ಸಾರಿಗೆ ಮುಷ್ಕರ….! 10 ಲಕ್ಷ ಪರಿಹಾರ ಕೋರಿ ಬಿಎಂಟಿಸಿ ಎಂಡಿ ಹಾಗೂ ಕೋಡಿಹಳ್ಳಿಗೆ ನೊಟೀಸ್ ರವಾನಿಸಿದ ವಿದ್ಯಾರ್ಥಿನಿ…!!

ನೀಕೊಡೆ ನಾ ಬಿಡೆ ಎಂಬ ಸ್ಥಿತಿಯಲ್ಲಿ ರಾಜ್ಯದ ಸಾರಿಗೆ ನೌಕರರು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮುಷ್ಕರ ಆರಂಭಿಸಿದ್ದಾರೆ. ಆದರೆ ಸರ್ಕಾರ ಸಾರಿಗೆ ನೌಕರರ ಮುಷ್ಕರಕ್ಕೆ ಸೊಪ್ಪು ಹಾಕಿಲ್ಲ.  ಈ ಮಧ್ಯೆ  ಸಾರಿಗೆ ಮುಷ್ಕರದಿಂದ ಸಂಕಷ್ಟಕ್ಕಿಡಾದ ವಿದ್ಯಾರ್ಥಿನಿಯೊಬ್ಬಳು ಬಿಎಂಟಿಸಿ ಎಂಡಿ ಹಾಗೂ ಹೋರಾಟದ ನೇತೃತ್ವದ ವಹಿಸಿದ ಕೋಡಿಹಳ್ಳಿ ಚಂದ್ರಶೇಖರ್ ಗೆ ನೊಟೀಸ್ ರವಾನಿಸಿದ್ದಾರೆ.

ತುಮಕೂರು ಮೂಲದ ವಿದ್ಯಾರ್ಥಿನಿ ಪಾವನ ಕೆಂಗೇರಿಯ ಜೆಎಸ್ಎಸ್  ಅಕಾಡೆಮಿ ಆಫ್ ಟೆಕ್ನಿಕಲ್ ಎಜ್ಯುಕೇಶನ್ ಕಾಲೇಜಿನಲ್ಲಿ  ಬಿಇ ಮೊದಲ ಸೆಮಿಸ್ಟರ್ ಓದುತ್ತಿದ್ದಾರೆ. ಕಾಲೇಜಿಗೆ ಬಸ್ ನಲ್ಲಿ ಓಡಾಡುವ ಪಾವನ ಇದಕ್ಕಾಗಿ ವಾರ್ಷಿಕ ಪಾಸ್ ಪಡೆದಿದ್ದಾರೆ. ಆದರೆ ಈಗ ಸಾರಿಗೆ ಇಲಾಖೆಯ ಮುಷ್ಕರದಿಂದ ಖಾಸಗಿ ಬಸ್ ಗಳಲ್ಲಿ ಹಣ ಕೊಟ್ಟು ಸಂಚರಿಸುವ ಸ್ಥಿತಿ ಎದುರಾಗಿದೆ. ಹೀಗಾಗಿ ವಿದ್ಯಾರ್ಥಿನಿ ಕಾನೂನಿನ ಮೊರೆ ಹೋಗಿದ್ದಾರೆ.

ಮುಷ್ಕರಕ್ಕೆ ಕಾರಣವಾಗಿರುವ ಬಿಎಂಟಿಸಿ ಆಡಳಿತ ಮಂಡಳಿಯ ಎಂಡಿಗೆ ಹಾಗೂ ಮುಷ್ಕರದ ನೇತೃತ್ವ ವಹಿಸಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಗೆ ಪರಿಹಾರ ಕೋರಿ ನೊಟೀಸ್ ಕಳುಹಿಸಿದ್ದಾರೆ.

ಸೇವಾ ನ್ಯೂನ್ಯತೆ ಹಾಗೂ ಅನುಚಿತ ವ್ಯಾಪಾರ ಪದ್ಧತಿ, ಸಾರ್ವಜನಿಕ ತುರ್ತು ಸೇವೆಯ ಅವ್ಯವಸ್ಥೆ ಎಲ್ಲವನ್ನು ಉಲ್ಲೇಖಿಸಿದ ವಿದ್ಯಾರ್ಥಿನಿ ತಮಗಾದ ನಷ್ಟಕ್ಕೆ 10 ಲಕ್ಷ ಪರಿಹಾರ ಕೋರಿದ್ದಾರೆ.

ಕಳೆದ ಮೂರು ದಿನಗಳಿಂದ ರಾಜ್ಯದಾದ್ಯಂತ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಬಸ್ ಗಳು ರಸ್ತೆಗೆ ಇಳಿಯುತ್ತಿಲ್ಲ. ಹೀಗಾಗಿ ಜನರು ,ವಿದ್ಯಾರ್ಥಿಗಳು ಸಂಕಷ್ಟಕ್ಕಿಡಾಗಿದ್ದು, ಓಡಾಟಕ್ಕಾಗಿ ಒಂದಕ್ಕೆ ಎರಡರಷ್ಟು ಹಣ ತೆತ್ತು ಅಟೋ,ಟ್ಯಾಕ್ಸಿ ಹಾಗೂ ಖಾಸಗಿ ಬಸ್ ನಲ್ಲಿ ಓಡಾಡುವಂತಾಗಿದೆ.

Comments are closed.