ಕೊರೋನಾ ಎರಡನೇ ಅಲೆಯಲ್ಲಿ ಭಾರತದಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ಸಿಲಿಕಾನ್ ಸಿಟಿಯಲ್ಲಿ ದಾಖಲಾಗಿವೆ. ಪ್ರತಿನಿತ್ಯ ಸೋಂಕಿತರ ಸಂಖ್ಯೆ 15 ಸಾವಿರ ದಾಟಿದ್ದು, ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಸೋಂಕಿತರು ಚಿಕಿತ್ಸೆ ಪಡೆದಿದ್ದಾರೆ. ಈ ಮಧ್ಯೆ ಸಿಲಿಕಾನ್ ಸಿಟಿಯಲ್ಲಿ ಕೊರೋನಾ ನಿಯಮಗಳ ಪಾಲನೆಯ ವಿಚಾರಕ್ಕೆ ಸಂಬಂಧಿಸಿದಂತೆ ದಾಖಲೆಯ ದಂಡವಸೂಲಿಯಾಗಿದ್ದು, ಖಾಕಿ ಪಡೆ ಒಂದೇ ತಿಂಗಳಿನಲ್ಲಿ 2.57 ಕೋಟಿ ರೂಪಾಯಿ ದಂಡ ಸಂಗ್ರಹಿಸಿದೆ.

ಏಪ್ರಿಲ್ 1 ರಿಂದ 29 ರವರೆಗೆ ಬೆಂಗಳೂರಿನ ಒಟ್ಟು 8 ವಲಯಗಳಲ್ಲಿ ಬರೋಬ್ಬರಿ 2 ಕೋಟಿ 57 ಲಕ್ಷದ 71 ಸಾವಿರ ರೂಪಾಯಿ ದಂಡ ಸಂಗ್ರಹಿಸಲಾಗಿದೆ. 8 ವಲಯದಲ್ಲಿ 1 ಲಕ್ಷದ 7 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಬೆಂಗಳೂರು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ದಕ್ಷಿಣ ವಿಭಾಗದಲ್ಲಿ 21 ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗಿದ್ದು, 51 ಲಕ್ಷ ದಂಡ ಸಂಗ್ರಹವಾಗಿದ್ದರೇ, ಪಶ್ಚಿಮ ವಿಭಾಗದಲ್ಲಿ 19 ಸಾವಿರ ಕೇಸ್ 47 ಲಕ್ಷ ದಂಡ, ಉತ್ತರ ವಿಭಾಗದಲ್ಲಿ 14 ಸಾವಿರ ಕೇಸ್ ಹಾಗೂ 34 ಲಕ್ಷ ರೂಪಾಯಿ ದಂಡ,ಆಗ್ನೇಯ ವಿಭಾಗದಲ್ಲಿ 14 ಸಾವಿರ ಕೇಸ್ 34 ಲಕ್ಷ ಫೈನ್, ಪೂರ್ವ ವಿಭಾಗದಲ್ಲಿ 13 ಸಾವಿರ ಕೇಸ್ 31 ಲಕ್ಷ , ಎಲ್ಲಾ ಸೇರಿ ಒಂದು ತಿಂಗಳಿನಲ್ಲಿ ಒಟ್ಟು 2.57 ಕೋಟಿ ದಂಡವನ್ನು ಜನರು ಪಾವತಿಸಿದ್ದಾರೆ.

ಇದರಲ್ಲಿ ಮಾಸ್ಕ್ ಧರಿಸದೇ ಇರುವುದು, ಸೋಷಿಯಲ್ ಡಿಸ್ಟನ್ಸ್ ಮೆಂಟೇನ್ ಮಾಡದೇ ಇರೋದು, ಸ್ಯಾನಿಟೈಸ್ ಮಾಡದೇ ಇರೋದು ಸೇರಿದಂತೆ ಹಲವು ಕೊರೋನಾ ನಿಯಮಗಳ ಉಲ್ಲಂಘನೆ ಸೇರಿದೆ.

ಕೊರೋನಾದಂತಹ ಸಂಕಷ್ಟವನ್ನು ನಿಯಂತ್ರಿಸಲು ಸರ್ಕಾರ ಕಠಿಣ ನಿಯಮ ರೂಪಿಸಿದ್ದು, ಮಾಸ್ಕ್ , ಸ್ಯಾನಿಟೈಸರ್ ಹಾಗೂ ಸೋಷಿಯಲ್ ಡಿಸ್ಟನ್ಸ್ ಕಾಪಾಡಲು ಹೇಳಿದೆ.

ಆದರೆ ಇದ್ಯಾವುದಕ್ಕೂ ಕ್ಯಾರೇ ಎನ್ನದ ಜನ ದಂಡ ಪಾವತಿಸಿ ಕೈಸುಟ್ಟುಕೊಳ್ಳುತ್ತಿದ್ದು, ತಿಂಗಳೊಂದರಲ್ಲೇ ಸಂಗ್ರಹವಾದ ದಂಡದ ಮೊತ್ತ ಜನರ ನಿರ್ಲಕ್ಷ್ಯಕ್ಕೆ ಸಾಕ್ಷಿ ಒದಗಿಸಿದೆ.
