ಕೊರೋನಾ ಲಸಿಕೆ ಹಾಕಿಸಿಕೊಳ್ಳಿ ಚಿನ್ನದ ಮೂಗುತಿ ಗೆಲ್ಲಿ…! ಎಲ್ಲಿದೆ ಗೊತ್ತಾ ಈ ಆಫರ್…!!

ದೇಶದಲ್ಲಿ ಕೊರೋನಾ ಎರಡನೆ ಅಲೆ ಜೋರಾಗಿದೆ. ಪ್ರತಿನಿತ್ಯ ಮಹಾರಾಷ್ಟ್ರ ಸೇರಿದಂತೆ ಎಲ್ಲೆಡೆ ಸೋಂಕಿತರ ಸಂಖ್ಯೆ ಏರುತ್ತಲೆ ಇದೆ. ಈ ಮಧ್ಯೆ ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟವರಿಗೆ ಕೋವಾಕ್ಸಿನ್ ಲಸಿಕೆ ನೀಡಲಾಗುತ್ತಿದ್ದರೂ ಜನರು ವಾಕ್ಸಿನೇಶನ್ ನತ್ತ ಮನಸ್ಸು ಮಾಡುತ್ತಿಲ್ಲ.  ಈ ನಿಟ್ಟಿನಲ್ಲಿ ಕೊರೋನಾ ಲಸಿಕೆ ಹಾಕಿಸಿಕೊಂಡವರಿಗೆ ಚಿನ್ನದ ಮೂಗುತಿ ಗಿಫ್ಟ್ ನೀಡುವ ಹೊಸ ಪ್ರಯತ್ನಕ್ಕೆ ಸಮುದಾಯವೊಂದು ಮುನ್ನುಡಿ ಬರೆದಿದೆ.

ದೇಶದಾದ್ಯಂತ ಕೊರೋನಾ ಲಸಿಕೆ ಅಭಿಯಾನ ಆರಂಭಗೊಂಡಿದ್ದರೂ ಜನರು ವಿಶೇಷವಾಗಿ ಗ್ರಾಮೀಣ ಭಾಗದ ಜನರು ಲಸಿಕೆ ಪಡೆಯಲು ಹಿಂದೆಟು ಹಾಕುತ್ತಿದ್ದಾರೆ. ಹೀಗಾಗಿ ನಿಗದಿತ ಸಮಯದಲ್ಲಿ ವಾಕ್ಸಿನೇಶನ್ ನ ನಿಗದಿತ ಗುರಿ ತಲುಪಲು ಕಷ್ಟವಾಗುತ್ತಿದೆ. ಹೀಗಾಗಿ ಗುಜರಾತಿನ ರಾಜ್ ಕೋಟ್ ನಲ್ಲಿ ಲಸಿಕೆ ಪಡೆಯುವುದನ್ನು ಪ್ರೋತ್ಸಾಹಿಸಲು ಚಿನ್ನದ ಉಡುಗೊರೆ ನೀಡಲಾಗುತ್ತಿದೆ.

ರಾಜ್ ಕೋಟ್ ದಗೋಲ್ಡ್ ಸ್ಮಿತ್ ಸಮುದಾಯವು ಕೊರೋನಾ ಲಸಿಕೆ ಪಡೆಯುವ ಮಹಿಳೆಯರಿಗೆ ಚಿನ್ನದ ಮೂಗುತಿ ಹಾಗೂ ಪುರುಷರಿಗೆ ಹ್ಯಾಂಡ್ ಬ್ಲೆಂಡರ್ ಗಳನ್ನು ನೀಡಿ ಗೌರವಿಸುತ್ತಿದೆ. ಇದುವರೆಗೂ ಲಸಿಕೆ ಪಡೆದ 751 ಮಹಿಳೆಯರು ಚಿನ್ನದ ಮೂಗುತಿಯನ್ನು ಕೊಡುಗೆಯಾಗಿ ಪಡೆದಿದ್ದಾರೆ. 580 ಪುರುಷರಿಗೆ ಚಿನ್ನದ ಉಡುಗೊರೆ ನೀಡಲಾಗಿದೆ.

ಸಾರ್ವಜನಿಕರಲ್ಲಿ ಲಸಿಕೆ ಪಡೆಯುವ ಕುರಿತು ತಿಳುವಳಿಕೆ ಮೂಡಿಸುವುದು ಹಾಗೂ ಭಯ ಹೋಗಲಾಡಿಸುವ ನಿಟ್ಟಿನಲ್ಲಿ ಈ ಪ್ರಯತ್ನ ಮಾಡಲಾಗಿದೆ ಎಂದು ಗೋಲ್ಡ್ ಸ್ಮಿತ್ ಸಮುದಾಯ ಹೇಳಿದೆ. ಇದಲ್ಲದೇ ರಾಜ್ ಕೋಟ್ ನ ಹಲವು ಸಂಸ್ಥೆಗಳು ತಮ್ಮ ನೌಕರರಿಗೆ ಉಚಿತವಾಗಿ ಲಸಿಕೆ ಪಡೆಯಲು ಅವಕಾಶ ಕಲ್ಪಿಸಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ದೇಶದಲ್ಲಿ ದಿನವೊಂದಕ್ಕೆ ಸರಾಸರಿ 30 ಲಕ್ಷ ಜನರಿಗೆ ಲಸಿಕೆ ನೀಡಲಾಗುತ್ತಿದ್ದು, ಲಸಿಕೆ ಅಭಿಯಾನ ಆರಂಭವಾದ 8 ದಿನದಲ್ಲಿ 8 ಕೋಟಿ 70 ಲಕ್ಷ 77 ಸಾವಿರ ಜನರಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಅರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಪ್ರಸ್ತುತ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ.

Comments are closed.