ಅಯೋಧ್ಯೆ ಟ್ರಸ್ಟ್​ಗೆ ಒಂದು ರೂಪಾಯಿ ದೇಣಿಗೆ ನೀಡಿದ ಕೇಂದ್ರ ಸರಕಾರ : ರಾಮಮಂದಿರ ನಿರ್ಮಾಣಕ್ಕೆ ನೀವೂ ಕೊಡಬಹುದು ದೇಣಿಗೆ

0

ನವದೆಹಲಿ : ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ರಚನೆಯಾಗಿರುವ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ಗೆ ಸರ್ಕಾರ ಒಂದು ರೂಪಾಯಿ ದೇಣಿಗೆ ನೀಡಿದೆ. ಈ ಮೂಲಕ ರಾಮಮಂದಿರ ನಿರ್ಮಾಣಕ್ಕಾಗಿ ಆರಂಭಗೊಂಡಿರೋ ಟ್ರಸ್ಟ್​ನ ಕಾರ್ಯ ಅಧಿಕೃತವಾಗಿ ಆರಂಭವಾಗಿದೆ.
ಕೇಂದ್ರ ಸರಕಾರ ನಿನ್ನೆಯಷ್ಟೇ ಹಿರಿಯ ನ್ಯಾಯವಾದ ಕೆ.ಪರಾಸರನ್ ನೇತೃತ್ವದಲ್ಲಿ ಟ್ರಸ್ಟ್ ರಚಿಸಲಾಗಿದ್ದು, ಅಲಹಾಬಾದ್​​ನ ಜಗದ್ಗುರು ಶಂಕರಾಚಾರ್ಯ ಜ್ಯೋತಿಷ್​ಪೀಠಾಧೀಶ್ವರ ಸ್ವಾಮಿ ವಾಸುದೇವಾನಂದ ಸರಸ್ವತೀಜಿ, ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಹರಿದ್ವಾರದ ಯುಗಪುರುಷ ಪರಮಾನಂದ ಜೀ ಮಹಾರಾಜ್​, ಪುಣೆಯ ಸ್ವಾಮಿ ಗೋವಿಂದದೇವ್ ಗಿರಿಜೀ ಮಹಾರಾಜ್​, ಅಯೋಧ್ಯೆಯ ವಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ, ಅಯೋಧ್ಯೆಯ ಹೋಮಿಯೋಪತಿ ಡಾಕ್ಟರ್​ ಅನಿಲ್ ಮಿಶ್ರಾ, ಪಟನಾದ ಕಾಮೇಶ್ವರ ಚೌಪಾಲ್​(ಎಸ್​ಸಿ) , ಮಹಾಂತ ದಿನೇಂದ್ರ ದಾಸ್​, ಅಯೋಧ್ಯೆಯ ನಿರ್ಮೋಹಿ ಅಖಾಡದ ಪ್ರತಿನಿಧಿಗಳನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. ಇದೀಗ ಕೇಂದ್ರ ಗೃಹ ಸಚಿವಾಲಯದ ಅಧೀನ ಕಾರ್ಯದರ್ಶಿ ಡಿ.ಮುರ್ಮು ಟ್ರಸ್ಟ್ ಖಾತೆಗೆ ಒಂದು ರೂಪಾಯಿ ವರ್ಗಾಯಿಸಿದ್ದಾರೆ. ಇನ್ಮುಂದೆ ಟ್ರಸ್ಟ್ ಯಾರಿಂದ ಬೇಕಾದರೂ ಬೇಷರತ್ತಾಗಿ ದೇಣಿಗೆ, ಅನುದಾನ, ಚಂದಾ, ನಗ, ನಗದು ಅಥವಾ ಇನ್ನಾವುದೇ ರೂಪದ ನೆರವನ್ನೂ ಯಾರಿಂದ ಬೇಕಾದರೂ ಸ್ವೀಕರಿಸಬಹುದಾಗಿದೆ. ಇದೀಗ ಟ್ರಸ್ಟ್ ಹಿರಿಯ ನ್ಯಾಯವಾದಿ ಕೆ.ಪರಾಸರನ್ ಅವರ ಮನೆಯಿಂದಲೇ ಕಾರ್ಯಾಚರಿಸಲಿದೆ. ಮುಂದಿನ ದಿನಗಳಲ್ಲಿ ಟ್ರಸ್ಟ್ ಸ್ವಂತ ಸ್ಥಳಕ್ಕೆ ಸ್ಥಳಾಂತರಗೊಳ್ಳಲಿದೆ.

Leave A Reply

Your email address will not be published.