ರಾಜ್ಯದ ಇನ್ನೂ 6 ಜಿಲ್ಲೆಗಳಲ್ಲಿ ಲಾಕ್ ಡೌನ್ ಫಿಕ್ಸ್ !

0

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಲಾಕ್ ಡೌನ್ ಆದೇಶವನ್ನು ಜಾರಿ ಮಾಡಲಾಗಿದೆ. ಬೆಂಗಳೂರು ಬೆನ್ನಲ್ಲೇ ಕೊರೊನಾ ತೀವ್ರ ಗತಿಯಲ್ಲಿ ಹರಡುತ್ತಿರುವ ರಾಜ್ಯದ 6 ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲು ರಾಜ್ಯ ಸರಕಾರ ಚಿಂತನೆ ನಡೆಸಿದೆ.

ಬೆಂಗಳೂರಲ್ಲಿಂದು 1,533 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 16,862ಕ್ಕೆ ಏರಿಕೆಯಾಗಿದೆ. ಈ ಪೈಕಿ 12,793 ಮಂದಿ ಇಂದಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದ್ದು, ಸಮುದಾಯಕ್ಕೆ ಸೋಂಕು ಹರಡಿರುವ ಬಗ್ಗೆ ಈಗಾಗಲೇ ಖಚಿತತೆ ಸಿಕ್ಕಿದೆ. ಈ ಹಿನ್ನೆಲೆಯಲ್ಲೀಗ ರಾಜ್ಯ ಸರಕಾರ ಕೊನೆಗೂ ಬೆಂಗಳೂರಲ್ಲಿ ಸಂಪೂರ್ಣ ಲಾಕ್ ಡೌನ್ ಆದೇಶವನ್ನು ಜಾರಿ ಮಾಡಿದೆ.

ಬೆಂಗಳೂರು ಲಾಕ್ ಡೌನ್ ಮಾಡಿರುವ ಬೆನ್ನಲ್ಲೇ ಮತ್ತೆ 8 ಜಿಲ್ಲೆಗಳಲ್ಲಿ ಲಾಕ್ ಡೌನ್ ಆದೇಶ ಜಾರಿಯಾಗೋದು ಪಕ್ಕಾ. ಬೆಂಗಳೂರು ಹೊರತು ಪಡಿಸಿ ದಕ್ಷಿಣ ಕನ್ನಡ, ಉಡುಪಿ, ಯಾದಗರಿ, ಕಲಬುರಗಿ, ಬಳ್ಳಾರಿ, ಧಾರವಾಡ, ಮೈಸೂರು ಹಾಗೂ ಬೀದರ್ ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ.

ಅದ್ರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2,026 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 1,242 ಮಂದಿ ಇಂದಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಕಳೆದೊಂದು ವಾರದಿಂದಲೂ ನೂರೈವತ್ತಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದು, ಸೋಂಕಿತರ ಸಂಖ್ಯೆಯಲ್ಲಿ ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿದೆ.

ಇನ್ನು ಮೂರನೇ ಸ್ಥಾನದಲ್ಲಿರುವ ಕಲಬುರಗಿ ಜಿಲ್ಲೆಯಲ್ಲಿಯೂ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯನ್ನು ಕಾಣುತ್ತಿದೆ. ಜಿಲ್ಲೆಯಲ್ಲಿ 2,024 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 528 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿಯೂ ಕೊರೊನಾ ಸೋಂಕು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಜಿಲ್ಲೆಯಲ್ಲಿ 1,619 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, 605 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಳಿದಂತೆ ಉಡುಪಿ ಜಿಲ್ಲೆಯಲ್ಲಿ 1,566 ಮಂದಿಗೆ ಸೋಂಕು ದೃಢಪಟ್ಟಿದ್ದರೆ, ಈಗಾಗಲೇ 1,234 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಕೇವಲ 329 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೀದರ್ ಜಿಲ್ಲೆಯಲ್ಲಿ 976 ಹಾಗೂ ಧಾರವಾಡ ಜಿಲ್ಲೆಯಲ್ಲಿ 959 ಮಂದಿ ಕೊರೊನಾ ಸೋಂಕಿತರಿದ್ದಾರೆ.

ಕೊರೊನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಕಲಬುರಗಿ, ಬಳ್ಳಾರಿ, ಬೀದರ್, ಧಾರವಾಡ, ಯಾದಗಿರಿ ಜಿಲ್ಲೆಗಳಲ್ಲಿ ಲಾಕ್ ಡೌನ್ ಹೇರಿಕೆಯಾಗುವುದು ಬಹುತೇಕ ಖಚಿತ. ಅಲ್ಲದೇ ಸೋಂಕಿತ ಸಂಖ್ಯೆ ಇನ್ನೆರಡು ದಿನಗಳ ಕಾಲ ಏರಿಕೆಯಾಗಿದ್ದೇ ಆದ್ರೆ ಉಡುಪಿ ಹಾಗೂ ಮೈಸೂರು ಜಿಲ್ಲೆಗಳಲ್ಲಯೂ ಲಾಕ್ ಡೌನ್ ಆದೇಶ ಜಾರಿಯಾಗಲಿದೆ ಎಂದು ತಿಳಿದುಬಂದಿದೆ. ಬೆಂಗಳೂರು ಹೊರತು ಪಡಿಸಿ ರಾಜ್ಯದ ಉಳಿದ ಜಿಲ್ಲೆಗಳಲ್ಲಿನ ಪರಿಸ್ಥಿತಿಯನ್ನು ಅವಲೋಕಿಸುವ ನಿಟ್ಟಿನಲ್ಲಿ ಸೋಮವಾರ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಸಭೆ ನಡೆಯಲಿದ್ದು, ಸಭೆಯ ಬಳಿಕ ಉಳಿದ ಜಿಲ್ಲೆಗಳಲ್ಲಿಯೂ ಲಾಕ್ ಡೌನ್ ಆದೇಶ ಜಾರಿಯಾಗಲಿದೆ.

Leave A Reply

Your email address will not be published.