಕ್ಸ್ ಇಂಧನ ಆವೃತ್ತಿ)
ಈ ಪ್ರದರ್ಶನದಲ್ಲಿ ಸುಜುಕಿಯು ಮಾರುತಿಯ ಫ್ರಾಂಕ್ಸ್ ಎಫ್‌ಎಫ್‌ವಿ ಪರಿಕಲ್ಪನೆಯನ್ನು ಸಹ ಪ್ರದರ್ಶಿಸಲಿದೆ. ಇದು ಫ್ಲೆಕ್ಸ್ ಇಂಧನ ವಾಹನ (ಎಫ್‌ಎಫ್‌ವಿ) ಆಗಿದ್ದು, ಇದು ಹೆಚ್ಚಿನ ಎಥೆನಾಲ್ ಮಿಶ್ರಣ ಇಂಧನದಲ್ಲಿ ಚಲಿಸಬಲ್ಲದು.
ಭಾರತದಲ್ಲಿ, ಈ ಮಾದರಿಯನ್ನು 1.2-ಲೀಟರ್ ಪೆಟ್ರೋಲ್ ಎಂಜಿನ್, 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಮತ್ತು ಸಿಎನ್‌ಜಿ ಆವೃತ್ತಿಯೊಂದಿಗೆ ನೀಡಲಾಗುತ್ತದೆ.
ವಾಸ್ತವವಾಗಿ, ಮಾರುತಿ ಈಗಾಗಲೇ ತನ್ನ ಕಾರುಗಳನ್ನು ಇ 20 (20% ಎಥೆನಾಲ್ ಮಿಶ್ರಣ) ಇಂಧನ ಹೊಂದಿಕೊಳ್ಳುವಂತೆ ತಯಾರಿಸುತ್ತಿದೆ. ಫ್ರಾಂಕ್ಸ್ ಎಫ್‌ಎಫ್‌ವಿ ಕಾರು ಕಂಪನಿಯ ಕಾರ್ಬನ್-ನ್ಯೂಟ್ರಲ್ ಮಿಷನ್ ಕಡೆಗೆ ಒಂದು ಮಹತ್ವದ ಹೆಜ್ಜೆಯಾಗಿದೆ.
ಮಾರುತಿ ವಿಕ್ಟೋರಿಸ್ (CBG ಆವೃತ್ತಿ)
ಸೆಪ್ಟೆಂಬರ್ 2025 ರಲ್ಲಿ ಬಿಡುಗಡೆಯಾದ ಮಾರುತಿ ವಿಕ್ಟೋರಿಸ್ ಅನ್ನು ಸಹ ಈ ಪ್ರದರ್ಶನದಲ್ಲಿ ಕಾಣಬಹುದು. ಆದರೆ ಅದನ್ನ ಕಂಪ್ರೆಸ್ಡ್ ಬಯೋ ಗ್ಯಾಸ್ (CBG) ಆವೃತ್ತಿಯಲ್ಲಿ ನೋಡಬಹುದಾಗಿದೆ.
ಈ ಕಾರನ್ನು ಭಾರತದಲ್ಲಿ ತಯಾರಿಸಲಾಗಿದ್ದು, ಸುಜುಕಿ ಈಗ ಅದನ್ನು ಮೂಲಮಾದರಿ CBG ಮಾದರಿಯಾಗಿ ಪ್ರದರ್ಶಿಸಲಿದೆ. CBG ಸಾವಯವ ತ್ಯಾಜ್ಯದಿಂದ ಉತ್ಪಾದಿಸುವ ಪರಿಸರ ಸ್ನೇಹಿ ಇಂಧನವಾಗಿದೆ ಮತ್ತು ಇದು ಸಾಂಪ್ರದಾಯಿಕ CNG ಗೆ ಸುಸ್ಥಿರ ಪರ್ಯಾಯವಾಗಿದೆ.
ಇದನ್ನೂ ಓದಿ: ಭರ್ಜರಿ ಎಂಟ್ರಿ ಕೊಟ್ಟ 2026 ಕವಾಸಕಿ Z900: ಸೂಪರ್ ಬೈಕ್‌ನ ಬೆಲೆ ಎಷ್ಟು ಗೊತ್ತಾ?
(Made in India s 4 Maruti cars to be showcased at Japan Mobility Show 2025)



