ಕೊರೋನಾ ನಿಯಮ ಉಲ್ಲಂಘನೆ ಬೆಂಗಳೂರಿನ 7 ಆಸ್ಪತ್ರೆಗಳಿಗೆ ಬಿಬಿಎಂಪಿ ಶೋಕಾಸ್ ನೊಟೀಸ್..!

ಬೆಂಗಳೂರಿನ: ರಾಜ್ಯ ಆರೋಗ್ಯ ಇಲಾಖೆ ಸೂಚನೆಯಂತೆ ಕೊರೋನಾ ಚಿಕಿತ್ಸೆಗೆ ಹಾಸಿಗೆ ಹಾಗೂ ವೆಂಟಿಲೇಟರ್ ಮೀಸಲಿರಿಸದ ಆಸ್ಪತ್ರೆಗಳಿಗೆ ಸಂಕಷ್ಟ ಎದುರಾಗಿದ್ದು, 24 ಗಂಟೆಗಳ ಗಡುವು ವಿಧಿಸಿ ಬಿಬಿಎಂಪಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ಕೊರೋನಾ ಪೀಡಿತರ ಸಂಖ್ಯೆ ಏರುತ್ತಿದ್ದಂತೆ ನಗರದ ಎಲ್ಲ ಆಸ್ಪತ್ರೆಗಳು ತಮ್ಮ ಆಸ್ಪತ್ರೆಯ ಶೇಕಡಾ 50 ರಷ್ಟು ಹಾಸಿಗೆಗಳನ್ನು ಕೊರೋನಾ ಪೀಡಿತರ ಚಿಕಿತ್ಸೆಗೆ ಮೀಸಲಿರಸಬೇಕೆಂದು ಬಿಬಿಎಂಪಿ ಹಾಗೂ ರಾಜ್ಯ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಆದರೆ ನಗರದ ಬಹುತೇಕ ಪ್ರತಿಷ್ಠಿತ ಆಸ್ಪತ್ರೆಗಳು ಈ ಸುತ್ತೋಲೆಗೆ ಕವಡೆ ಕಾಸಿನ ಕಿಮ್ಮತ್ತು ನೀಡಿರಲಿಲ್ಲ.

ಹೀಗಾಗಿ ಈಗಾಗಲೇ ಹಲವು  ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿತ್ತು. ಆದರೂ ಆಸ್ಪತ್ರೆಗಳು ನಿಯಮ ಪಾಲಿಸದ ಹಿನ್ನೆಲೆಯಲ್ಲಿ ರಂಗದೊರೈ ಮೆಮೋರಿಯಲ್ ಆಸ್ಪತ್ರೆ, ಸಂಜೀವಿನಿ ಆಸ್ಪತ್ರೆ, ಡಾ.ಜಿವಿಜಿ ಹೆಲ್ತಕೇರ್ ಪ್ರವೈಟ್ ಲಿಮಿಟೆಡ್, ಶ್ರೀನಿವಾಸ್ ಹಾಸ್ಪಿಟಲ್, ಮೆಡ್ ಸ್ಟಾರ್ ಆಸ್ಪತ್ರೆ, ನಂದನಾ ಹೆಲ್ತ್ ಕೇರ್ ಸರ್ವೀಸ್ ಸೇರಿದಂತೆ ಒಟ್ಟು 7 ಆಸ್ಪತ್ರೆಗಳಿಗೆ ಶೋಕಾಸ್ ನೋಟೀಸ್ ಜಾರಿಯಾಗಿದೆ.

ನಿಯಮ ಉಲ್ಲಂಘಿಸಿದ ನಿಮ್ಮ ಪರವಾನಿಗೆಯನ್ನು ಯಾಕೆ ಅಮಾನತ್ತು ಮಾಡಬಾರದೆಂದು ಉತ್ತರಿಸಲು ಸೂಚಿಸಲಾಗಿದೆ. ಅಲ್ಲದೇ 24 ಗಂಟೆಯಲ್ಲಿ ನಿಗದಿತ ಹಾಸಿಗೆಯನ್ನು ಮೀಸಲಿರಿಸಲು ಸೂಚಿಸಲಾಗಿದೆ ಎಂದು ಆಯುಕ್ತ ಮಂಜುನಾಥ ಪ್ರಸಾದ್ ಮಾಹಿತಿ ನೀಡಿದ್ದಾರೆ.

24 ಗಂಟೆಯಲ್ಲಿ ಹಾಸಿಗೆ ಮೀಸಲಿರಿಸಿ ಉತ್ತರ ನೀಡದಿದ್ದರೇ, ಹೊರರೋಗಿಗಳ ವಿಭಾಗವನ್ನು ಮುಚ್ಚಲಾಗುವುದು.  ಆಗಲೂ ಸ್ಪಂದಿಸದಿದ್ದರೇ, ಒಳರೋಗಿಗಳನ್ನು ಬೇರೆಡೆ ಶಿಫ್ಟ್ ಮಾಡಿ ಆಸ್ಪತ್ರೆ ಪರವಾನಿಗೆ ರದ್ದು ಮಾಡಲಾಗುವುದು ಎಂದು ಬಿಬಿಎಂಪಿ ಎಚ್ಚರಿಸಿದೆ.

Comments are closed.