ಹಯಾಬುಸಾ ಸ್ಟೈಲ್‌ನಲ್ಲಿ ಹೊಸ Suzuki GSX250R ಸ್ಪೋರ್ಟ್ಸ್ ಬೈಕ್ ಎಂಟ್ರಿ

ಸುಜುಕಿ ಹೊಸ GSX250R ಸ್ಪೋರ್ಟ್ಸ್ ಬೈಕ್‌ನ್ನು ಆಧುನಿಕ TFT ಡಿಸ್ಪ್ಲೇ, ಆಕರ್ಷಕ ವಿನ್ಯಾಸ ಮತ್ತು ಸುಧಾರಿತ ತಂತ್ರಜ್ಞಾನದೊಂದಿಗೆ ಪರಿಚಯಿಸಿದೆ. ಭಾರತದಲ್ಲೂ ಬಿಡುಗಡೆಯಾಗುವ ಸಾಧ್ಯತೆ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಸ್ಪೋರ್ಟ್ಸ್ ಬೈಕ್ ಅಭಿಮಾನಿಗಳಿಗೆ ಸುಜುಕಿ (Suzuki) ಹೊಸ ಮಾದರಿಯನ್ನು ಪರಿಚಯಿಸಿದೆ. ಕಂಪನಿಯ ಹೊಸ Suzuki GSX250R ಬೈಕ್ ಮೊದಲ ಹಂತದಲ್ಲಿ ಚೀನಾ ಮಾರುಕಟ್ಟೆಯಲ್ಲಿ ಅನಾವರಣಗೊಂಡಿದ್ದು, ಅದರ ಆಕರ್ಷಕ ವಿನ್ಯಾಸ ಮತ್ತು ಹೊಸ ತಂತ್ರಜ್ಞಾನಗಳಿಂದ ಸಾಕಷ್ಟು ಗಮನ ಸೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಗೆ ವಿಸ್ತರಿಸುವ ಸಾಧ್ಯತೆಯೂ ಚರ್ಚೆಯಲ್ಲಿದೆ.

ಈ ಬೈಕ್‌ನ ವಿನ್ಯಾಸದಲ್ಲಿ ಸುಜುಕಿಯ ಜನಪ್ರಿಯ ಹಯಾಬುಸಾ ಮಾದರಿಯ ಪ್ರಭಾವ ಸ್ಪಷ್ಟವಾಗಿ ಕಾಣಿಸುತ್ತದೆ. ಹೊಸ ಹೆಡ್‌ಲ್ಯಾಂಪ್ ವಿನ್ಯಾಸ, ಏರೋಡೈನಾಮಿಕ್ ಫೇರಿಂಗ್, ಸಣ್ಣ ವಿಂಗ್‌ಲೆಟ್‌ಗಳು ಹಾಗೂ ಸ್ಪೋರ್ಟಿ ಬಾಡಿ ಸ್ಟೈಲ್ ಬೈಕ್‌ಗೆ ವಿಭಿನ್ನ ಲುಕ್ ನೀಡಿವೆ. ಹೆಚ್ಚಿನ ವೇಗದಲ್ಲೂ ಉತ್ತಮ ಸ್ಥಿರತೆ ಸಿಗುವಂತೆ ವಿನ್ಯಾಸದಲ್ಲಿ ಬದಲಾವಣೆ ಮಾಡಲಾಗಿದೆ.

ತಂತ್ರಜ್ಞಾನದ ವಿಚಾರದಲ್ಲಿ ಹೊಸ ಪೂರ್ಣ ಡಿಜಿಟಲ್ TFT ಡಿಸ್ಪ್ಲೇ ಪ್ರಮುಖ ಆಕರ್ಷಣೆಯಾಗಿದೆ. ಬ್ಲೂಟೂತ್ ಸಂಪರ್ಕದ ಮೂಲಕ ನ್ಯಾವಿಗೇಶನ್, ಕರೆ ಅಲರ್ಟ್ ಹಾಗೂ ಇತರ ಸ್ಮಾರ್ಟ್ ಫೀಚರ್‌ಗಳನ್ನು ಬಳಸುವ ಅವಕಾಶ ಕಲ್ಪಿಸಲಾಗಿದೆ. ಹಿಂದಿನ LCD ಡಿಸ್ಪ್ಲೇಗೆ ಹೋಲಿಸಿದರೆ ಇದು ಹೆಚ್ಚು ಆಧುನಿಕ ಅನುಭವ ನೀಡಲಿದೆ.

ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬೈಕ್‌ನಲ್ಲಿ ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳೊಂದಿಗೆ ಡ್ಯುಯಲ್ ಚಾನೆಲ್ ABS, RSU ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್, ಮೋನೋಶಾಕ್ ರಿಯರ್ ಸಸ್ಪೆನ್ಷನ್ ಹಾಗೂ 17 ಇಂಚಿನ ಅಲಾಯ್ ವೀಲ್‌ಗಳನ್ನು ಅಳವಡಿಸಲಾಗಿದೆ. ಅಗಲವಾದ ಟ್ಯೂಬ್‌ಲೆಸ್ ಟೈರ್‌ಗಳು ಉತ್ತಮ ಹಿಡಿತ ನೀಡಲಿವೆ.

ಎಂಜಿನ್ ಸಾಮರ್ಥ್ಯದ ಬಗ್ಗೆ ಅಧಿಕೃತ ಮಾಹಿತಿ ಸಂಪೂರ್ಣವಾಗಿ ಬಹಿರಂಗವಾಗಿಲ್ಲ. ಆದರೆ ಸುಮಾರು 30 PS ಶಕ್ತಿ ಉತ್ಪಾದಿಸುವ ಎಂಜಿನ್ ಇರಬಹುದೆಂದು ನಿರೀಕ್ಷಿಸಲಾಗಿದೆ. ಜೊತೆಗೆ ವೇರಿಯಬಲ್ ವಾಲ್ವ್ ಆ್ಯಕ್ಟ್ಯುಯೇಷನ್ (VVA) ತಂತ್ರಜ್ಞಾನ ಬಳಕೆಯಾಗುವ ಸಾಧ್ಯತೆಯಿದ್ದು, ಇದು ವೇಗ ಮತ್ತು ಇಂಧನ ದಕ್ಷತೆಯನ್ನು ಮತ್ತಷ್ಟು ಹೆಚ್ಚಿಸಬಹುದು.

ಪ್ರಸ್ತುತ ಈ ಬೈಕ್ ಅನ್ನು ಚೀನಾದಲ್ಲಿ ಹಾವೋಜುಯೆ (Haojue) ಸಹಭಾಗಿತ್ವದಲ್ಲಿ ತಯಾರಿಸಲಾಗುತ್ತಿದೆ. ಭಾರತದಲ್ಲಿ ಇನ್ನೂ GSX250R ಲಭ್ಯವಿಲ್ಲ. ಆದರೆ ದೇಶದಲ್ಲಿ 250cc ಸ್ಪೋರ್ಟ್ಸ್ ಬೈಕ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ, ಮುಂದಿನ ದಿನಗಳಲ್ಲಿ ಸುಜುಕಿ ಈ ಬೈಕ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ.

Sai Teja | ಸಾಯಿತೇಜ

Sai Teja | ಸಾಯಿತೇಜ ಕಳೆದ 7 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿದ್ದಾರೆ. ಸಾಯಿತೇಜಾ ಅವರು, ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಂತ್ರಜ್ಞಾನ ಹಾಗೂ ಬಿಸಿನೆಸ್, ಆಟೋಮೊಬೈಲ್‌ ಕ್ಷೇತ್ರದ ಪತ್ರಿಕೋದ್ಯಮದಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಆನ್‌ಲೈನ್‌ ಸುದ್ದಿ ಲೋಕದಲ್ಲಿ ಅಪಾರವಾದ ಜ್ಞಾನವನ್ನು ಹೊಂದಿದ್ದಾರೆ. ಕನ್ನಡ ನ್ಯೂಸ್‌ ನೆಕ್ಸ್ಟ್‌ನಲ್ಲಿ ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. More »