ಹಾನಗಲ್ ಬಿಜೆಪಿ ಶಾಸಕ ಸಿಎಂ ಉದಾಸಿ ಇನ್ನಿಲ್ಲ : ನಾಳೆ ಅಂತ್ಯಕ್ರೀಯೆ

ಬೆಂಗಳೂರು : ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ ಸಿಎಂ ಉದಾಸಿ ಅವರು ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿದ್ದು, ನಾಳೆ ಹಾನಗಲ್ ನಲ್ಲಿ ಅಂತ್ಯಕ್ರೀಯೆ ನಡೆಯಲಿದೆ.

ಸಿಎಂ ಉದಾಸಿ ಅವರು 1983ರಲ್ಲಿ ಹಾನಗಲ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವನ್ನು ಕಂಡಿದ್ದರು. 1985ರಲ್ಲಿ ಜನತಾ ಪಕ್ಷ, 1994ರಲ್ಲಿ ಜನತಾದಳ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಸಿಎಂ ಉದಾಸಿ ಅವರು ರಾಮಕೃಷ್ಣ ಹೆಗಡೆ ಅವರ ಅವಧಿಯಲ್ಲಿ ಅರಣ್ಯ ಸಚಿವರಾಗಿ ಸೇವೆ ಸಲ್ಲಸಿದ್ದಾರೆ. 2003ರಿಂದಲೂ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಬಿಜೆಪಿ – ಜೆಡಿಎಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಾನಗಲ್ ಕ್ಷೇತ್ರದಲ್ಲಿ ಸಾಕಷ್ಟು ಅಭ್ಯರ್ಥಿ ಕಾರ್ಯಗಳನ್ನು ಮಾಡುವುದರ ಜೊತೆಗೆ ಜನಾನುರಾಗಿಯಾಗಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದಲೂ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಕಳೆದ ವಾರವಷ್ಟೇ ಸಿಎಂ ಯಡಿಯೂರಪ್ಪ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಿಕೊಂಡು ಬಂದಿದ್ದರು.

ಆದ್ರೀಗ ಚಿಕಿತ್ಸೆ ಫಲಕಾರಿಯಾಗದೇ ಬಿಜೆಪಿ ಶಾಸಕ ಸಿಎಂ ಉದಾಸಿ ಅವರು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಸಿಎಂ ಉದಾಸಿ ಅವರ ಅಂತ್ಯಕ್ರೀಯೆ ನಾಳೆ ಹಾನಗಲ್ ನಲ್ಲಿ ನಡೆಯಲಿದೆ. ಹಿರಿಯ ಶಾಸಕ ಸಿಎಂ ಉದಾಸಿ ಅವರ ನಿಧನಕ್ಕೆ ಸಿಎಂ ಯಡಿಯೂರಪ್ಪ ಸೇರಿದಂತೆ ಹಲವರು ಕಂಬನಿ ಮಿಡಿಸಿದ್ದಾರೆ.

Comments are closed.