ನೈಟ್ ಕರ್ಪ್ಯೂ, ಲಾಕ್ ಡೌನ್ ಇಲ್ಲ : ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ : ಸಿಎಂ ಯಡಿಯೂರಪ್ಪ

ಬೆಂಗಳೂರು : ರಾಜ್ಯದಲ್ಲಿ ಕಳೆದ 14 ದಿನಗಳಿಂದಲೂ ಕೊರೊನಾ ವೈರಸ್ ಸೋಂಕಿನ ಪ್ರಮಾಣದ ಹೆಚ್ಚಳವಾಗಿದೆ. ರಾಜ್ಯದಲ್ಲಿ ಎರಡನೇ ಅಲೆ ಕಾಣಿಸಿಕೊಂಡಿದೆ. ಹೀಗಾಗಿ ರಾಜ್ಯದಲ್ಲಿ ಕೊರೊನಾ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಿಎಂ ಯಡಿಯೂರಪ್ಪ ಎಚ್ಚರಿಕೆಯನ್ನು ನೀಡಿದ್ದಾರೆ.

ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೋವಿಡ್ ತಾಂತ್ರಿಕ ಸಮಿತಿ, ಆರೋಗ್ಯ ಸಚಿವರು, ಉನ್ನತ ಶಿಕ್ಷಣ ಸಚಿವರು ಹಾಗೂ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು. ನಂತರ ಸುದ್ದಿಗೋಷ್ಠಿ ನಡೆಸಿದ ಬಿಎಸ್ ವೈ, ರಾಜ್ಯದಲ್ಲಿ ಲಾಕ್ ಡೌನ್ ಹಾಗೂ ನೈಟ್ ಕರ್ಪ್ಯೂ ಜಾರಿ ಮಾಡುತ್ತಿಲ್ಲ. ಆದರೆ ಜನರು ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆಯನ್ನು ಮಾಡಲೇ ಬೇಕು. ಮಾಸ್ಕ್ ಅಳವಡಿಸಿಕೊಂಡು, ಸಾಮಾಜಿಕ ಅಂತರ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ದ ದಂಡ ವಿಧಿಸಲಾಗುವುದು ಎಂದಿದ್ದಾರೆ.

ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರೋ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಂದ ಬರುವವರ ಮೇಲೆ ನಿಗಾ ಇಡಲು ನಿರ್ಧರಿಸಲಾಗಿದೆ. ಅಲ್ಲದೇ ರಾಜ್ಯದಲ್ಲಿ ಕೊರೊನಾ ಲಸಿಕೆ ನೀಡಿಕೆಯ ಪ್ರಮಾಣವನ್ನು ಹೆಚ್ಚಳ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ. ಈ ಕಾರ್ಯಕ್ಕೆ ಸ್ವಯಂ ಸೇವಾ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುವುದು ಎಂದಿದ್ದಾರೆ.

https://kannada.newsnext.live/lady-escape-highschool-student-diffrent-love/

ಮಾರ್ಚ್ 17ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆದಿದ್ದಾರೆ. ಸಭೆಯ ನಂತರದಲ್ಲಿ ಅಗತ್ಯ ಬಿದ್ರೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಜನರು ಜಾತ್ರೆ ಸಮಾರಂಭಗಳಲ್ಲಿ ಮಾಸ್ಕ ಬಳಕೆ ಮಾಡುತ್ತಿಲ್ಲ. ಮದುವೆ ಸಮಾರಂಭಕ್ಕೆ 500 ಜನರನ್ನು ಮೀರುವಂತಿಲ್ಲ. ಸಾರ್ವಜನಿಕ ಸಾರಿಗೆಗಳಲ್ಲಿ ನಿಗದಿಗಿಂತ ಹೆಚ್ಚಿನ ಜನರನ್ನು ಹತ್ತಿಸಿದ್ರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

Comments are closed.