ಬೆಂಗಳೂರು : ಲಾಕ್ ಡೌನ್ ಎಫೆಕ್ಟ್ ಇದೀಗ ಗ್ರಾಮ ಪಂಚಾಯತ್ ಚುನಾವಣೆಯ ಮೇಲೆಯೂ ಬಿದ್ದಿದೆ. ಹೀಗಾಗಿ ಈ ಬಾರಿ ಗ್ರಾಮ ಪಂಚಾಯತ್ ಗಳ ಚುನಾವಣೆ ನಡೆಯೋದು ಅಸಾಧ್ಯ. ಹೀಗಾಗಿ ರಾಜ್ಯ ಸರಕಾರ ಪರ್ಯಾಯ ಮಾರ್ಗಗಳ ಕುರಿತು ಚಿಂತನೆ ನಡೆಸಿದೆ.

ರಾಜ್ಯದ 6021 ಗ್ರಾಮ ಪಂಚಾಯತ್ ಗಳ ಅವಧಿ ಇದೇ ಮೇ ಹಾಗೂ ಜೂನ್ ತಿಂಗಳಿನಲ್ಲಿ ಮುಕ್ತಾಯವಾಗಲಿದೆ. ಹೀಗಾಗಿ ಅವಧಿ ಮುಗಿಯಲಿರುವ ಗ್ರಾಮ ಪಂಚಾಯತ್ ಗಳಿಗೆ ಇಷ್ಟರಲ್ಲೇ ಚುನಾವಣೆ ನಡೆಯಬೇಕಿತ್ತು.

ಆದರೆ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದೇಶ ಹೇರಿರುವುದರಿಂದ ಚುನಾವಣೆ ನಡೆಸುವುದು ಅಸಾಧ್ಯ. ಹೀಗಾಗಿಯೇ ರಾಜ್ಯ ಸರಕಾರ ಗ್ರಾಮ ಪಂಚಾಯತ್ ಗಳಿಗೆ ಆಡಳಿತ ಸಮಿತಿಯನ್ನು ರಚಿಸಲು ತೀರ್ಮಾನಿಸಿದೆ.

ಗ್ರಾಮ ಪಂಚಾಯತ್ ಚುನಾವಣೆಯ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಆಡಳಿತ ಸಮಿತಿ ರಚನೆಯ ಕುರಿತು ಇಂದು ಸಚಿವರ ಸಮಿತಿಯ ಸಭೆ ನಡೆಯಲಿದ್ದು, ಸಭೆಯಲ್ಲಿ ಆಡಳಿತ ಸಮಿತಿಯ ಕುರಿತು ರೂಪುರೇಷೆಗಳು ಸಿದ್ದವಾಗಲಿವೆ. ಆಡಳಿತ ಸಮಿತಿಯನ್ನು ರಚನೆ ಮಾಡಿ ಅಧಿಕಾರವನ್ನು ಯಾರಿಗೆ ವಹಿಸಬೇಕು.

ಗ್ರಾಮ ಪಂಚಾಯತ್ ಗಳ ನಿರ್ವಹಣೆಯ ಹೊಣೆಯನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ವಹಿಸಬೇಕೆ ಇಲ್ಲಾ ಗ್ರಾಮ ಪಂಚಾಯತ್ ಪಿಡಿಓಗಳಿಗೆ ವಹಿಸಬೇಕೆ ಅನ್ನುವ ಗೊಂದಲದಲ್ಲಿದೆ ರಾಜ್ಯ ಸರಕಾರ. ಹೀಗಾಗಿ ಇಂದು ನಡೆಯಲಿರುವ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆಯಿದೆ.