ಜನವರಿ 1ರಿಂದ FASTag ಕಡ್ಡಾಯ : ಸ್ಥಳೀಯ ವಿನಾಯಿತಿಗೂ ಬೀಳುತ್ತಾ ಬರೆ : ಗುಂಡ್ಮಿಯಲ್ಲಿ ಹೋರಾಟದ ಎಚ್ಚರಿಕೆ

ಬ್ರಹ್ಮಾವರ : ಹೊಸ ವರ್ಷದ ಆರಂಭದಿಂದಲೇ ದೇಶದಾದ್ಯಂತ ಫಾಸ್ಟ್ಯಾಗ್ ಕಡ್ಡಾಯಗೊಳಿಸಲಾಗುತ್ತಿದೆ. ಕೇಂದ್ರ ಸರಕಾರದ ಹೊಸ ಆದೇಶದನ್ವಯ ವಾಹನ ಮಾಲೀಕರು ಫಾಸ್ಟ್ಯಾಗ್ ಮಾಡಿಸಲೇ ಬೇಕಾಗಿದೆ. ಹೊಸ ನಿಯಮದಿಂದಾಗಿ ಸ್ಥಳೀಯರಿಗೆ ನೀಡಲಾಗುತ್ತಿದ್ದ ಟೋಲ್ ವಿನಾಯಿತಿಗೆ ಬರೆ ಬೀಳುವ ಆತಂಕ ಎದುರಾಗಿದೆ.

ಕೇಂದ್ರ ಸರಕಾರ ಹೆದ್ದಾರಿಗಳಲ್ಲಿ ವಾಹನಗಳ ಸುಲಭ ಸಂಚಾರಕ್ಕೆ ಫಾಸ್ಟ್ಯಾಗ್ ಕಡ್ಡಾಯಗೊಳಿಸಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 31ರ ಒಳಗಾಗಿ ಪ್ರತೀ ವಾಹನ ಮಾಲೀಕರು ಕಡ್ಡಾಯವಾಗಿ ಫಾಸ್ಟ್ಯಾಗ್ ಮಾಡಿಸಬೇಕು. ಒಂದೊಮ್ಮೆ ಫಾಸ್ಟ್ಯಾಗ್ ಹೊಂದಿಲ್ಲದ ವಾಹನ ಮಾಲೀಕರಿಂದ ಜನವರಿ 1ರಿಂದ ದುಪ್ಪಟ್ಟು ಶುಲ್ಕವನ್ನು ವಸೂಲಿ ಮಾಡಲು ಟೋಲ್ ಗುತ್ತಿಗೆದಾರರು ಸಜ್ಜಾಗಿದ್ದಾರೆ.


ಇನ್ಮುಂದೆ ಟೋಲ್ ಗೇಟ್ ಗಳಲ್ಲಿ ಕ್ಯಾಶ್ ವ್ಯವಹಾರಕ್ಕೆ ಸಂಪೂರ್ಣವಾಗಿ ಬ್ರೇಕ್ ಬೀಳಲಿದೆ. ಕ್ಯಾಶ್ ಕೊಟ್ಟು ಸಂಚರಿಸಬೇಕಾದ್ರೆ ದುಪ್ಪಟ್ಟು ಶುಲ್ಕ ನೀಡಬೇಕು. ಅಷ್ಟೇ ಅಲ್ಲಾ ಒಂದೊಮ್ಮೆ ಫಾಸ್ಟ್ಯಾಗ್ ಹೊಂದಿದ್ದರೂ ಖಾತೆಯಲ್ಲಿ ಹಣ ಇಲ್ಲದೇ ಹೋದ್ರೂ ಕೂಡ ದುಪ್ಪಟ್ಟು ಹಣವನ್ನು ಪಾವತಿಸಲೇ ಬೇಕಾಗಿದೆ. ಸರಕಾರ ಹೊಸ ನಿಯಮವನ್ನೇ ಬಂಡವಾಳ ಮಾಡಿಕೊಂಡಿರುವ ಟೋಲ್ ಗುತ್ತಿಗೆ ದಾರರು ಸ್ಥಳೀಯ ವಾಹನಗಳಿಗೆ ವಿನಾಯಿತಿ ನಿರಾಕರಿಸಲಾಗುತ್ತದೆ ಅನ್ನೋ ಮಾತುಗಳು ಕೇಳಿಬರುತ್ತಿವೆ.

ಹೋರಾಟಕ್ಕೆ ಸಜ್ಜಾದ ಹೆದ್ದಾರಿ ಜಾಗೃತಿ ಸಮಿತಿ
ಕೇಂದ್ರ ಸರಕಾರ ಹೊಸ ಆದೇಶ ಹೊರಡಿಸುತ್ತಿದ್ದಂತೆಯೇ ಹೆದ್ದಾರಿ ಜಾಗೃತಿ ಸಮಿತಿ ಗುಂಡ್ಮಿಯಲ್ಲಿ ಟೋಲ್ ನಿರ್ವಹಣೆ ಮಾಡುತ್ತಿರುವ ನವಯುಗ ಕಂಪೆನಿಯ ಅಧಿಕಾರಿಗಳ ಮುಂದೆ ತಮ್ಮ ಬೇಡಿಕೆಯನ್ನು ಇಟ್ಟಿದ್ದಾರೆ. ಈ ಹಿಂದಿನಂತೆಯೇ ಮುಂದೆಯೂ ಕೂಡ ಸ್ಥಳೀಯರಿಗೆ ಟೋಲ್ ಶುಲ್ಕದಲ್ಲಿ ವಿನಾಯಿತಿಯನ್ನು ಕೋರಿದ್ದಾರೆ. ಆದರೆ ನವಯುಗ ಕಂಪೆನಿಯ ಸಿಬ್ಬಂದಿಗಳು ವಿನಾಯಿತಿ ನೀಡಲು ನಿರಾಕರಿಸಿದ್ದು, ಕಡ್ಡಾಯವಾಗಿ ಸ್ಥಳೀಯರು ಕೂಡ ಫಾಸ್ಟ್ಯಾಗ್ ಮಾಡಿಸಿಕೊಳ್ಳಲೇ ಬೇಕು ಅಂತಾ ತಿಳಿಸಿದ್ದಾರೆ.

ಈ ವೇಳೆಯಲ್ಲಿ ಹೆದ್ದಾರಿ ಜಾಗೃತಿ ಸಮಿತಿಯ ಸದಸ್ಯರು ಸ್ಥಳೀಯರಿಂದ ಟೋಲ್ ಸಂಗ್ರಹ ಮಾಡಿದ್ರೆ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ. ಅಲ್ಲದೇ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಭೆಯನ್ನು ಕರೆಯಬೇಕೆಂದು ಸೂಚಿಸಿದ್ದಾರೆ. ಇದರಿಂದ ಬೆದರಿದ ನವಯುಗ ಕಂಪೆನಿ ಡಿಸೆಂಬರ್ 28ರ ಸಂಜೆ 6 ಗಂಟೆಯ ಒಳಗಾಗಿ ತಮ್ಮ ನಿಲುವನ್ನು ತಿಳಿಸುವುದಾಗಿ ಹೇಳಿದೆ.

ಈ ಹಿಂದೆಯೂ ಸ್ಥಳೀಯರಿಂದ ನವಯುಗ ಕಂಪೆನಿ ಟೋಲ್ ಸಂಗ್ರಹಕ್ಕೆ ಮುಂದಾಗಿದ್ದ ವೇಳೆಯಲ್ಲಿಯೂ ಹೆದ್ದಾರಿ ಜಾಗೃತಿ ಸಮಿತಿ ಬೃಹತ್ ಹೋರಾಟವನ್ನು ನಡೆಸಿತ್ತು. ಅಲ್ಲದೇ ಸ್ಥಳೀಯ ಶಾಸಕರು, ಸಂಸದರು, ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿಯೇ ಸಭೆ ನಡೆದು, ಸ್ಥಳೀಯರಿಗೆ ಟೋಲ್ ವಿನಾಯಿತಿಯನ್ನು ನೀಡಲಾಗಿತ್ತು. ಒಂದೊಮ್ಮೆ ಸ್ಥಳೀಯರಿಂದ ಟೋಲ್ ಸಂಗ್ರಹಕ್ಕೆ ಮುಂದಾದ್ರೆ ಜನವರಿ 1ರಿಂದಲೇ ಉಗ್ರ ಹೋರಾಟ ನಡೆಸುವುದಾಗಿಯೂ ಹೆದ್ದಾರಿ ಜಾಗೃತಿ ಸಮಿತಿ ಎಚ್ಚರಿಸಿದೆ.

Comments are closed.