ಮಾಹಿತಿ ಮುಚ್ಚಿಟ್ಟ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ ಶಾಕ್….! ಹಣ ವಾಪಸ್ಸಾತಿಗೆ ನೊಟೀಸ್…!

ಬೆಂಗಳೂರು: ಕಿಸಾನ್ ಸಮ್ಮಾನ್ ಯೋಜನೆಯಡಿ ಸುಳ್ಳು ಮಾಹಿತಿ ನೀಡಿ ಸಹಾಯಧನ ಪಡೆದ ರೈತರಿಗೆ ಸಂಕಷ್ಟ ಎದುರಾಗಿದ್ದು, ಸುಳ್ಳು ಮಾಹಿತಿ ನೀಡಿ ಸರ್ಕಾರದಿಂದ ಪಡೆದ ಅನುದಾನ ಹಿಂತಿರುಗಿಸುವಂತೆ ಕೃಷಿ ಇಲಾಖೆ ನೊಟೀಸ್ ಜಾರಿ ಮಾಡಿದೆ.

ರಾಜ್ಯದಲ್ಲಿ ಒಟ್ಟು 85 ಸಾವಿರ ರೈತರಿಗೆ ನೊಟೀಸ್ ಜಾರಿಯಾಗಿದ್ದು, ಹಣ ಹಿಂತಿರುಗಿಸುವಂತೆ ಸೂಚಿಸಲಾಗಿದೆ. ರಾಜ್ಯದ ಒಟ್ಟು 85 ಸಾವಿರದ 208 ಜನ ರೈತರು ಆದಾಯ ತೆರಿಗೆ ಪಾವತಿಸಿದ್ದನ್ನು ಮುಚ್ಚಿಟ್ಟು ಸುಳ್ಳು ಮಾಹಿತಿ ನೀಡಿ ಕೇಂದ್ರದ ಕಿಸಾನ್ ಸಮ್ಮಾನ ಯೋಜನೆಯಿಂದ ಹಣ ಪಡೆದಿದ್ದರು.

ಕೇಂದ್ರ ಫಲಾನುಭವಿಗಳ ಪಟ್ಟಿಯ ರೈತರ ಬ್ಯಾಂಕ್ ಅಕೌಂಟ್ ಹಾಗೂ ಆಧಾರ ಕಾರ್ಡ್ ಪರಿಶೀಲನೆ ವೇಳೆ ಈ ಸಂಗತಿ ಹೊರಬಿದ್ದಿದೆ. ಹೀಗಾಗಿ ಸುಳ್ಳು ಮಾಹಿತಿ ನೀಡಿದ ರೈತರ ಪಟ್ಟಿಯನ್ನು  ಕೇಂದ್ರ ಕೃಷಿ ಇಲಾಖೆ ರಾಜ್ಯಕ್ಕೆ ಕಳುಹಿಸಿದ್ದು, ತಪ್ಪು ಮಾಹಿತಿ ನೀಡಿದ ರೈತರಿಂದ ಹಣವನ್ನು ವಾಪಸ್ ಪಡೆಯಲು ಆದೇಶಿಸಿದೆ. ಕೇಂದ್ರದ ಸೂಚನೆಯಂತೆ ರಾಜ್ಯ ಕೃಷಿ ಇಲಾಖೆ ರೈತರಿಗೆ ನೊಟೀಸ್ ಜಾರಿ ಮಾಡಿದೆ.

ಜಿಲ್ಲಾ ರೈತ ಕೇಂದ್ರಗಳು ಆದಾಯ ತೆರಿಗೆ ಪಾವತಿಸುವ ರೈತರಿಂದ ಹಣವನ್ನು ವಾಪಸ ಪಡೆಯುವ ಪ್ರಕ್ರಿಯೆ ಆರಂಭಿಸಿದ್ದು, ಡಿಮ್ಯಾಂಡ್ ಡ್ರ್ಯಾಫ್ಟ್ ಮೂಲಕ ಹಣವನ್ನು ಕೃಷಿ ಸಹಾಯಕ ನಿರ್ದೇಶಕರ ಕಚೇರಿಗೆ ಹಣ ಹಿಂತಿರುಗಿಸುವಂತೆ ಸೂಚಿಸಲಾಗಿದೆ. ಒಂದು ವೇಳೆ ಹಣ ವಾಪಸ ನೀಡದೇ ಹೋದಲ್ಲಿ  ಕೃಷಿ ಇಲಾಖೆಯ ಲ್ಲ ಸವಲತ್ತುಗಳನ್ನು ತಡೆ ಹಿಡಿಯುವುದಾಗಿ ಎಚ್ಚರಿಸಲಾಗಿದೆ.

ಇದುವರೆಗೂ ರಾಜ್ಯದ 52 ಲಕ್ಷದ 68 ಸಾವಿರದ 327 ರೈತರಿಗೆ ಸಹಾಯಧನ ಮಂಜೂರಾಗಿದೆ. ಒಟ್ಟು 56 ಲಕ್ಷ 74 ಸಾವಿರದ 940 ರೈತರು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 85 ಸಾವಿರ ರೈತರ ಆದಾಯ ತೆರಿಗೆ ಪಾವತಿಸುವ ಸಂಗತಿಯನ್ನು ಮುಚ್ಚಿಟ್ಟು ಅರ್ಜಿ ಸಲ್ಲಿಸಿದ್ದು ಬೆಳಕಿಗೆ ಬಂದಿದೆ. ಈ ಯೋಜನೆ ಕೇವಲ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಹಾಯ ನೀಡಲು ರೂಪಿಸಿದ್ದಾಗಿದೆ.

Comments are closed.