ಕಲಬುರಗಿ, ಉಡುಪಿಯಲ್ಲಿ ಕೊರೊನಾ ಆರ್ಭಟ : ರಾಜ್ಯದಲ್ಲಿಂದು 267 ಮಂದಿಗೆ ಸೋಂಕು ದೃಢ

0

ಬೆಂಗಳೂರು : ಕೊರೊನಾ ಮಹಾಮಾರಿ ರಾಜ್ಯದಲ್ಲಿ ಮತ್ತೆ ತನ್ನ ಅಟ್ಟಹಾಸವನ್ನು ಮೆರೆದಿದೆ. ಕಲಬುರಗಿ ಇಂದು ಕೂಡ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಶತಕದಾಟಿದ್ರೆ, ಕೃಷ್ಣನ ನಗರಿ ಉಡುಪಿ ಅರ್ಧ ಶತಕ ಬಾರಿಸುವ ಮೂಲಕ ಆತಂಕವನ್ನು ಮೂಡಿಸಿದೆ. ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಉಡುಪಿಯನ್ನು ಹಿಂದಿಕ್ಕಿ ಕಲಬುರಗಿ ರಾಜ್ಯದಲ್ಲಿಯೇ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿಯ ಆರ್ಭಟ ಜೋರಾಗಿದೆ. ಕಳೆದೊಂದು ವಾರದಿಂದಲೂ ಕಲಬುರಗಿ ಜಿಲ್ಲೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿದೆ. ನಿನ್ನೆ ಒಂದೇ ದಿನ ಶತಕದ ಗಡಿದಾಟಿದ್ದ ಕೊರೊನಾ ಇಂದೂ ಕೂಡ ಜಿಲ್ಲೆಯಲ್ಲಿ 105 ಮಂದಿಗೆ ದೃಢಪಟ್ಟಿದೆ. ಈ ಮೂಲಕ ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 510ಕ್ಕೆ ಏರಿಕೆಯಾಗುವ ಮೂಲಕ ರಾಜ್ಯದಲ್ಲಿ ಅಗ್ರಸ್ಥಾನಕ್ಕೇರಿದೆ.

ಇನ್ನು ಉಡುಪಿ ಜಿಲ್ಲೆಯಲ್ಲಿಯೂ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಳವಾಗಿದೆ. ಇಂದು ಒಂದೇ ದಿನ ಬರೋಬ್ಬರಿ 62 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 472ಕ್ಕೆ ಏರಿಕೆಯಾಗಿದ್ದು ಎರಡನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಬೆಂಗಳೂರು ನಗರದಲ್ಲಿಯೂ ಕೊರೊನಾ ಸೋಂಕು ಹರಡುತ್ತಿದ್ದು, ಇಂದು 20 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಪಟ್ಟಿದೆ. ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 417ಕ್ಕೆ ಏರಿಕೆಯಾಗಿದೆ.

ಬಿಸಿಲ ನಗರಿ ರಾಯಚೂರಿನಲ್ಲಿಯೂ ಸೋಂಕು ವ್ಯಾಪಕವಾಗಿಯೇ ಹರಡುತ್ತಿದ್ದು, ಜಿಲ್ಲೆಯಲ್ಲಿಂದು 35 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಉಳಿದಂತೆ ಮಂಡ್ಯ ಜಿಲ್ಲೆಯಲ್ಲಿ 13, ಯಾದಗಿರಿ 9, ವಿಜಯಪುರ 6, ದಾವಣಗೆರೆ 3, ದಕ್ಷಿಣ ಕನ್ನಡ 2, ಬಾಗಲಕೋಟೆ 2, ಶಿವಮೊಗ್ಗ 2, ಕೋಲಾರ, ಹಾಸನ, ಬಳ್ಳಾರಿ, ಧಾರವಾಡ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ. ಇಂದು ಪತ್ತೆಯಾಗಿರುವ 267 ಮಂದಿ ಸೋಂಕಿತರ ಪೈಕಿ 250 ಮಂದಿ ಹೊರ ರಾಜ್ಯಗಳಿಂದ ಬಂದವರೇ ಆಗಿದ್ದಾರೆ.

Leave A Reply

Your email address will not be published.