ನಾಳೆ ರಾಜಧಾನಿಯಲ್ಲಿ ಟ್ರ್ಯಾಕ್ಟರ್ ಗೆ ನೋ ಎಂಟ್ರಿ….! ಅನ್ನದಾತರ ಹೋರಾಟಕ್ಕೆ ಆರಂಭದಲ್ಲೇ ವಿಘ್ನ…!?

ಗಣರಾಜ್ಯೋತ್ಸವದಂದು  ಬೆಂಗಳೂರು ಸ್ತಬ್ಧಗೊಳಿಸಿ ಟ್ರ್ಯಾಕ್ಟರ್ ಚಲೋ ನಡೆಸುವ ಸಿದ್ಧತೆಯಲ್ಲಿದ್ದ ರೈತ ಸಂಘಟನೆಗಳಿಗೆ ನಗರ ಪೊಲೀಸ್ ಆಯುಕ್ತ ಕಮಲ ಪಂಥ್ ಶಾಕ್ ನೀಡಿದ್ದು, ನಗರದೊಳಕ್ಕೆ ಟ್ರ್ಯಾಕ್ಟರ್ ಗಳಿಗೆ ನೋ ಎಂಟ್ರಿ ಎಂದಿದ್ದಾರೆ. ಹೀಗಾಗಿ ಅನ್ನದಾತರ ಹೋರಾಟಕ್ಕೆ ಆರಂಭದಲ್ಲೇ ಅಂತ್ಯಕಂಡಂತಾಗಿದೆ.

ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಟ್ರ್ಯಾಕ್ಟರ್ ಚಳುವಳಿ ಬೆಂಬಲಿಸಿ ರಾಜ್ಯದ ರೈತರಿಂದ ಟ್ರ್ಯಾಕ್ಟರ್ ಶೋ ಹಾಗೂ ರಾಜಧಾನಿ ಚಲೋ  ನಾಳೆ ನಡೆಯುವ ನೀರಿಕ್ಷೆ ಇತ್ತು.  ಆದರೆ ಮಾಧ್ಯಮಗಳ ಜೊತೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಕಮಲಪಂಥ, ನಾಳೆ ಕೆಲ ಸಂಘಟನೆಗಳು ಗಣರಾಜ್ಯೋತ್ಸವ ಆಚರಣೆಗೆ ಅನುಮತಿ ಕೋರಿವೆ. ಅದನ್ನು ಹೊರತುಪಡಿಸಿದರೇ ಯಾವುದೇ ಟ್ರ್ಯಾಕ್ಟರ್ ಮೆರವಣಿಗೆಗೆ ಅನುಮತಿ ಕೋರಿಲ್ಲ. ಹಾಗೂ ಅನುಮತಿ ನೀಡಲಾಗಿಲ್ಲ ಎಂದಿದ್ದಾರೆ.

ಸಾಂಕೇತಿಕವಾಗಿ ಟ್ರ್ಯಾಕ್ಟರ್ ಮೆರವಣಿಗೆ, ಜಾಥಾ ಅಥವಾ ರ್ಯಾಲಿಗೂ ಅವಕಾಶವಿಲ್ಲ ಎಂದು ಕಮಲಪಂಥ್ ಸ್ಪಷ್ಟನೆ ನೀಡಿದ್ದಾರೆ. ಇಂದು ಸಂಜೆಯಿಂದಲೇ ನಗರದಲ್ಲಿ ಬಿಗಿಭದ್ರತೆ ಏರ್ಪಡಿಸಲಾಗುತ್ತದೆ. ನಾವು ಗಣರಾಜ್ಯೋತ್ಸವ ಭದ್ರತೆಯಲ್ಲಿ ತೊಡಗಿದ್ದೇವೆ. ಯಾವುದೇ ಪ್ರತಿಭಟನಾ ಮೆರವಣಿಗೆಗೆ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಗೆ ಕೆಲ ಸಂಘಟನೆಗಳು ಅನುಮತಿ ಕೋರಿದ್ದು ಆ ಕುರಿತು ಪರಿಶೀಲನೆ ನಡೆಸುತ್ತಿದ್ದೇವೆ. ಅದನ್ನು ಹೊರತುಪಡಿಸಿ ಬೇರಾವುದೇ ಪ್ರತಿಭಟನೆಗೆ ಅನುಮತಿ ಇಲ್ಲ.ಜನಜೀವನಕ್ಕೆ ಧಕ್ಕೆ ತರುವ ಯಾವುದೇ ಪ್ರಯತ್ನಕ್ಕೂ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಮಧ್ಯೆ ನಾಳೆ ಟ್ರ್ಯಾಕ್ಟರ್ ಚಲೋ ನಡೆಸೋದಾಗಿ ಹೇಳಿಕೊಂಡಿರೋ ರೈತಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ವಿವಿಧ ಜಿಲ್ಲೆಗಳಿಂದ 10 ಸಾವಿರಕ್ಕೂ ಅಧಿಕ ಟ್ರ್ಯಾಕ್ಟರ್ ಗಳು ರಾಜಧಾನಿ ಚಲೋಗೆ ಆಗಮಿಸಲಿದೆ ಎಂದಿದ್ದರು.  ನೈಸ್ ರೋಡ್ ಜಂಕ್ಷನ್ ಮೂಲಕ ರಾಜಧಾನಿಗೆ ಟ್ರ್ಯಾಕ್ಟರ್ ಮೂಲಕ ಅನ್ನದಾತರು ಲಗ್ಗೆ ಇಡಲಿದ್ದಾರೆ ಎಂದು ನೀರಿಕ್ಷಿಸಲಾಗಿತ್ತು.

ಆದರೆ ಈಗ ನಗರ ಪೊಲೀಸ್ ಆಯುಕ್ತರು ಅನುಮತಿ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದು,ಇದು ರೈತರು ಮತ್ತು ಪೊಲೀಸರ ನಡುವೆ ಜಟಾಪಟಿಗೆ ಕಾರಣವಾಗೋ ಎಲ್ಲ ಸಾಧ್ಯತೆ ಇದೆ.  

Comments are closed.