ಮೀನಿನ ಲಾರಿಯಲ್ಲಿ 4 ಟನ್ ಗೋಮಾಂಸ ಸಾಗಾಟ : 7 ವಾಹನಗಳ ಸಹಿತ ಇಬ್ಬರ ಬಂಧನ

ಹಾಸನ : ಮೀನು ಸಾಗಾಟ ಮಾಡುವ ವಾಹನದಲ್ಲಿ ಬರೋಬ್ಬರಿ 4 ಟನ್ ಗೋಮಾಂಸ ಸಾಗಾಟ ಮಾಡಿರುವ ತಂಡವನ್ನು ಬೇಧಿಸುವಲ್ಲಿ ಹಾಸನ ಪೊಲೀಸುರು ಯಶಸ್ವಿಯಾಗಿದ್ದಾರೆ.

ದನದ ಮಾಂಸವನ್ನು ಪ್ಲಾಸ್ಟಿಕ್ ನಲ್ಲಿ ಪ್ಯಾಕ್ ಮಾಡಿ ಮೀನು ಸಾಗಾಟ ಲಾರಿಯ ಮೂಲಕ ಹಾಸನದಿಂದ ಮಂಗಳೂರಿನ ಮಾರುಕಟ್ಟೆಗೆ ಸಾಗಾಟ ಮಾಡಲಾಗುತ್ತಿತ್ತು. ಕೃತ್ಯಕ್ಕೆ ಬಳಕೆಯಾಗಿದ್ದ 7 ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.

ಹಾಸನದ ಆಲೂರು ಠಾಣೆಯ ಪೊಲೀಸರು ಗಸ್ತಿನಲ್ಲಿದ್ದಾಗ ಖಚಿತ ಮಾಹಿತಿಯ ಮೇರೆಗೆ ಆಲೂರು ಪ್ರಕೃತಿ ನಗರದ ಶೆಡ್ ಮೇಲೆ ದಾಳಿ ನಡೆಸಿದ್ದರು. ಪೊಲೀಸರು ದಾಳಿ ನಡೆಸುತ್ತಿದ್ದಂತೆಯೇ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಪೊದೆಯೊಳಗೆ ಅವಿತು ಕುಳಿತಿದ್ದ ಮುನ್ನಾ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆಯಲ್ಲಿ ಗೋಮಾಂಸ ಸಾಗಾಟದ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ.

ಹೊಸ ಗೋಹತ್ಯೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿರುವ ಆಲೂರು ಠಾಣೆಯ ಪೊಲೀಸರು 7 ವಾಹನಗಳನ್ನು ವಶಕ್ಕೆ ಪಡೆದಿದ್ದು, ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ಬಳಿಕ ದೊಡ್ಡ ಪ್ರಮಾಣದಲ್ಲಿ ಅಕ್ರಮ ಗೋಮಾಂಸ ಪತ್ತೆಯಾದ ಮೊದಲ ಪ್ರಕರಣವಾಗಿದೆ.

Comments are closed.