ಸಾಮಾನ್ಯವಾಗಿ ಯುವಜೋಡಿಗಳು ನಿಶ್ಚಿತಾರ್ಥದಲ್ಲಿ ಉಂಗುರ ಬದಲಾಯಿಸಿಕೊಳ್ಳೋದು ವಾಡಿಕೆ. ಆದರೆ ಅಪ್ಪಟ ದೇಶಪ್ರೇಮಿಗಳಾದ ಯುವಜೋಡಿಯೊಂದು ನಿಶ್ಚಿತಾರ್ಥದಂದು ಉಂಗುರದ ಬದಲು ಭಾರತಾಂಬೆಯ ಪೋಟೋ ಬದಲಾಯಿಸಿಕೊಂಡು ವಿಭಿನ್ನತೆ ಮರೆದಿದ್ದಾರೆ.

ಚಿಕ್ಕಮಗಳೂರಿನ ಹಿರೇಮಗಳೂರು ನಿವಾಸಿಗಳಾದ ವಿದ್ಯಾಶ್ರೀ ಹಾಗೂ ರವೀಶ್ ಪಟೇಲ್ ವಿವಾಹ ನಿಶ್ಚಿತಾರ್ಥ ಇಂದು ನಡೆದಿದೆ. ಈ ವೇಳೆ ಪರಸ್ಪರ ವಧು-ವರರು ಉಂಗುರ ಬದಲಾಯಿಸಿಕೊಳ್ಳುವ ಬದಲು ದೇಶಭಕ್ತಿಯಿಂದ ಭಾರತಮಾತೆಯ ಪೋಟೋವನ್ನು ಎಕ್ಸೆಂಜ್ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಇಂಜೀನಿಯರ್ ಗಳಾಗಿರುವ ವಿದ್ಯಾಶ್ರೀ-ರವೀಶ್ ಪಟೇಲ್ ಪರಸ್ಪರ ಮಾತನಾಡಿಕೊಂಡು ನಿರ್ಧರಿಸಿ ಇಂತಹದೊಂದು ವಿಭಿನ್ನ ಪ್ರಯತ್ನಕ್ಕೆ ಅಡಿ ಇಟ್ಟಿದ್ದಾರೆ. ದೇಶಪ್ರೇಮವನ್ನು ವ್ಯಕ್ತಪಡಿಸೋಕೆ ಮಕ್ಕಳು ಆಯ್ಕೆ ಮಾಡಿಕೊಂಡ ರೀತಿಯನ್ನು ಪೋಷಕರು ಒಪ್ಪಿ ಪ್ರೋತ್ಸಾಹಿಸಿದ್ದಾರೆ.

ಹಿರೇಮಗಳೂರಿನ ಪೈಕಲ್ಯಾಣಮಂಟಪದ ಬಳಿ ಇರುವ ವಿದ್ಯಾಶ್ರೀ ನಿವಾಸದಲ್ಲಿ ಈ ಸರಳ ನಿಶ್ಚಿತಾರ್ಥ ಸಮಾರಂಭ ನಡೆದಿದ್ದು, ಈ ವೇಳೆ ವರನ ಮನೆಯವರು ಸೀರೆ,ಒಡವೆ,ಹೂವು-ಹಣ್ಣಿನ ಜೊತೆ ಭಾರತಮಾತೆಯ ಪೋಟೋವನ್ನು ವಧುವಿಗೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ವಿದ್ಯಾಶ್ರೀ ಕುಟುಂಬವೂ ವರನ ಮನೆಗೆ ಭಾರತಾಂಬೆಯ ಪೋಟೋ ನೀಡಿದೆ.

ಈ ವಿಭಿನ್ನ ಹಾಗೂ ಅರ್ಥಪೂರ್ಣ ನಿಶ್ಚಿತಾರ್ಥಕ್ಕೆ ವಧು-ವರರ ಸ್ನೇಹಿತರು,ಬಂಧುಮಿತ್ರರು ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದು ಶುಭಹಾರೈಸಿದ್ದಾರೆ.