ರೈತರಿಗೆ ಭರ್ಜರಿ ಗಿಫ್ಟ್ ಕೊಟ್ಟ ರಾಜ್ಯ ಸರಕಾರ : ಸಿಎಂ ಯಡಿಯೂರಪ್ಪ 2ನೇ ಪ್ಯಾಕೇಜ್ ಘೋಷಣೆ

0

ಬೆಂಗಳೂರು : ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೊದಲ ಪ್ಯಾಕೇಜ್ ನಲ್ಲಿ ಭರ್ಜರಿ ಘೋಷಣೆಗಳನ್ನು ಮಾಡಿದ್ದರು. ಇದೀಗ 2ನೇ ಪ್ಯಾಕೇಜ್ ಘೋಷಣೆ ಮಾಡಿರುವ ಬಿ.ಎಸ್.ಯಡಿಯೂರಪ್ಪ ಹಣ್ಣು, ತರಕಾರಿ ಬೆಳೆಗಾರರು ಹಾಗೂ ನೇಕಾರರಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ.

ಮೊದಲ ಪ್ಯಾಕೇಜ್ ನಲ್ಲಿ ಹೂವು ಬೆಳೆಗಾರರಿಗೆ ಭರ್ಜರಿ ಪ್ಯಾಕೇಜ್ ಘೋಷಣೆ ಮಾಡಿದ್ದರೆ, ಇದೀಗ 2ನೇ ಪ್ಯಾಕೇಜ್ ನಲ್ಲಿ ಹಣ್ಣು ಹಾಗೂ ತರಕಾರಿ ಬೆಳೆಗಾರರಿಗೆ ತಲಾ ಹೆಕ್ಟೇರ್ ಗೆ 15,000 ರೂಪಾಯಿಯಂತೆ ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ಟೊಮ್ಯಾಟೋ, ಹಸಿಮೆಣಸು, ಹೂಕೋಸು, ಎಲೆಕೋಸು, ಬೂದುಗುಂಬಳ, ಸಿಹಿಗುಂಬಳ, ಕ್ಯಾರೆಟ್, ದಪ್ಪ ಮೆಣಸು, ಸೊಪ್ಪು, ತರಕಾರಿ, ತೊಂಡೆಕಾಯಿ ಬೆಳೆದ ಬೆಳೆಗಾರರಿಗೆ ಪರಿಹಾರ ಸಿಗಲಿದೆ.

ಅಲ್ಲದೇ ಹಣ್ಣು ಬೆಳೆಗಾರರಿಗೂ ಪರಿಹಾರ ಘೋಷಣೆ ಮಾಡಿರುವುದರಿಂದಾಗಿ ಟೇಬಲ್ ದ್ರಾಕ್ಷಿ, ಬಾಳೆಹಣ್ಣು, ಪಪ್ಪಾಯ, ಅಂಜೂರಾ, ಕರ್ಬೂಜ, ಬೋರೆಹಣ್ಣು, ಬೆಣ್ಣೆಹಣ್ಣು ಬೆಳೆದಿರುವ ಬೆಳೆಗಾರರಿಗೆ ಪರಿಹಾರ ಲಭ್ಯವಾಗಲಿದೆ. ವಿಶೇಷ ಪ್ಯಾಕೇಜ್ ಗಾಗಿ ರಾಜ್ಯ ಸರಕಾರ ಹೆಚ್ಚುವರಿಯಾಗಿ 138 ಕೋಟಿ ರೂಪಾಯಿಗಳನ್ನು ಮೀಸಲಿಸಲಿದೆ.

ಇನ್ನು ವಿದ್ಯುತ್ ಚಾಲಿತ ಕೈಮಗ್ಗಗಳನ್ನು ನಿರ್ವಹಣೆ ಮಾಡುತ್ತಿರುವ ನೇಕಾರರಿಗೆ ತಲಾ 2000 ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ. ಹೀಗಾಗಿ ಪವರ್ ಲೂಮ್ಸ್ ನಂಬಿ ಜೀವನ ಸಾಗಿಸುತ್ತಿದ್ದ ನೇಕಾರರಿಗೆ ಸಹಕಾರವಾಗಲಿದೆ. ನೇಕಾರರ ನೆರವಿಗಾಗಿ ರಾಜ್ಯ ಸರಕಾರ ಸುಮಾರು 25 ಕೋಟಿ ರೂಪಾಯಿ ಹಣವನ್ನು ಮೀಸಲಿಡಲು ರಾಜ್ಯ ಸರಕಾರ ನಿರ್ಧರಿಸಿದೆ.

Leave A Reply

Your email address will not be published.