ಬೆಂಗಳೂರು: ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕೈ ಪಾಳಯ ತೊರೆದು ಕಮಲ ಮುಡಿದ ಮಾಜಿ ಶಾಸಕ ಮುನಿರತ್ನ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿಬಿದ್ದಿದ್ದು, ಒಬ್ಬರಾದ ಮೇಲೆ ಒಬ್ಬರಂತೆ ಮುನಿರತ್ನ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ತಮ್ಮ ಮೇಲಿನ ಆರೋಪಕ್ಕೆ ಕಣ್ಣೀರಿಟ್ಟಿರುವ ಮುನಿರತ್ನ, ಆಣೆ ಪ್ರಮಾಣಕ್ಕೂ ಸಿದ್ಧ ಎಂದಿದ್ದಾರೆ.

ನಾನು ಕಾಂಗ್ರೆಸ್ ತೊರೆದಿದ್ದು, ಅಲ್ಲಿನ ಒಳಜಗಳದಿಂದ ಬೇಸತ್ತು. ಆದರೆ ಬಿಜೆಪಿಗೆ ಬಂದ್ರೇ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂಬ ಕಾರಣಕ್ಕೆ ಬಿಜೆಪಿ ಸೇರ್ಪಡೆಗೊಂಡಿದ್ದೇನೆಯೇ ಹೊರತು ಹಣಕ್ಕಾಗಿ ಅಲ್ಲ. ಹಣಕ್ಕಾಗಿ ನಾನು ಬಿಜೆಪಿಗೆ ಬಂದಿಲ್ಲ ಅನ್ನೋದನ್ನು ನಾನು ಆಣೆ ಮಾಡಿ ಹೇಳಲು ಸಿದ್ಧ ಎಂದಿದ್ದಾರೆ.

ಅಷ್ಟೇ ಅಲ್ಲ, ಧರ್ಮಸ್ಥಳದ ಮಂಜುನಾಥ ಸ್ವಾಮಿ ಮೇಲೆ ಬೇಕಿದ್ದರೂ ಪ್ರಮಾಣ ಮಾಡಲು ಸಿದ್ಧನಿದ್ದೇನೆ. ಒಂದು ರೂಪಾಯಿ ಹಣವನ್ನು ಪಡೆದಿಲ್ಲ. ಹಾಗೇ ಹಣ ಪಡೆದು ನಾನು ಪಕ್ಷ ಬದಲಾಯಿಸಿದ್ದು ಹೌದಾದರೇ ನಾನು ಸರ್ವನಾಶವಾಗಲಿ. ಮಾಧ್ಯಮದವರೂ ಬರಲಿ, ನಾನು ಬರುತ್ತೇನೆ, ಆರೋಪ ಮಾಡುವವರು ಬರಲಿ ನಾನು ಪ್ರಮಾಣ ಮಾಡುತ್ತೇನೆ ಎಂದು ಸವಾಲೆಸೆದಿದ್ದಾರೆ.

ನಾನು ತಾಯಿಯನ್ನು ಮಾರಿದ್ದೇನೆ ಎಂದು ಕಾಂಗ್ರೆಸ್ ನಾಯಕರು ಪದೇ ಪದೇ ಹೇಳಿ ನನಗೆ ನೋವು ನೀಡುತ್ತಿದ್ದಾರೆ. ಆದ್ರೆ ನಾನು ಅಂತಹ ಕೆಲಸ ಮಾಡಿಲ್ಲ. ಬಿಜೆಪಿಯಿಂದ ಅಭಿವೃದ್ಧಿ ಸಾಧ್ಯ ಎಂದು ನಂಬಿ ಕಾಂಗ್ರೆಸ್ ತೊರೆದಿದ್ದೇನೆ ಎಂದು ಭಾವುಕರಾಗಿದ್ದಾರೆ.

ಚುನಾವಣೆ ವೇಳೆ ಕರ್ನಾಟಕದಲ್ಲಿ ಆಣೆ ಪ್ರಮಾಣ ಸಾಮಾನ್ಯ ಎಂಬಂತಾಗಿದ್ದು, ಈ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಹಾಲಿ ಮುಖ್ಯಮಂತ್ರಿ ಬಿಎಸ್ವೈ ನಡುವೆಯೂ ಆಣೆ ಪ್ರಮಾಣದ ಮಾತುಗಳು ಕೇಳಿಬಂದಿದ್ದು, ಧರ್ಮಸ್ಥಳಕ್ಕೆ ಬನ್ನಿ ಎಂದು ಪರಸ್ಪರರು ಸವಾಲು ಹಾಕಿದ್ದರು.