ಮಂತ್ರಿಮಾಲ್ ಲಾಕೌಟ್….! ಐಷಾರಾಮಿ ಮಾಲ್ ಬೀಗ ಹಾಕಿದ ಬಿಬಿಎಂಪಿ…!!

ಬೆಂಗಳೂರು : ಸದಾ ಜನರಿಂದ ತುಂಬಿ ತುಳುಕುವ ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ ಗೆ ಬಿಬಿಎಂಪಿ ಬೀಗ ಹಾಕೋ ಮೂಲಕ ತೆರಿಗೆಕಳ್ಳರಿಗೆ ಚುರುಕು ಮುಟ್ಟಿಸುವ ಪ್ರಯತ್ನ ಮಾಡಿದೆ. ಹಲವಾರು ಭಾರಿ ನೊಟೀಸ್ ನೀಡಿದ ಬಳಿಕವೂ ಬರೋಬ್ಬರಿ 32 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡ ಕಾರಣಕ್ಕೆ ಮಂತ್ರಿ ಮಾಲ್ ಗೆ ಬೀಗ ಹಾಕಲಾಗಿದೆ.

ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಮಂತ್ರಿ ಮಾಲ್ ಗೆ ಬೀಗ ಹಾಕೋ ಮೂಲಕ ತೆರಿಗೆ ಬಾಕಿ ಉಳಿಸಿಕೊಳ್ಳೋ ದೊಡ್ಡ ಕುಳಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಬಿಬಿಎಂಪಿಗೆ ಮಂತ್ರಿಮಾಲ್ 32 ಕೋಟಿ ತೆರಿಗೆ ಪಾವತಿಸಬೇಕಿತ್ತು. ಈ ಹಿಂದೆ ಮಂತ್ರಿ ಮಾಲ್ ಮಾಲೀಕರು 10 ಕೋಟಿ ರೂಪಾಯಿ ಚೆಕ್ ನೀಡಿದ್ದರು. ಆದರೆ ಅದು ಬೌನ್ಸ್ ಆಗಿತ್ತು.

ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಲಾಕೌಟ್ ಮಾಡುವ ಮೂಲಕ ಮಂತ್ರಿಮಾಲ್ ಗೆ ಖಡಕ್ ಎಚ್ಚರಿಕೆ ನೀಡಿದೆ. ಈಗ ಮಾರ್ಚ್ 1 ರವರೆಗೆ ಕಾಲಾವಕಾಶ ನೀಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಬಿಬಿಎಂಪಿ ಕಂದಾಯ ಅಧಿಕಾರಿ ಪ್ರಸನ್ನ ಕುಮಾರ್, ಮೂರು ವರ್ಷಗಳಿಂದ ತೆರಿಗೆ ಕಟ್ಟದೇ ಬಾಕಿ ಉಳಿಸಿಕೊಂಡಿರುವ ಮಂತ್ರಿ ಮಾಲ್ ಹಲವಾರು ಭಾರಿ ನೊಟೀಸ್ ನೀಡಲಾಗಿತ್ತು.

ಆದರೆ ತೆರಿಗೆ ಪಾವತಿಸಿರಲಿಲ್ಲ. ಹೀಗಾಗಿ ಸಾಂಕೇತಿಕವಾಗಿ ಲಾಕೌಟ್ ಮಾಡಿದ್ದೇವೆ. ಸಿಬ್ಬಂದಿಯನ್ನು ಹೊರಕ್ಕೆ ಕಳಿಸಿ ಬೀಗ ಹಾಕಲಾಗಿತ್ತು. ಒಂದೊಮ್ಮೆ ಮಾರ್ಚ್ 1 ರೊಳಗೆ ತೆರಿಗೆ 32 ಕೋಟಿ ಕಟ್ಟದೇ ಹೋದರೇ ಮಾಲ್ ವಶಕ್ಕೆ ಪಡೆಯುವುದಾಗಿ ಬಿಬಿಎಂಪಿ ಮಂತ್ರಿ ಮಾಲ್ ಗೆ ಎಚ್ಚರಿಕೆ ನೀಡಿದೆ.

Comments are closed.