ಮೀನುಗಾರರಿಗೆ ಗುಡ್ ನ್ಯೂಸ್ : 2 ವಾರದಲ್ಲಿ ಮೀನುಗಾರರ ಖಾತೆಗೆ ಸಾಲಮನ್ನಾ ಮೊತ್ತ

0

ಬೆಂಗಳೂರು : ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕರಾವಳಿಯ ಮೀನುಗಾರರ ಸುಮಾರು 60 ಕೋಟಿ ರೂಪಾಯಿ ಸಾಲಮನ್ನಾ ಮಾಡಲಾಗಿತ್ತು.

ಮೀನುಗಾರಿಕೆ ನಡೆಸಲು ಸಾಲ ಪಡೆದಿದ್ದ ಮೀನುಗಾರರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ ಮೀನುಗಾರರ ಸಾಲಮನ್ನಾ ಘೋಷಣೆಯಾಗಿ ಒಂದು ವರ್ಷ ಕಳೆಯುತ್ತಾ ಬಂದಿದೆ. ಆದರೆ ಇದುವರೆಗೂ ರಾಜ್ಯ ಸರಕಾರ ಮೀನುಗಾರರ ಸಾಲಮನ್ನಾದ ಹಣವನ್ನು ಬಿಡುಗಡೆ ಮಾಡಿಲ್ಲ.

ರಾಜ್ಯ ಸರಕಾರ ಮೀನುಗಾರರ ಸಾಲಮನ್ನಾ ಘೋಷಣೆಯಾಗಿದ್ದರೂ ಕೂಡ, ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಮೀನುಗಾರರ ಸಹಕಾರಿ ಸಂಘಗಳು ಮಹಿಳೆಯರಲ್ಲಿ ಸಾಲ ಮೊತ್ತವನ್ನು ಪಾವತಿ ಮಾಡುವಂತೆ ಪಟ್ಟು ಹಿಡಿದಿದ್ದರು. ಹೀಗಾಗಿ ಹಲವರು ಮಹಿಳೆಯರು ಬ್ಯಾಂಕಿನವರ ಒತ್ತಡಕ್ಕೆ ಮಣಿದು ಸಾಲದ ಬಾಕಿ ಹಣವನ್ನು ಪಾವತಿ ಮಾಡಿದ್ದಾರೆ. ಸಾಕಷ್ಟು ಗೊಂದಲಗಳ ನಡುವಲ್ಲಿಯೇ ರಾಜ್ಯ ಸರಕಾರ ಇದೀಗ ಮೀನುಗಾರರ ಸಾಲಮನ್ನಾ ಹಣ ಬಿಡುಗಡೆ ಮಾಡಲು ಮುಂದಾಗಿದೆ.

ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ರಾಜ್ಯದ 23,000 ಮೀನುಗಾರ ಮಹಿಳಾ ಫಲಾನುಭವಿಗಳ ಸುಮಾರು 60 ಕೋಟಿ ರೂಪಾಯಿ ಸಾಲಮನ್ನಾ ಯೋಜನೆಯ ಬಗ್ಗೆ ಚರ್ಚೆ ನಡೆಸಲಾಯಿತು. ಸಾಲಮನ್ನಾ ಯೋಜನೆಯಡಿಯಲ್ಲಿ ಈಗಾಗಾಲೇ ಕಂದಾಯ ಇಲಾಖೆಯ ಭೂಮಿ ಸಾಫ್ಟ್ ವೇರ್ ಮೂಲಕ ಫಲಾನುಭವಿಗಳ ಖಾತೆಗೆ ಹಣ ವರ್ಗಾಯಿಸಲು ಆರ್ಥಿಕ ಇಲಾಖೆಗೆ ಸೂಚನೆ ನೀಡಲಾಗಿದ್ದು, ಸಾಲಗರರ ಖಾತೆಗೆ ಹಣ ವರ್ಗಾಯಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಹೀಗಾಗಿ ಒಂದೆರಡು ವಾರಗಳ ಒಳಗಾಗಿ ಸಾಲಮನ್ನಾ ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave A Reply

Your email address will not be published.